ಬೆಂಗಳೂರು: ಹತ್ತು ವರ್ಷಗಳ ಹಿಂದಿನ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಲೀಮ್ನನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಎಸಿಪಿ ಸುಬ್ರಮಣಿ ನೇತೃತ್ವದ ತಂಡವು ಭರ್ಜರಿ ಕಾರ್ಯಾಚರಣೆ ನಡೆಸಿ ಕೇರಳದಲ್ಲಿ ಸಲೀಮ್ನನ್ನು ಬಂಧಿಸಿದೆ. ಸಿಸಿಬಿ ಇನ್ಸ್ಪೆಕ್ಟರ್ ಪ್ರವೀಣ್, ಸತೀಶ್ ಕುಮಾರ್ ಅವರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ರಾಷ್ಟ್ರೀಯ ಗುಪ್ತಚರ ಸಂಸ್ಥೆ ಎನ್ಐಎ ಕೂಡ ಸಲೀಮ್ಗಾಗಿ ತಲಾಶ್ ನಡೆಸುತ್ತಿತ್ತು. ಈತ ಹಲವು ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ. 2008ರಲ್ಲಿ ಬೆಂಗಳೂರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ಮೈಂಡ್ ಈತನೇ ಎನ್ನಲಾಗದೆ. 2008ರ ಜುಲೈ 25ರಂದು ಮಡಿವಾಳ ಸೇರಿದಂತೆ ವಿವಿಧೆಡೆ ಒಟ್ಟು 9 ಬಾಂಬ್ಗಳು ಸ್ಫೋಟಗೊಂಡಿದ್ದವು. ಈ ಕೃತ್ಯದಲ್ಲಿ ಒಬ್ಬ ವ್ಯಕ್ತಿ ಸಾವಪ್ಪಿ, 20 ಜನರು ಗಾಯಗೊಂಡಿದ್ದರು. ಮಡಿವಾಳದಲ್ಲಿ ಸಂಭವಿಸಿದ ಸ್ಫೋಟಕ್ಕೆ ಒಬ್ಬ ಮಹಿಳೆ ಬಲಿಯಾಗಿದ್ದರು. ಅದೇ ವರ್ಷ ಜೈಪುರ ಮತ್ತು ಅಹ್ಮದಾಬಾದ್ನಲ್ಲೂ ಸರಣಿ ಬಾಂಬ್ ಸ್ಫೋಟಗಳಾಗಿದ್ದವು.
ಈ ಮೂರು ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಲಷ್ಕರೆ ಮತ್ತು ಸಿಮಿ ಸಂಘಟನೆಗಳ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಕೇರಳದ ಮದನಿ ಅವರು ಇದರ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಲಷ್ಕರೆಯ ಕಮಾಂಡರ್ ಟಿ. ನಸೀರ್ ಅವರು ಈಗಾಗಲೇ ಕರ್ನಾಟಕ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೀಗ ಸಲೀಮ್ ಬಂಧನವಾಗಿರುವುದು ಈ ಪ್ರಕರಣದಲ್ಲಿ ಇನ್ನಷ್ಟು ಬೆಳವಣಿಗೆ ಸಾಧಿಸಿದಂತಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಲೀಮ್ ಸಿಮಿ ಉಗ್ರ ಸಂಘಟನೆಗೆ ಸೇರಿದವನೆಂಬುದು ತಿಳಿದುಬಂದಿದೆ.
Comments are closed.