ಕರ್ನಾಟಕ

ಅರ್ಚಕರಿಂದ ಮತ ಯಾಚನೆಗೆ ಬಿಜೆಪಿಯಿಂದ ಕಾರ್ಯತಂತ್ರ?

Pinterest LinkedIn Tumblr


ಹುಬ್ಬಳ್ಳಿ: ಇನ್ನು ಮುಂದೆ ದೇವಸ್ಥಾನಗಳಿಗೆ ಹೋದಾಗ ಅರ್ಚಕರು ಕೈಗೆ ಪ್ರಸಾದದ ಜೊತೆಗೆ ಕಮಲದ ಹೂವು ಕೊಟ್ಟರೆ ಆಶ್ಚರ್ಯಪಡಬೇಕಿಲ್ಲ. ಯಾಕಂದ್ರೆ ಧಾರವಾಡ ಜಿಲ್ಲಾ ಬಿಜೆಪಿ ಘಟಕ ಈಗ ಅರ್ಚಕರ ಮೂಲಕ ಪಕ್ಷದ ಪ್ರಚಾರಕ್ಕೆ ಕಾರ್ಯತಂತ್ರ ರೂಪಿಸಿದೆ. ಬಿಜೆಪಿಗೆ ಹಿಂದೂಗಳ ಮತ ಸೆಳೆಯಲು ಅರ್ಚಕರ ಮೂಲಕ ಸ್ಕೆಚ್‌ ಹಾಕಲಾಗಿದೆ. ಬಿಜೆಪಿಯಿಂದ ಲೋಕಸಭಾ ಚುನಾವಣೆ ತಯಾರಿಗಾಗಿ ಒಟ್ಟು 23 ಕಾರ್ಯಸೂಚಿಗಳನ್ನು ಸಿದ್ಧಪಡಿಸಿ ಕಾರ್ಯಕರ್ತರಿಗೆ ಕೊಡಲಾಗಿದೆ. ಅದರಲ್ಲಿ ಪ್ರತಿ ಬೂತ್‌ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳ ಅರ್ಚಕರ ಮನವೊಲಿಸಬೇಕು ಎಂದು ಸೂಚಿಸಲಾಗಿದೆ. ಅರ್ಚಕರ ಜೊತೆಗೆ ದೇವಸ್ಥಾನಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಸಾಧು- ಸಂತರ ನಿರಂತರ ಸಂಪರ್ಕದಲ್ಲಿ ಇರಬೇಕು ಎಂದು ತಿಳಿಸಲಾಗಿದೆ. ಬಿಜೆಪಿಯವರು ಮತಕ್ಕಾಗಿ ದೇವಸ್ಥಾನಗಳ ಪಾವಿತ್ರ್ಯತೆ ಕೆಡಿಸುತ್ತಿದ್ದಾರೆ ಎಂದು ವಿಪಕ್ಷಗಳು ಟೀಕಿಸಿವೆ.

ಬಿಜೆಪಿ ಲೋಕಸಭಾ ಚುನಾವಣೆಗೆ ಸಿದ್ಧಪಡಿಸಿರುವ 23 ಕಾರ್ಯಸೂಚಿಗಳ ವಿವರಣೆ ಇರುವ ಕರಪತ್ರಗಳು ಈಗಾಗಲೇ ಮತದಾರರ ಮನೆಮನೆಗಳನ್ನು ತಲುಪುತ್ತಿವೆ. ಚುನಾವಣೆಗೆ ಆರು ತಿಂಗಳು ಇರುವಾಗಲೇ ಧಾರವಾಡ ಜಿಲ್ಲಾ ಬಿಜೆಪಿ ಘಟಕ ಭರ್ಜರಿ ರಣತಂತ್ರ ರೂಪಿಸಿ ಕಾರ್ಯಾಚರಣೆಗೆ ಇಳಿದಿದೆ. ಈಗಾಗಲೇ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಸಂಸದ ಪ್ರಲ್ಹಾದ್ ಜೋಶಿ ನಾಲ್ಕನೆಯ ಬಾರಿ ಗೆದ್ದು ಲೋಕಸಭೆ ಪ್ರವೇಶಿಸಲು ಸಿದ್ಧತೆ ಜೋರಾಗಿಯೇ ನಡೆಸಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ದೇವಸ್ಥಾನಗಳಿಗೆ ತೆರಳುವ ಪ್ರಲ್ಹಾದ್ ಜೋಶಿಯವರು ಈಗ ಕಾರ್ಯಕರ್ತರಿಗೂ ದೇವಸ್ಥಾನಗಳು ಮತ್ತು ಅರ್ಚಕರ ಮಹತ್ವದ ಕುರಿತು ಕಿವಿಮಾತು ಹೇಳುತ್ತಿದ್ದಾರೆನ್ನಲಾಗಿದೆ. ಆದರೆ ಪ್ರಲ್ಹಾದ್ ಜೋಶಿಯವರು ತಮ್ಮ ರಣತಂತ್ರವನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ. ಅರ್ಚಕರ ಮೂಲಕ ಭಕ್ತರ ಮತ ಕೇಳುತ್ತಿಲ್ಲ. ಆಪರೇಷನ್‌ ಏನೂ ಇಲ್ಲ. ಕ್ಷೇತ್ರದಲ್ಲಿ ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎನ್ನುವ ಹಾರಿಕೆ ಉತ್ತರವನ್ನು ಸಂಸದರು ಕೊಡುತ್ತಿದ್ದಾರೆ.

ಸಂಸದರು ಏನೇ ಹೇಳಿದರೂ ಕರಪತ್ರಗಳು ಮಾತ್ರ ಬಿಜೆಪಿಯ ಕಾರ್ಯತಂತ್ರವನ್ನು ಸ್ಪಷ್ಟಪಡಿಸುತ್ತಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಧಾರ್ಮಿಕ ಸ್ಥಳಗಳಲ್ಲಿ ಮತಯಾಚನೆ ಮಾಡುವ ಹಾಗಿಲ್ಲ. ಹೀಗಾಗಿ ದೇವಸ್ಥಾನದೊಳಗಿರುವ ಅರ್ಚಕರಿಂದಲೇ ಭಕ್ತರ ಮೇಲೆ ಪ್ರಭಾವ ಬೀರಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರ. ಒಟ್ಟಾರೆ ಬಿಜೆಪಿಯ ಚುನಾವಣಾ ರಣತಂತ್ರ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವುದಂತೂ ಹೌದು.

Comments are closed.