ಕುಂದಾಪುರ: ಅರೆಬರೆ ಕಟ್ಟಿಟ್ಟ ಮನೆ, ಮನೆಯ ಮೇಲ್ಮಾಡಿಗೆ ಟಾರ್ಪಾಲ್ ಹೊದಿಕೆ. ಮಳೆಬಂದರೆ ನೆನೆಯಬೇಕು, ಬಿಸಿಲಿಗೆ ಒದ್ದಾಡಬೇಕು. ಕೋಳಿ ಗೂಡಿನ ಪಕ್ಕದಲ್ಲಿ ಅಡುಗೆ ಮಾಡ್ತಾರೆ ಈ ಮಂದಿ. ಇಲ್ಲೊಂದು ಪರಿಶಿಷ್ಟ ಜಾತಿಯ ಬಡಕುಟುಂಬ ಅನುಭವಿಸುತ್ತಿರುವ ಪಾಡು ದೇವರಿಗೆ ಪ್ರೀತಿ. ಈ ಕುರಿತ ಒಂದು ಮನಕಲಕುವ ಸ್ಟೋರಿಯಿಲ್ಲಿದೆ ನೋಡಿ.
ಸರಕಾರವು ಬಡವರ, ಅಶಕ್ತರ ಹಾಗೂ ಎಸ್ಸಿ ಎಸ್ಟಿ ಪರವಾಗಿ ಕೆಲಸ ಮಾಡಿ ಅವರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ಹೋಗುವಲ್ಲಿ ಸಹಕರಿಸುತ್ತೆ ಅನ್ನೋದು ಕೇವಲ ಪ್ರಚಾರಕ್ಕೆ ಮಾತ್ರವೇ ಸೀಮಿತ ಎಂಬುದಕ್ಕೆ ಈ ಕುಟುಂಬವೇ ಸಾಕ್ಷಿ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು, ಹಂಗಳೂರು ಗ್ರಾಮಪಂಚಾಯತಿಯ ನೇರಂಬಳಿ ಗದ್ದೆಮನೆ ಬಳಿ ಜಲಜಾ ಎನ್ನುವ ಎಸ್ಸಿ ಕುಟುಂಬ ಹೊಸ ಮನೆಯ ಕನಸಿನೊಟ್ಟಿಗೆ ಹಳೆ ಮನೆ ಅಳಿದಿದೆ. ಅಂಬೇಡ್ಕರ್ ವಸತಿ ಯೋಜನೆ ಅನುದಾನ ಬಾರದ ಹಿನ್ನೆಲೆಯಲ್ಲಿ ಹಳೆ ಮನೆಯೂ ಇಲ್ಲಾ. ಹೊಸ ಮನೆಯೂ ಇಲ್ಲದೆ ತ್ರಿಶಂಕು ಸ್ಥಿತಿ. ಹೊಸ ಮನೆಗೆ ಹೊದಿಸಿದ ಟಾರ್ಪಾಲ್ ಮೇಲ್ಮಾಡಿನಡಿ ಒಂಬತ್ತು ಜನ ಮಕ್ಕಳೊಟ್ಟಿಗೆ ಕರುಣಾಜನಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಂಬೇಡ್ಕರ್ ವಸತಿ ಯೋಜನೆ ಅನುದಾನದ ಭರವಸೆಯಲ್ಲಿ ಜಲಜಾ ಹಳೆ ಮನೆ ಅಳಿದು ಹೊಸ ಮನೆಗೆ ಪೌಂಡೇಶನ್ ಹಾಕಿದರು. ತಳಪಾಯ, ಗೋಡೆ, ಲಿಂಟಲ್ ವರೆಗೆ ಮನೆ ಬಂದಿದ್ದರೂ ಅನುದಾನ ಮಾತ್ರ ಬಂದಿಲ್ಲ. ಜಲಜಾ ಮಗಳು ಶೈಲಾ ಹೆಸರಲ್ಲಿ ಜಿಪಿಎಸ್ ಮಾಡಿ ಚಿತ್ರ ಸಹಿತಿ ಅಪ್ ಲೋಡ್ ಮಾಡಿದರೂ ಅನುದಾನ ಮಾತ್ರ ಸಿಕ್ಕಿಲ್ಲ.
ಬಡ ಕುಟುಂಬ ಹೈರಾಣ!
ಹೇಳಿಕೇಳಿ ಇದೊಂದು ಬಡ ಕುಟುಂಬ ಕೂಲಿ ಮಾಡಿದರೆ ಮಾತ್ರ ಅಂದಿನ ಊಟ ನಡೆಯುತ್ತೆ, ಜಲಜಾ ಪತಿ ಬಸವ ಕಾಯಿ ಕೀಳುವ ಕೆಲಸದ ಜತೆ ಕೂಲಿ ಕೆಲಸ ಮಾಡುತ್ತಿದ್ದು, ಇವರಿಗೆ ಒಂದು ಗಂಡು ಹಾಗೂ ನಾಲ್ಕು ಜನ ಹೆಣ್ಣ ಮಕ್ಕಳಿದ್ದಾರೆ. ಜಲಜಾ ಕೂಡಾ ಅಲ್ಲಿ ಇಲ್ಲಿ ಕೂಲಿ ಮಾಡುತ್ತಾರೆ. ಇವರು ದುಡಿದಿದ್ದು ಹೊಟ್ಟೆ ತುಂಬಲು ಕಷ್ಟವಾಗಿದ್ದು, ಮನೆ ಮುಂದುವರಿಸೋದು ಹೇಗೆ ಎನ್ನೋದು ಇವರ ಆತಂಕ. ಅನುದಾನದ ನಿರೀಕ್ಷೆಯಲ್ಲಿ ಪೈನಾನ್ಸ್, ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಘದಲ್ಲಿ ಇದೂವರಗೆ 3 ಲಕ್ಷಕ್ಕೂ ಮಿಕ್ಕ ಸಾಲ ಮಾಡಿದ್ದಾರೆ, ಇದ್ದಬದ್ದ ಚಿನ್ನ ಕೂಡಾ ಅಡವಿಟ್ಟಿದ್ದು, ಸ್ಲ್ಯಾಬ್ ಹಾಕಲು ಹಣ ಇಲ್ಲದೆ ಮನೆ ಅರ್ಧಕ್ಕೆ ನಿಂತಿದೆ. ಕಟ್ಟಿದ ಅರ್ಧ ಮನೆಯ ಒಂದು ಭಾಗಕ್ಕೆ ಟಾರ್ಪಲ್ ಹಾಕಿ ಅದರಡಿ ಒಂಬತ್ತು ಮಂದಿ ವಾಸ ಮಾಡುತ್ತಿದ್ದಾರೆ. ಇನ್ನು ನೆಲಕ್ಕೆ ಬ್ಯಾನರ್ ಹೊದಿಸಿ ಅದರ ಮೇಲೆ ನಿದ್ದೆ ಮಾಡ್ತಾರೆ.
ಯಾಕಾಗಿ ಸಮಸ್ಯೆ?
ಮನೆ ಕಟ್ಟಲು ಆಧಾರ್ ಕಾರ್ಡ್ ಬಳಸಿ ಜಿಪಿಎಸ್ ಮಾಡಲಾಯಿತು. ಆ ಜಿಪಿಎಸ್ ಅಂಬೇಡ್ಕರ್ ವಸತಿ ನಿಗಮಕ್ಕೆ ಹೋಗಿದೆ. ಅಂಬೇಡ್ಕರ್ ವಸತಿ ನಿಗಮದಲ್ಲಿ ಹಣ ಇಲ್ಲದೆ ಜಲಜಾ ಕುಟುಂಬಕ್ಕೆ ಅನುದಾನಕ್ಕೆ ತಡೆ ಬಿದ್ದಿದೆ. ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ನಿಗಮಕ್ಕೆ ಹಣ ಹಾಕಿದರೆ ಜಲಜಾ ಸಮಸ್ಯೆ ಪರಿಹಾರ ಆಗುತ್ತದೆ. ಆದರೆ ಸಮಾಜ ಕಲ್ಯಾಣ ಇಲಾಖೆ ಅನುದಾನದ ಕೊರತೆ ಸೂಬೂಬು ಹೇಳುತ್ತಿದೆ.
ಒಟ್ಟಿನಲ್ಲಿ ಅನುದಾನದ ಭರವಸೆ ನಂಬಿ ಇದ್ದ ಹಣವನ್ನು ಖರ್ಚು ಮಾಡಿದ್ದಲ್ಲದೇ ಸದ್ಯ ಸಾಲಗಾರರಾಗಿದೆ ಈ ಕುಟುಂಬ. ಸಂಬಂದಪಟ್ಟ ಇಲಾಖೆ ಕೂಡಲೇ ಅನುದಾನ ಬಿಡುಗಡೆ ಮಾಡಿ ಇವರ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.