ಮನೋರಂಜನೆ

ಲೈಂಗಿಕ ಕಿರುಕುಳ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ನಟಿ ರಮ್ಯಾ?

Pinterest LinkedIn Tumblr


ನವದೆಹಲಿ: ಕಾಂಗ್ರೆಸ್​ನ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ ಈ ಹಿಂದೆ ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ದೆಹಲಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ಆರೋಪಿ ಚಿರಾಗ್​ ಪಟ್ನಾಯಕ್​ರನ್ನು ಬಂಧಿಸಲಾಗಿತ್ತು.

ಇದೀಗ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು ದೆಹಲಿಯ ಪಟಿಯಾಲ ಕೋರ್ಟಿನಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ಟೈಮ್ಸ್​ ನೌನ ವೆಬ್​ಸೈಟ್​ ವರದಿ ಮಾಡಿದೆ. ವರದಿಯ ಅನ್ವಯ ದೋಷಾರೋಪ ಪಟ್ಟಿಯಲ್ಲಿ ದಿವ್ಯ ಸ್ಪಂದನ ಅಕಾ ರಮ್ಯಾ ಅವರ ಹೆಸರೂ ಒಳಗೊಂಡಿದೆ ಎನ್ನಲಾಗಿದೆ.

ವರದಿಯಲ್ಲಿ ಉಲ್ಲೇಖಿಸಿರುವಂತೆ ಸಂತ್ರಸ್ತ ಯುವತಿ ಲೈಂಗಿಕ ಕಿರುಕುಳದ ಬಗ್ಗೆ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರಿಗೆ ದೂರು ನೀಡಿದ್ದರೂ ಅವರು ಪ್ರತಿಕ್ರಿಯೆ ನೀಡಲಿಲ್ಲ ಎನ್ನಲಾಗಿದೆ. ದೂರುದಾರೆ ನೀಡಿರುವ ಹೇಳಿಕೆಯನ್ನು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದ್ದು, ರಮ್ಯಾ ಅವರು ಸಂತ್ರಸ್ತೆಯ ದೂರನ್ನು ಕಿವಿಗೇ ಹಾಕಿಕೊಳ್ಳಲಿಲ್ಲ, ಅಹಂಕಾರದಿಂದ ನಡೆದುಕೊಂಡರು ಎನ್ನಲಾಗಿದೆ.

ಜತೆಗೆ ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿ ಮತ್ತು ಎಐಸಿಸಿ ಕುಂದು ಕೊರತೆಗಳ ವಿಭಾಗಕ್ಕೂ ಸಂತ್ರಸ್ತೆ ದೂರು ನೀಡಿರುವುದಾಗಿ ಹೇಳಿದ್ದಾರೆ. ಆದರೆ ದೂರಿಗೆ ರಾಹುಲ್​ ಗಾಂಧಿಯವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಲಾಗಿದೆ.

ನ್ಯಾಯಾಲಯ ದೋಷಾರೋಪ ಪಟ್ಟಿಯನ್ನು ಸ್ವೀಕೃತಿ ಮಾಡಿದ್ದು, ಮುಂದಿನ ವರ್ಷ ಫೆಬ್ರವರಿ ತಿಂಗಳಿಂದ ಪ್ರಕರಣದ ವಿಚಾರಣೆ ಆರಂಭವಾಗಲಿದೆ ಎಂದು ಟೈಮ್ಸ್​ನೌ ವರದಿ ಮಾಡಿದೆ.

Comments are closed.