ಕರಾವಳಿ

ವೈಭವದ ಮಂಗಳೂರು ದಸರಾ’ಮಹೋತ್ಸವಕ್ಕೆ ವಿದ್ಯುತ್‌ ದೀಪಗಳಿಂದ ಸಿಂಗಾರಗೊಂಡಿರುವ ಮಂಗಳೂರು

Pinterest LinkedIn Tumblr

ಮಂಗಳೂರು,ಆಕ್ಟೋಬರ್.09: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಾಳೆಯಿಂದ ನವರಾತ್ರಿ ಉತ್ಸವ ಮತ್ತು ‘ಮಂಗಳೂರು ದಸರಾ’ ಮಹೋತ್ಸವ ಸಂಭ್ರಮ. ಈ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಸುಣ್ಣಬಣ್ಣದ ಸಿಂಗಾರ, ವಿದ್ಯುತ್‌ ದೀಪಗಳ ಅಲಂಕಾರ ಮತ್ತಿತರ ಸಿದ್ಧತೆಗಳು ಭರದಿಂದ ಸಾಗಿವೆ.

ಮಂಗಳೂರು ದಸರಾ ಹಿನ್ನೆಲೆಯಲ್ಲಿ ಈಗಾಗಲೇ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರವನ್ನು ವಿಧ್ಯುದ್ದೀಪಗಳಿಂದ ಶೃಂಗರಿಸಲಾಗಿದೆ. ಮಾತ್ರವಲ್ಲದೇ ದಸರಾ ಮಹೋತ್ಸವಕ್ಕೆ ಇಡೀ ಮಂಗಳೂರು ಸಜ್ಜಾಗುತ್ತಿದ್ದು, ನಗರದ ಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದೆ.

ನಾಳೆ ನವದುರ್ಗೆಯರ ಸಹಿತ ಶಾರದಾ ಮಾತೆಯ ಪ್ರತಿಷ್ಟಾಪನೆ :

ಅ.10 ರಿಂದ 20ರವರೆಗೆ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದಿಂದ ನಡೆಯುವ ದಸರಾ ಮಹೋತ್ಸವದಲ್ಲಿ ಮಹಾಗಣಪತಿ, ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಟಾಪನೆಯು ಜನಾಕರ್ಷಣೆಯ ಕೇಂದ್ರ ಬಿಂದುವಾಗಲಿದೆ.

ನಾಳೆ (ಅ.10ರಂದು) ಬೆಳಗ್ಗೆ 8:30ಕ್ಕೆ ಗುರು ಪ್ರಾರ್ಥನೆಯೊಂದಿಗೆ ನವರಾತ್ರಿ ಮಹೋತ್ಸವ ಪ್ರಾರಂಭಗೊಳ್ಳಲಿದೆ. ಅಂದು ಬೆಳಗ್ಗೆ 11:50ಕ್ಕೆ ಮಹಾಗಣಪತಿ, ನವದುರ್ಗೆಯರ ಸಹಿತ ಶಾರದಾ ಮಾತೆಯ ಪ್ರತಿಷ್ಟಾಪನೆ ನಡೆಯಲಿದೆ. ನವರಾತ್ರಿ ಮಹೋತ್ಸವಕ್ಕೆ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್.ಚಾಲನೆ ನೀಡಲಿರುವರು.

ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಂದ ಉದ್ಘಾಟನೆ:

ಅ.14ರಂದು ಸಂಜೆ 6ಗಂಟೆಗೆ ‘ಮಂಗಳೂರು ದಸರಾ’ವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ಎಲ್‌.ಭೋಜೇಗೌಡ, ಹರೀಶ್‌ ಕುಮಾರ್, ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಭಾಸ್ಕರ್‌, ಮಾಜಿ ಶಾಸಕ ಜೆ.ಆರ್‌. ಲೋಬೊ ಸೇರಿದಂತೆ ಸಚಿವರು, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಲಕ್ಷಾಂತರ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ಅ.19ರಂದು ಸಂಜೆ 4 ಗಂಟೆಗೆ ಶೋಭಾಯಾತ್ರೆ ;

ಅ.19ರಂದು ಸಂಜೆ 4 ಗಂಟೆಗೆ ‘ಮಂಗಳೂರು ದಸರಾ’ದ ಶಾರದಾ ಮಾತೆಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಮೆರವಣಿಗೆಯಲ್ಲಿ ಹುಲಿವೇಷ ತಂಡಗಳು, 75ಕ್ಕೂ ಅಧಿಕ ಸ್ತಬ್ಧಚಿತ್ರಗಳು ಮೆರುಗು ನೀಡಲಿವೆ‌. ಅಲ್ಲದೆ ಕಂಸಾಳೆ, ಗೊಂಬೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಚಂಡೆ ಮುಂತಾದ ನೂರಕ್ಕೂ ಅಧಿಕ ಕಲಾತಂಡಗಳು ಮೆರವಣಿಯಲ್ಲಿ ಪ್ರದರ್ಶನ ನೀಡಲಿವೆ.

ನವರಾತ್ರಿ ಮಹೋತ್ಸವ ಹಾಗೂ ಮಂಗಳೂರು ದಸರಾ ಮಹೋತ್ಸವದ ಯಶಸ್ಸಿಗೆ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಜೊತೆ.ಆಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾದಿಕಾರಿ ಪದ್ಮರಾಜ್‌ ಆರ್‌.(ಅಡ್ವಕೇಟ್), ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಮುಂಬಾಯಿ ಬಿಲ್ಲವ ಸಂಘದ ಮುಖಂಡ ಜಯ ಸಿ.ಸುವರ್ಣ, ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸಹ ಅಧ್ಯಕ್ಷೆ ಉರ್ಮಿಳಾ ರಮೇಶ್‌ ಕುಮಾರ್, ಸದಸ್ಯರಾದ ಬಿ.ಕೆ. ತಾರನಾಥ್‌, ರವಿಶಂಕರ್‌ ಮಿಜಾರ್, ಕೆ. ಮಹೇಶ್ಚಂದ್ರ, ದೇವೇಂದ್ರ ಪೂಜಾರಿ, ಪಿ.ಕೆ. ಲೋಹಿತ್‌ ಪೂಜಾರಿ, ಎಂ. ಶೇಖರ ಪೂಜಾರಿ, ಡಾ.ಬಿ.ಜಿ.ಸುವರ್ಣ, ಚಿತ್ತರಂಜನ್‌ ಗರೋಡಿ, ಡಿ.ಡಿ. ಕಟ್ಟೆಮಾರ್‌, ಡಾ.ಅನಸೂಯ ಬಿ.ಟಿ. ಸಾಲ್ಯಾನ್‌ ಸೇರಿದಂತೆ ಇನ್ನೂ ಹಲವಾರು  ಪ್ರಮುಖರು ಸಾಥ್ ನೀಡಿದ್ದಾರೆ.

Comments are closed.