ಕರ್ನಾಟಕ

ರಾಮನಗರ: ಕಾಂಗ್ರೆಸ್​ ಎಂಎಲ್​ಸಿ ಲಿಂಗಪ್ಪ ಪುತ್ರ ಬಿಜೆಪಿ ಸೇರ್ಪಡೆ

Pinterest LinkedIn Tumblr


ಬೆಂಗಳೂರು: ಉಪಚುನಾವಣಾ ಸಮರಕ್ಕೆ ಸಿದ್ಧವಾಗಿರುವ ಬಿಜೆಪಿಗೆ ಈಗ ಅಭ್ಯರ್ಥಿಗಳ ಆಯ್ಕೆಯೇ ದೊಡ್ಡ ತಲೆ ಬಿಸಿಯಾಗಿದೆ. ಅದರಲ್ಲೂ ಹಳೇ ಮೈಸೂರು ಭಾಗಗಳಲ್ಲಿ ಬಿಜೆಪಿ ಪ್ರಬಲವಾಗಿರದೆ ಇರುವುದು ಕೂಡ ಇದಕ್ಕೆ ಕಾರಣವಾಗಿದೆ. ಇದಕ್ಕಾಗಿ ಬಿಜೆಪಿ ಅಪರೇಷನ್​ ಕಮಲಕ್ಕೆ ಮುಂದಾಗಿದೆ.

ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭದ್ರಕೋಟೆ ರಾಮನಗರವಾಗಿದೆ. ಇಲ್ಲಿ ಜೆಡಿಎಸ್​ನಿಂದ ಅನಿತಾ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದ್ದರೆ, ಇತ್ತ ಕಾಂಗ್ರೆಸ್​ನಲ್ಲಿ ಸ್ಥಳೀಯ ಮುಖಂಡ ಇಕ್ಬಾಲ್​ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್​-ಜೆಡಿಎಸ್​ ಮೈತ್ರಿಯಾದರೆ, ಇಕ್ಬಾಲ್​ ಅವರನ್ನೇ ಬಿಜೆಪಿಗೆ ಸೆಳೆದು, ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವ ಉಪಾಯ ಮಾಡಿದೆ. ಇದರ ಬೆನ್ನಲ್ಲೆ ಈಗ ಕಾಂಗ್ರೆಸ್​ ಮುಖಂಡ ಲಿಂಗಪ್ಪ ಅವರ ಮಗ ಬಿಜೆಪಿ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ರಾಮನಗರ ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪ ಮಗ ಚಂದ್ರಶೇಖರ್​​ ಅವರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಸಿ.ಪಿ ಯೋಗೀಶ್ವರ್​ ಅವರನ್ನು ಕಮಲ ಪಾಳಯಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಯೋಗೇಶ್ವರ್​ ಜೊತೆಗೆ ಆಗಮಿಸಿದ ಚಂದ್ರಶೇಖರ್​, ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾದರು. ಬಳಿಕ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು. ಮೂಲಗಳ ಪ್ರಕಾರ ಜೆಡಿಎಸ್​, ಕಾಂಗ್ರೆಸ್​ ಸಂಘಟಿತ ಅಭ್ಯರ್ಥಿ ಎದುರು ಬಿಜೆಪಿಯಿಂದ ಜಿಲ್ಲಾಧ್ಯಕ್ಷ ರುದ್ರೇಶ್​ರನ್ನು ನಿಲ್ಲಿಸುವ ಸಾಧ್ಯತೆಯಿದೆ.

2 ವಿಧಾನಸಭೆ, 3 ಲೋಕಸಭೆಗೆ ಉಪಚುನಾವಣೆ; ಮೂರು ಪಕ್ಷಗಳಲ್ಲೂ ಮುಗಿಯದ ಅಭ್ಯರ್ಥಿ ಆಯ್ಕೆ ಕಸರತ್ತು

ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮೊರೆ:

ಇಕ್ಬಾಲ್​ ಹುಸೇನ್​ ಅವರನ್ನು ಚುನಾವಣಾ ಕಣಕ್ಕೆ ಇಳಿಸದಿದ್ದರೆ, ಇದು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂಬ ಮಾತು ಕೂಡ ಕಾಂಗ್ರೆಸ್​ ಕಾರ್ಯಕರ್ತರಿಂದ ಕೇಳಿ ಬಂದಿದೆ. ಅಲ್ಲದೇ ಇಕ್ಬಾಲ್​ ಟಿಕೆಟ್​ ಕೈ ತಪ್ಪಿದರೆ, ಸ್ವತಂತ್ರವಾಗಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತು ಕೂಡ ಕಾಂಗ್ರೆಸ್​ ಪಾಳಯದಿಂದ ಕೇಳಿಬಂದಿದೆ.

ಈ ಬೆಳವಣಿಗೆ ಗಮನಿಸಿ ಬಿಜೆಪಿ ಕಾಂಗ್ರೆಸ್​ ಅಭ್ಯರ್ಥಿ ಇಕ್ಬಾಲ್​ ಹುಸೇನ್​ ಅವರಿಗೆ ಗಾಳ ಹಾಕಲು ತಯಾರಿ ನಡೆಸಿದೆ. ಇನ್ನು ಇಕ್ಬಾಲ್​ ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು, ಈ ಹಿನ್ನೆಲೆಯಲ್ಲಿ ಇದು ಪಕ್ಷಕ್ಕೆ ಲಾಭವಾಗಲಿದೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.

ಇಕ್ಬಾಲ್​ ಹುಸೇನ್​ ಅವರನ್ನು ಒಂದು ವೇಳೆ ಪಕ್ಷಕ್ಕೆ ಸೆಳೆಯುವಲ್ಲಿ ವಿಫಲವಾದರೆ ಚಂದ್ರಶೇಖರ್​ ಅವರನ್ನು ಕಣಕ್ಕೆ ಇಳಿಸಲು ಕೂಡ ಪಕ್ಷ ಚಿಂತನೆ ನಡೆಸಿದೆ. ರಾಮನಗರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿ.ಪಿ ಯೋಗೇಶ್ವರ್ ಅವರನ್ನು ಕಣಕ್ಕೆ ಇಳಿಸುವ ಕುರಿತು ಬಿಜೆಪಿ ತಯಾರಿ ನಡೆಸಿದ್ದು, ರುದ್ರೇಶ್​ ಹೆಸರು ಕೂಡ ಕಮಲ ಪಾಳಯದಲ್ಲಿ ಕೇಳಿ ಬಂದಿದೆ. ರಾಮನಗರ ಅಭ್ಯರ್ಥಿ ಆಯ್ಕೆ ಬಗ್ಗೆ ಇಂದು ಬೆಳಗ್ಗೆ ಇಂದ ಬಿಎಸ್​ ಯಡಿಯೂರಪ್ಪ ಮನೆಯಲ್ಲಿ ಚರ್ಚೆಯಾಗಿದ್ದು, ಯಾರ ಹೆಸರು ಅಂತಿಮವಾಗಿಲ್ಲ.

ರಾಮನಗರದಲ್ಲಿ ಈಗ ಜೆಡಿಎಸ್​ ಪರ ವಾತಾವರಣವಿಲ್ಲ. ಅನಿತಾ ಕುಮಾರಸ್ವಾಮಿಯವರ ಪರ ಒಲವಿಲ್ಲ.ಅಲ್ಲದೇ ಕಾಂಗ್ರೆಸ್ ನಲ್ಲಿ ಒಡಕುಂಟಾಗಿದೆ. ಹಾಗಾಗಿ ರುದ್ರೇಶ್ ಅಥವಾ ಸಿ.ಪಿ. ಯೋಗೀಶ್ವರ್ ಗೆ ಟಿಕೆಟ್ ಕೊಟ್ರೆ ಬಿಜೆಪಿ ಗೆಲುವು ಸುಲಭವಾಗುತ್ತದೆ ಎಂದು ಯಡಿಯೂರಪ್ಪ ನವರಿಗೆ ಮನವಿ ಮಾಡಿದ್ದೇವೆ ಎಂದು ಬಿಜೆಪಿ ಕಾರ್ಯದರ್ಶಿ ನಾಗರಾಜ್​ ತಿಳಿಸಿದ್ದಾರೆ.

Comments are closed.