ಕರಾವಳಿ

ನವರಾತ್ರಿ ಹೆಸರಲ್ಲಿ ಹಾಕಿದ ಫ್ಲೆಕ್ಸ್,ಬ್ಯಾನರ್ ತೆಗೆಯದಂತೆ ಸಚಿವ ಖಾದರ್ ಸೂಚನೆ

Pinterest LinkedIn Tumblr

ಮಂಗಳೂರು: ನವರರಾತ್ರಿ ಮಹೋತ್ಸವ ಹಿನ್ನೆಲೆಯಲ್ಲಿ ಮಂಗಳೂರು ದಸರಾ ಮಹೋತ್ಸವಕ್ಕೆ ಶುಭಾ ಕೋರಿ ಮಂಗಳೂರಿನಾದ್ಯಂತ ಬ್ಯಾನರ್ ಮತ್ತು ಫ್ಲೆಕ್ಸ್‌ಗಳ ರಾರಾಜಿಸುತ್ತಿದ್ದು, ಅದರಲ್ಲೂ ಕುದ್ರೋಳಿಯಿಂದ ಲೇಡಿಹಿಲ್ ವರೆಗೆ ಹಾಗೂ ಲಾಲ್‌ಭಾಗ್‌ನಿಂದ ಪಿವಿ‌ಎಸ್ ಸರ್ಕಲ್ ವರೆಗೆ ಅತೀ ಹೆಚ್ಚು ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಅಳವಡಿಸಿರುವುದರಿಂದ ಇದು ಮನಪಾದ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಎಲ್ಲಾ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಕೂಡಲೇ ತೆರವುಗೊಳಿಸುವಂತೆ ಮನಪಾ ಕಮಿಷನರ್ ಅದೇಶ ಹೊರಡಿಸಿದ್ದರು.

ನಗರದಲ್ಲಿ ಯಾವೂದೇ ಅನುಮತಿ ಇಲ್ಲದೇ ಕಾನೂನು ಬಾಹಿರವಾಗಿ ಅಳವಡಿಸಲಾಗಿರುವ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಒಂದು ದಿನದ ಕಾಲಾವಕಾಶನೀಡಿದ್ದು, ತೆರವುಗೊಳಿಸದಿದ್ದರೆ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು.

ಆದರೆ ಇದಕ್ಕೆ ಸಡ್ಡುಹೊಡೆದಿರುವ ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು, ನವರರಾತ್ರಿ ಮಹೋತ್ಸವ ಹಿನ್ನೆಲೆಯಲ್ಲಿ ಮಂಗಳೂರು ದಸರಾ ಮಹೋತ್ಸವಕ್ಕೆ ಶುಭಾ ಕೋರಿ ನಗರದಲ್ಲಿ ಅಳವಡಿಸಲಾಗಿರುವ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನವರಾತ್ರಿ ಸಂಭ್ರಮದ ಹಿನ್ನೆಲೆಯಲ್ಲಿ ನಗರದಾದ್ಯಂತ ರಾರಾಜಿಸುತ್ತಿರುವ ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ಯಾವುದೇ ಕಾರಣಕ್ಕೂ ಕಿತ್ತು ಹಾಕದಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನಾನೇ ಸೂಚನೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಕಾನೂನಿನ ಪ್ರಕಾರ ಎಲ್ಲಾ ಫ್ಲೆಕ್ಸ್ ಗಳನ್ನ ತೆಗೆಯಲು ಪಾಲಿಕೆ ಆಯುಕ್ತರು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದ್ದರು. ಆದ್ರೆ ನಾನೇ ಸ್ವತಃ ಪಾಲಿಕೆ ಆಯುಕ್ತರಿಗೆ ಈ ಬಗ್ಗೆ ಖಡಕ್ ಸೂಚನೆ ನೀಡಿದ್ದೇನೆ. ನವರಾತ್ರಿ ಹೆಸರಲ್ಲಿ ಹಾಕಿದ ಬ್ಯಾನರ್, ಫ್ಲೆಕ್ಸ್ ತೆಗೆಯಬೇಡಿ ಅಂದಿದ್ದೇನೆ. ದಸಾರಾ ಸಮಯದಲ್ಲಿ ಯಾರಿಗೂ ಕಿರುಕುಳ ಮಾಡಬೇಡಿ ಎಂದು ಖಡಕ್ ಆಗಿ ಹೇಳಿದ್ದೇನೆ ಎಂದು ಹೇಳಿದ್ದಾರೆ.

ಬೇಕಾದ್ರೆ ರಾಜಕಾರಣಿಗಳಿಗೆ ಸಂಬಂಧಪಟ್ಟ (ನಮ್ಮದೆಲ್ಲ) ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ತೆಗೆಯಿರಿ, ಹಬ್ಬದ ವಿಚಾರದಲ್ಲಿ ಹಾಕಿರೋದು ಬೇಡ ಅಂದಿದ್ದೇನೆ ಎಂದು ಖಾದರ್ ತಿಳಿಸಿದ್ದಾರೆ.

Comments are closed.