ಮನೋರಂಜನೆ

#MeToo: ನಿರ್ಮಾಪಕ ಗೌರಂಗ್ ಜತೆಗಿನ ಅನುಭವ ಬಿಚ್ಚಿಟ್ಟ ಕನ್ನಡದ ’ಕೋದಂಡರಾಮ’ದ ಬಾಲಿವುಡ್ ನಟಿ ಫ್ಲೋರಾ ಸೈನಿ

Pinterest LinkedIn Tumblr


ಮುಂಬೈ: ಕನ್ನಡದ “ಕೋದಂಡರಾಮ”, “ಸಿಐಡಿ ಈಶ” ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ ಬೆಡಗಿ ಫ್ಲೋರಾ ಸೈನಿ ಅಲಿಯಾಸ್ ಆಶಾ ಸೈನಿ ತಮ್ಮ ಸ್ವಂತ ಬದುಕಿನಲ್ಲಿ ನಡೆದ “ಮೀಟೂ” ಘೋರ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಭಾರತದಲ್ಲಿ ಹೇಗೆ ಪುರುಷರು ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಸುತ್ತಾರೆ ಎನ್ನುವುದನ್ನು ಅವರು ತಮ್ಮ ಜೀವನದಲ್ಲಿ ಎದುರಾದ ಅನುಭವವನ್ನೇ ಉದಾಹರಣೆಯಾಗಿಟ್ಟು ವಿವರಿಸಿದ್ದಾರೆ.

ತಮಗಾದ ಅನ್ಯಾಯವನ್ನು ಫೇಸ್‍ಬುಕ್‌ನಲ್ಲಿ ಹಂಚಿಕೊಂಡಿರುವ ನಟಿ ಮಾಜಿ ಪ್ರಿಯಕರ, ನಿರ್ಮಾಪಕ ಗೌರಂಗ್ ದೋಷಿ ತನ್ನೊಡನೆ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದ್ದ, ನನಗೆ ಚಿತ್ರಹಿಂಸೆ ನೀಡಿದ ಎಂದು ಆರೋಪಿಸಿದ್ದಾರೆ. ಅಲ್ಲದೆ ಆತ ತನ್ನ ಮೇಲೆ ಹಲ್ಲೆ ನಡೆಸಿದಾಗ ತಮ್ಮ ಮುಖದ ಮೇಲಾದ ಗಾಯಗಳ ಗುರುತಿರುವ ಫೋಟೋಗಳನ್ನು ಸಹ ಆಕೆ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ಈ ಭಾವಚಿತ್ರಗಳೀಗ ವೈರಲ್ ಆಗಿದೆ.
ತಮ್ಮ ಸುದೀರ್ಘ ಫೇಸ್‍ಬುಕ್‌ ಪೋಸ್ಟ್ ನಲ್ಲಿ ಫ್ಲೋರಾ ಸೈನಿ ಅಂದು ತಾವು ಕಂಡ ಕೆಟ್ಟ ಅನುಭವವನ್ನು ಎಳೆ ಎಳೆಯಾಗಿ ಚಿತ್ರಿಸಿದ್ದಾರೆ.
“ಮೇಲಿನ ಚಿತ್ರದಲ್ಲಿರುವುದು ನಾನೇ, 2007ರ ಪ್ರೇಮಿಗಳ ದಿನಾಚರಣೆ ದಿನ ಗೌರಂಗ್ ದೋಷಿ ಅತ್ಯಂತ ಪೈಶಾಚಿಕವಾಗಿ ಹಲ್ಲೆ ನಡೆಸಿದ್ದ. ಸತತ ಒಂದು ವರ್ಷಗಳ ಕಾಲ ನನಗೆ ನರಕದರ್ಶನ ವನ್ನೇ ಮಾಡಿಸಿದ್ದ. ನನ್ನ ಮುಖದ ಮೇಲಿನ ಈ ಗುರುತುಗಳು ಆ ನರಕದ ಚಿನ್ಹೆಗಳಾಗಿದೆ.ಆಗಲೇ ನಾನು ಈ ಸಂಗತಿಗಳನ್ನು ಹೇಳಿಕೊಂಡರೂ ಯಾರೂ ಅದನ್ನು ನಂಬಿರಲಿಲ್ಲ. ಏಕೆಂದರೆ ಅಂದು ಗೌರಂಗ್‌ ಓರ್ವ ಪ್ರತಿಷ್ಠಿತ ವ್ಯಕ್ತಿಯಾಗಿದ್ದ. ನನಗೆ ಸಿಕ್ಕಬಹುದಾಗಿದ್ದ ನಏಕ ಅವಕಾಶಗಳು ಅವನಿಂದ ತಪ್ಪಿಹೋಗಿದ್ದಿದೆ.
“ಅದು ನನಗೆ ಯಾರೊಡನೆ ಹೇಳಿಕೊಳ್ಳಲಾಗದ ಕ್ಷಣವಾಗಿತ್ತು. ನನ್ನಲ್ಲಿದ್ದ ನೈಜ ಪ್ರತಿಭೆಯನ್ನು ಗುರುತಿಸಿ ಯಾರಾದರೂ ಅವಕಾಶ ನೀಡಿದರೆ ಅವರೊಡನೆ ಹೋಗಿ ತಲೆಮರೆಸಿಕೊಳ್ಳುವ ಆಲೋಚನೆಯೂ ಇತ್ತು. ಗೌರಂಗ್ ಕಾರಣದಿಂದ ಅದೆಷ್ಟೋ ಹೆಣ್ಣು ಮಕ್ಕಳು ಕಷ್ಟ ನಷ್ಟ ಅನುಭವಿಸಿದ್ದಾರೆ. ಇದು ನನ್ನೊಬ್ಬಳ ಕಥೆಯಲ್ಲ.ಅವರೆಲ್ಲಾ ನನಗೆ ಕರೆ ಮಾಡಿ ಸಹಾಯ ಯಾಚಿಸಿದ್ದರು ಸಹ ನಾನು ವರಿಗೆ ಯಾವ ವಿಧದಲ್ಲಿ ನೆರವಾಗಲು ಆಗಿರಲಿಲ್ಲ.
“ಗೌರಂಗ್‌ನಿಂದಾಗಿ ನಾನು ನನ್ನ ಜೀವನದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದೇನೆ ಜೀವನದಲ್ಲಿ ಕೆಲವು ಸರಿಪಡಿಸಲಾಗದ ಬದಲಾವಣೆಗಳಾಗಿದೆ.ಆದರೆ ಆ ದೇವರ ಮುಂದೆ ಯಾರೂ ದೊಡ್ಡವರಲ್ಲ ಎಂದು ನಾನು ನಂಬುತ್ತಾ ಬಂದಿದ್ದೇನೆ.. ಸತ್ಯವನ್ನೇ ನಂಬಿ ಅದನ್ನೇ ಆಯುಧವಾಗಿಟ್ಟುಕೊಂಡು ಮತ್ತೆ ನಾವೆಲ್ಲಾ ಸಂತಸದಿಂದಿರೋಣ, ಇಂಥಹಾ ಜನರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ” ಫ್ಲೋರಾ ಹೇಳಿದ್ದಾರೆ.

Comments are closed.