ಕರಾವಳಿ

ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಅವ್ಯವಸ್ಥೆ ಖಂಡಿಸಿ ಹಾಗೂ ಶೀಘ್ರ ನಿರ್ಮಾಣಕ್ಕೆ ಆಗ್ರಹಿಸಿ ವಿವಿಧ ಸಂಘ-ಸಂಸ್ಥೆಗಳಿಂದ ಸಾಮೂಹಿಕ ಧರಣಿ

Pinterest LinkedIn Tumblr

ಮಂಗಳೂರು, ಅಕ್ಟೋಬರ್.09: ನಗರದ ಪಂಪ್‌ವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು, ಹೆದ್ದಾರಿ ಅವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಸರ್ವಿಸ್ ರಸ್ತೆಗಳ ನಿರ್ಮಾಣ , ನಂತೂರು ಮೇಲ್ಸೇತುವೆ ನಿರ್ಮಿಸಬೇಕೆಂಬ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪಂಪ್‌ವೆಲ್ ಮೇಲ್ಸೇತುವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಪಂಪ್‌ವೆಲ್ ಜಂಕ್ಷನ್‌ನಲ್ಲಿ ಸಾಮೂಹಿಕ ಧರಣಿಯನ್ನು ನಡೆಸಲಾಯಿತು.

ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಸುಮಾರು 250ಕ್ಕೂ ಮಿಕ್ಕಿದ ಪ್ರಮುಖ ಮುಖಂಡರು ಭಾಗವಹಿಸಿದ ಈ ಧರಣಿಯಲ್ಲಿ, ಪಂಪ್‌ವೆಲ್ ಮೇಲ್ಸೇತುವೆ ರಚನೆಯಾಗಲೇ ಬೇಕು, ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಧಿಕ್ಕಾರ, ಜನರ ಬದುಕಿನಲ್ಲಿ ಚೆಲ್ಲಾಟವಾಡುವ ನವಯುಗ ಕಂಪೆನಿಗೆ ಧಿಕ್ಕಾರ, ಮಾತಿನ ಮಲ್ಲ ಸಂಸದರಿಗೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಯಿತು.

ಧರಣಿಯನ್ನು ಉದ್ದೇಶಿಸಿ ಡಿವೈ‌ಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳರವರು ಮಾತನಾಡುತ್ತಾ, ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿತನ, ಗುತ್ತಿಗೆ ಕಂಪೆನಿಗಳ ಕಳಪೆ ನಿರ್ವಹಣೆ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಂಪ್‌ವೆಲ್ ಮೇಲ್ಸೇತುವೆ ಕಳೆದ ೮ ವರುಷಗಳಿಂದ ಕುಂಟುತ್ತಾ ಸಾಗುವ ಮೂಲಕ ಇನ್ನೂ ಮುಕ್ತಿ ಕಾಣುತ್ತಿಲ್ಲ. ಇದರ ಹಿಂದೆ ಆರ್ಥಿಕ ಹಿತಾಸಕ್ತಿ ಇದೆಯೇ ಹೊರತು ಜನರ ಹಿತಾಸಕ್ತಿ ಕಾಣುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಥಳಿಯ ಸಂಸದರು ಹಾಗೂ ನವಯುಗ ಕಂಪೆನಿಯ ಒಟ್ಟು ಸೇರುವಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದಿದೆ. ನಗರದ ಸುಂದರತೆ ಮುಕುಟವಂತಿದ್ದ ಪಂಪ್‌ವೆಲ್ ಸರ್ಕಲ್ ಇಂದು ಯುದ್ಧಪೀಡಿತ ಪ್ರದೇಶವಾಗಿದೆ. ಈ ಬಾರಿಯ ಮಂಗಳೂರು ದಸರಾದಲ್ಲಿ ಪಂಪ್‌ವೆಲ್ ಮೇಲ್ಸೇತುವೆ ವಿಶೇಷ ಆಕರ್ಷಣೆಯಾಗಲಿದೆ. ಎಲ್ಲರೂ ಸೆಲ್ಫಿ ಅಭಿಯಾನ ನಡೆಸುವ ಮೂಲಕ ಜನಾಂದೋಲನ ಮೂಡಿಸಲು ಮುಂದಾಗಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಂಪ್‌ವೆಲ್ ಮೇಲ್ಸೇತುವೆ ಹೋರಾಟ ಸಮಿತಿಯ ಸಂಚಾಲಕರಾದ ಸುನೀಲ್‌ಕುಮಾರ್ ಬಜಾಲ್‌ರವರು, ಮಂಗಳೂರಿನ ಹೃದಯಭಾಗದಲ್ಲಿ ಹೆಬ್ಬಾಗಿಲಿನಂತಿದ್ದ ಪಂಪ್‌ವೆಲ್ ಸರ್ಕಲ್ ಇಂದು ಮೇಲ್ಸೇತುವೆ ನಿರ್ಮಾಣ ಕಾರ್ಯದಿಂದಾಗಿ ಪಾಳು ಬಿದ್ದಿದೆ. ಕಳೆದ ೮ ವರ್ಷಗಳಿಂದ ನೆನೆಗುದಿಗೆ ಬಿದ್ದಿದ ಕಾಮಗಾರಿಯಿಂದಾಗಿ ಅನೇಕ ಜೀವಗಳು ಬಲಿಯಾಗಿದೆ. ಅಪಘಾತದಿಂದಾಗಿ ಅನೇಕ ಅಮಾಯಕರು ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ. ಟ್ರಾಫಿಕ್ ಜಾಮ್ ಎಂಬುದು ಇಲ್ಲಿನ ದಿನನಿತ್ಯದ ಗೋಳಾಗಿದೆ. ಇವೆಲ್ಲದಕ್ಕೆ ಕಾರಣಕರ್ತರಾದ ನವಯುಗ ಕಂಪೆನಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ನಿಜವಾದ ಕೊಲೆಗಡುಕರು. ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಲ್ಲಿ ಮಂಗಳೂರಿನ ಜನತೆ ಮುಂದಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಬಲಿಷ್ಠ ಚಳುವಳಿಯನ್ನು ರೂಪಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಕ್ರಮಗಳನ್ನು ಬಯಲಿಗೆಳೆಯಬೇಕಾಗಿದೆ ಎಂದು ಹೇಳಿದರು.

ಧರಣಿಯನ್ನು ಉದ್ದೇಶಿಸಿ ಡಿವೈ‌ಎಫ್‌ಐ ನಾಯಕರಾದ ಬಿ.ಕೆ. ಇಮ್ತಿಯಾಜ್, ಸಂತೋಷ್ ಕುಮಾರ್ ಬಜಾಲ್, ಟೂರಿಸ್ಟ್ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷರಾದ ದಿನೇಶ್ ಕುಂಪಲ, ಕಾರ್ಪೊರೇಟರ್‌ಗಳಾದ ಪ್ರವೀಣ್ ಚಂದ್ರ ಆಳ್ವ, ರೇವತಿ ಪುತ್ರನ್, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ದಿಲ್‌ರಾಜ್ ಆಳ್ವ, ಸಾಮಾಜಿಕ ಹೋರಾಟಗಾರರಾದ ಎಂ.ಜಿ. ಹೆಗ್ಡೆ, ಹನುಮಂತ ಕಾಮತ್, ಆಲಿ ಹಸನ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಸಾಲಿಯಾನ್‌ ಮುಂತಾದವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಗೂ ನವಯುಗ ಕಂಪೆನಿಯ ಅಕ್ರಮಗಳನ್ನು ಎಳೆ‌ಎಳೆಯಾಗಿ ಬಿಡಿಸಿ ಹೇಳುತ್ತಾ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯು ಆಮೆವೇಗದಲ್ಲಿ ನಡೆದರೆ, ಜನಚಳುವಳಿಯನ್ನು ಶರವೇಗದಲ್ಲಿ ನಡೆಸುವ ಮೂಲಕ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಉಪಮೇಯರ್‌ರವರಾದ ಪುರುಷೋತ್ತಮ ಚಿತ್ರಾಪುರರವರು ಧರಣಿಯನ್ನು ಸಮಾರೋಪಗೊಳಿಸುತ್ತಾ ಅಭಿವೃದ್ಧಿಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಕೇಂದ್ರ ಸರಕಾರ, ದ.ಕ. ಜಿಲ್ಲೆಗೆ ಸರಿಯಾದ ರಾಷ್ಟ್ರೀಯ ಹೆದ್ದಾರಿ ವ್ಯವಸ್ಥೆಯನ್ನು ಮಾಡಿಲ್ಲ. ಹೆದ್ದಾರಿಯುದ್ದಕ್ಕೂ ತೀರಾ ಅವ್ಯವಸ್ಥೆಯಿಂದಾಗಿ ಕೂಡಿದ್ದು ಅದನ್ನು ಸರಿಪಡಿಸುವ ಕನಿಷ್ಠ ಜವಾಬ್ದಾರಿಯು ಇಲ್ಲಿನ ಸಂಸದರಿಗಿಲ್ಲ. ಆದ್ದರಿಂದ ಜನತೆಯ ಹೋರಾಟಗಳು ಬಲಗೊಳ್ಳಬೇಕೆಂದು ಆಶಯ ವ್ಯಕ್ತಪಡಿಸಿದರು.

ಧರಣಿಯಲ್ಲಿ ಟೂರಿಸ್ಟ್ ಚಾಲಕರ ಸಂಘದ ಆನಂದ, ಆನ್‌ಲೈನ್ ಟ್ಯಾಕ್ಸಿ ಚಾಲಕರ ಸಂಘದ ಸತ್ಯೇಂದ್ರ ಶೆಟ್ಟಿ, ಸಾದಿಕ್ ಕಣ್ಣೂರು, ಆಟೋ ರಿಕ್ಷಾ ಚಾಲಕರ ಸಂಘದ ಅನ್ಸಾರ್, ಕೃಷ್ಣಪ್ಪ ಗೌಡ, ಚಂದ್ರಹಾಸ್ ಕುಲಾಲ್, ದಲಿತ ಸಂಘಟನೆಯ ಕಮಲಾಕ್ಷ ಜಲ್ಲಿಗುಡ್ಡೆ, ಸಾಮಾಜಿಕ ಕಾರ್ಯಕರ್ತರಾದ ಡೋಲ್ಫಿ ಡಿ’ಸೋಜ, ಸಿಪ್ರಿಯನ್ ಪಡೀಲ್, ಯುವವಾಹಿನಿ ಸಂಘಟನೆಯ ಹರೀಶ್ ಪೂಜಾರಿ, ಮೋಹನ್‌ದಾಸ್ ನಾಗುರಿ, ರಾಮಚಂದ್ರ ಪೂಜಾರಿ, ಕರ್ಮಾರ್ ಮಹಾದೇವಿ ಭಜನಾ ಮಂದಿರದ ಮೋಹನ್ ಕೊಟ್ಟಾರಿ, ಸುಧಾಕರ ಅಮೀನ್, ಸುಧೀರ್, ಸತ್ಯನಾರಾಯಣ ಭಜನಾ ಮಂದಿರದ ರಮೇಶ್ ಬಜಾಲ್, ಕಟ್ಟಡ ಕಾರ್ಮಿಕರ ಸಂಘಟನೆಯ ಯೋಗೀಶ್ ಜಪ್ಪಿನಮೊಗರು, ದಿನೇಶ್ ಶೆಟ್ಟಿ, ಲೋಕೇಶ್ ಎಂ., ಜಿಲ್ಲಾ ಮಹಿಳಾ ಮುಖಂಡರಾದ ಜಯಂತಿ ಶೆಟ್ಟಿ, ಶೋಭಾ ಕೇಶವ್, ಸುಜಾತ ಸುವರ್ಣ, ಭಾರತಿ ಬೋಳಾರ್, ಡಿವೈ‌ಎಫ್‌ಐ ನಾಯಕರಾದ ನವೀನ್ ಕೊಂಚಾಡಿ, ಶ್ರೀನಾಥ್ ಕಾಟಿಪಳ್ಳ, ರಿತೇಶ್ ಬಜಾಲ್, ವರಪ್ರಸಾದ್, ಎಸ್‌ಎಫ್‌ಐ ನಾಯಕರಾದ ಮಾಧುರಿ ಬೋಳಾರ್, ಸಾಮಾಜಿಕ ಚಿಂತಕರಾದ ಹರೀಶ್ಚಂದ್ರ ರಾವ್, ಶ್ಯಾಮ್‌ಸುಂದರ್, ವಾಸುದೇವ ಉಚ್ಚಿಲ್, ಜನತಾ ವ್ಯಾಯಾಮ ಶಾಲೆಯ ಸುರೇಶ್ ಬಜಾಲ್, ದೀಪಕ್ ಬಜಾಲ್, ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಉದಯಚಂದ್ರ ರೈ, ಕಂಕನಾಡಿ ಯುವಕ ವೃಂದದ ಹೇಮಂತ್ ಗರೋಡಿ, ರಕ್ಷಣಾ ವೇದಿಕೆಯ ರಾಜೇಶ್ ವೀರನಗರ, ಕಂಕನಾಡಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ವಸಂತ ಟೈಲರ್, ರೋಶನ್ ಪತ್ರಾವೋ, ಮಹಮ್ಮದ್ ಸಾಲಿ, ಬಂದರು ಶ್ರಮಿಕ ಸಂಘದ ಹರೀಶ್, ಲಾರಿ ಮಾಲಕರ ಸಂಘದ ಮೂಸಬ್ಬ, ಬಸ್‌ಮಾಲಕರ ಸಂಘದ ಜಯಂತ್ ಬಜಾಲ್, ಜೆ. ಶಶಿಧರ ಶೆಟ್ಟಿ, ಮಾಜಿ ವಿದ್ಯಾರ್ಥಿ ನಾಯಕರಾದ ಸ್ಟೀವನ್ ವಾಸ್, ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಮೋಹನ್ ಅತ್ತಾವರ ಮುಂತಾದವರು ಉಪಸ್ಥಿತರಿದ್ದರು.

Comments are closed.