ಕರಾವಳಿ

ತಂದೆಯನ್ನು ಹತ್ಯೆಗೈದ ಅಪರಾಧಿ ಡಾಲ್ಫಿ ಗೋವಿಯಸ್‌ಗೆ ಜೀವಿತಾವಧಿ ಕಠಿಣ ಜೈಲು ಶಿಕ್ಷೆ ಪ್ರಕಟ

Pinterest LinkedIn Tumblr

ಮಂಗಳೂರು: ತಂದೆಯನ್ನು ಕೊಲೆ ಮಾಡಿ, ಅಣ್ಣನ ಕೊಲೆಗೆ ಯತ್ನಿಸಿದ ಪ್ರಕರಣವೊಂದರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ನ್ಯಾಯಾಲಯ ಜೀವಿತಾವಧಿ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

ಶಿಕ್ಷೆಗೊಳಗಾದ ಅಪರಾಧಿಯನ್ನು ಕಾರ್ಕಳ ತಾಲೂಕಿನ ಅಜೆಕಾರು ನಿವಾಸಿ ಡಾಲ್ಫಿ ಗೋವಿಯಸ್ (41) ಎಂದು ಗುರುತಿಸಲಾಗಿದೆ.

ಆರೋಪಿಗೆ ತಂದೆ ಕೊಲೆ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ) ಕಠಿಣ ಜೀವಾಧಿ ಶಿಕ್ಷೆ ಜೀವಿತಾವಧಿ ತನಕ. 10 ಸಾವಿರ ರೂ.ದಂಡ. ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಐಪಿಸಿ ಸೆಕ್ಷನ್ 307 ಕೊಲೆ ಯತ್ನ ಪ್ರಕರಣದಲ್ಲಿ 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ.ದಂಡ. ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಐಪಿಸಿ ಸೆಕ್ಷನ್ 201 ಸಾಕ್ಷ್ಯ ನಾಶ ಪ್ರಕರಣದಲ್ಲಿ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ. ದಂಡ ತೆರಲು ತಪ್ಪಿದರೆ 6 ತಿಂಗಳು ಸಜೆ ವಿಧಿಸಲಾಗಿದೆ.

ಅಲ್ಲದೆ ಗಾಯಾಳು ಆಗಿದ್ದ ಅಣ್ಣ ಸ್ಟೇನಿ ಗೋವಿಯಸ್‌ಗೆ ಪರಿಹಾರವಾಗಿ 50 ಸಾವಿರ ರೂ. ಒಂದು ತಿಂಗಳ ಒಳಗೆ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

2007ರ ಎಪ್ರಿಲ್ 4 ರಂದು ಸಂಜೆ ಮಂಗಳೂರು ತಾಲೂಕಿನ ಹೊಸಬೆಟ್ಟು ಕರಿಂಗಾನ ಎಂಬಲ್ಲಿ ವಾಸವಿದ್ದ ತನ್ನ ತಂದೆಯ ಮನೆಗೆ ಬಂದ ಡಾಲ್ಫಿ ಗೋವಿಯಸ್ ತನ್ನ ತಂದೆಯಾದ ಪೌಲ್ ಗೋವಿಯಸ್(83)ರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆಸ್ತಿಯ ವಿಚಾರದ ವೈಷಮ್ಯದಿಂದಾಗಿ ಈ ಕೊಲೆ ನಡೆದಿತ್ತು.

ತಂದೆಯನ್ನು ಕೊಲೆಗೈದ ಬಳಿಕ ತನ್ನ ಅಣ್ಣ ಸ್ಟ್ಯಾನಿ(54) ಬರುವವರೆಗೂ ಕಾದು, ಆತ ಮನೆ ಪ್ರವೇಶಿಸುತ್ತಿದ್ದಂತೆಯೇ ಕತ್ತಿಯಿಂದ ಗಂಭೀರವಾಗಿ ಹಲ್ಲೆಗೈದಿದ್ದ. ಅಲ್ಲದೆ ಮನೆಯಲ್ಲಿನ ಸಿಸಿಟಿವಿ ಕಿತ್ತೆಸೆದು ರಾದ್ಧಾಂತ ಮಾಡಿದ್ದ. ಈ ಪ್ರಕರಣ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಕೊಲೆ, ಹಲ್ಲೆ, ಸಾಕ್ಷ್ಯ ನಾಶ ಕುರಿತಂತೆ ಪೊಲೀಸರು ಆರೋಪಿಯ ಮೇಲೆ ಕೇಸು ದಾಖಲಿಸಿಕೊಂಡಿದ್ದರು.

ಅಂದಿನ ಮೂಡಬಿದಿರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರಕಾರದ ಪರವಾಗಿ 36 ಸಾಕ್ಷಿಗಳನ್ನು ವಿಚಾರಿಸಲಾಗಿತ್ತು. ನ್ಯಾಯಾಧೀಶರಾದ ಕೆ.ಎಸ್.ಬೀಳಗಿಯವರು ವಿಚಾರಣೆ ನಡೆಸಿದ್ದರು.

ಇದೀಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಡ್ಲೂರು ಸತ್ಯನಾರಾಯಣಾಚಾರ್ಯ ಅವರು ಮುಂದಿನ ವಿಚಾರಣೆ ನಡೆಸಿದ್ದು, ಡಾಲ್ಫಿ ಗೋವಿಯಸ್ ಆರೋಪಿ ಎಂಬುದು ಸಾಬೀತಾಗಿತ್ತು. ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪುಷ್ಪರಾಜ ಅಡ್ಯಂತಾಯ ಅವರು ವಾದ ಮಂಡಿಸಿದ್ದರು.

Comments are closed.