ಕರಾವಳಿ

ಕೃಷಿಕರ ಸಮಗ್ರ ಅಭಿವೃದ್ಧಿಗೆ ಕ್ಯಾಂಪ್ಕೊ ಮಾದರಿ : ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ

Pinterest LinkedIn Tumblr

ಮಂಗಳೂರು : ಸಹಕಾರ ತತ್ವಗಳ ಸಮರ್ಪಕ ಅನುಷ್ಠಾನದ ಮೂಲಕ ಕೃಷಿಕರ ಅಭಿವೃದ್ಧಿ ಸಾಧ್ಯವೆಂಬುದಕ್ಕೆ ಕ್ಯಾಂಪ್ಕೊ ಮಾದರಿಯಾಗಿ ನಮ್ಮ ಮುಂದಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ತಿಳಿಸಿದ್ದಾರೆ. ಕ್ಯಾಂಪ್ಕೊದ ಕಾರ್ಯಚಟುವಟಿಕೆಗಳನ್ನು ತಿಳಿದುಕೊಂಡ ಬಳಿಕ ಇಂತಹ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ, ಕೃಷಿಕರನ್ನು ಶೋಷಣೆ ಮುಕ್ತಗೊಳಿಸಬಹುದಲ್ಲದೆ ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿರ್ಧರಿಸುವ ಸಾಮರ್ಥ್ಯ ಪಡೆದು ಆರ್ಥಿಕ ಸಬಲೀಕರಣ ಹಾಗೂ ಸಮಗ್ರ ಅಭಿವೃದ್ಧಿಗೆ ಅದು ನಾಂದಿಯಾಗಲಿದೆ ಎಂದು ನುಡಿದರು.

ಪ್ರಪ್ರಥಮವಾಗಿ ಮಂಗಳೂರಿಗೆ ನಿನ್ನೆ ಆಗಮಿಸಿದ ಸಚಿವರು ಕ್ಯಾಂಪ್ಕೊದ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಲಕ್ಷಕ್ಕೂ ಅಧಿಕ ಸದಸ್ಯ ಬಳಗವನ್ನು ಹೊಂದಿರುವ, ಕ್ಯಾಂಪ್ಕೊದ ಕಾರ್ಯವೈಖರಿ ಹಾಗೂ ಸಾಧನೆಗಳನ್ನು ಸಚಿವರು ಶ್ಲಾಘಿಸಿದರು. ಸಂಸ್ಥೆಯ ಪರವಾಗಿ ಅಧ್ಯಕ್ಷ ಶ್ರೀ ಎಸ್.ಆರ್. ಸತೀಶ್ಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸುರೇಶ್ ಭಂಡಾರಿ ಎಂ. ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಶಾಲು, ಹಾರ ಫಲಪುಷ್ಪ ಉಡುಗೂರೆ ನೀಡಿ ಸನ್ಮಾನಿಸಿದರು.

ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ನಿರ್ದೇಶಕ ಶ್ರೀಕೃಷ್ಣ ಪ್ರಸಾದ ಮಡ್ತಿಲ ಸನ್ಮಾನಿಸಿದರು.

ರಾಜ್ಯ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಎಂ.ಕೆ. ಅಯ್ಯಪ್ಪ, ರಾಜ್ಯ ಸಹಕಾರಿ ಸಂಘಗಳ ಜಂಟಿ ರಿಜಿಸ್ಟ್ರಾರ್ ಲಿಂಗರಾಜು, ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ವೆಂಕಟಸ್ವಾಮಿ, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ ಎಸ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು ಮತ್ತು ಕ್ಯಾಂಪ್ಕೊದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಎ.ಪಿ.ಎಂ.ಸಿ.ಗಳಲ್ಲಿ ಕ್ಯಾಂಪ್ಕೊ ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದ್ದು ಅದನ್ನು ಬಗೆಹರಿಸುವ ಭರವಸೆ ನೀಡಿದರು.

Comments are closed.