ಕರಾವಳಿ

ಅತ್ತೆ ಮಗಳ ಮೇಲೆ ಅತ್ಯಾಚಾರ; ಅಪರಾಧಿಗೆ 10 ವರ್ಷ ಜೈಲು, 80 ಸಾವಿರ ದಂಡ

Pinterest LinkedIn Tumblr

ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ತೆ ಮಗಳನ್ನು ಬೆದರಿಸಿ ಆಕೆ ಮೇಲೆ ಅತ್ಯಾಚಾರ ನಡೆಸಿ ಆಕೆ ಗಂಡು ಮಗುವಿಗೆ ಜನ್ಮ ನೀಡಲು ಕಾರಣವಾಗಿದ್ದಲ್ಲದೇ ಮದುವೆಯಾವುದುದಾಗಿ ನಂಬಿಸಿ ಬಳಿಕ ಮೋಸಮಾಡಿದ್ದಲ್ಲದೇ ಜೀವಬೆದರಿಕೆ ಹಾಕಿದ ಪ್ರಕರಣದ ಆರೋಪಿ ಮಂಜುನಾಥ ನಾಯ್ಕ್ ವಿರುದ್ಧ ಹೊರಿಸಲಾದ ದೋಷಾರೋಪಣೆಗಳು ನ್ಯಾಯಾಲಯದಲ್ಲಿ ಸಾಭೀತಾಗಿದ್ದು ಅಪರಾಧಿಗೆ 10 ವರ್ಷ ಜೈಲು, ವಿವಿಧ ಪ್ರಕರಣಗಳಿಗೆ ಸಂಬಂಧಿಸಿ 80 ಸಾವಿರ ದಂಡ ವಿಧಿಸಲಾಗಿದೆ.

ಕುಂದಾಪುರದಲ್ಲಿನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾದೀಶ ಪ್ರಕಾಶ ಖಂಡೇರಿ ಈ ಮಹತ್ವದ ತೀರ್ಪು ನೀಡಿದ್ದು ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ 10 ವರ್ಷ ಸಜೆ ಹಾಗೂ 40 ಸಾವಿರ ದಂಡ, ಜೀವ ಬೆದರಿಕೆ ಹಾಕಿದ್ದಕ್ಕೆ 3 ವರ್ಷ ಸಜೆ, 20 ಸಾವಿರ ದಂಡ, ಅವ್ಯಾಚವಾಗಿ ನಿಂಧಿಸಿದ್ದಕ್ಕೆ 1 ವರ್ಷ ಸಾದಾ ಶಿಕ್ಷೆ, ನಂಬಿಸಿ ದ್ರೋಹ ಮಾಡಿದ್ದಕ್ಕೆ 1 ವರ್ಷ ಸಜೆ ಹಾಗೂ 20 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೇ ಸಂತ್ರಸ್ತೆಯು ಕಾನೂನು ಸೇವಾ ಪ್ರಾಧಿಕಾರದಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದೆಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಅಂದು ನಡೆದಿದ್ದೇನು?
2010 ಮಾರ್ಚ್ 10ರಂದು ಬೈಂದೂರು ತಾಲೂಕು ಕಾಲ್ತೋಡು ಗ್ರಾಮದಲ್ಲಿನ ತನ್ನ ನಿವಾಸದಲ್ಲಿ ಸಂತ್ರಸ್ತ ಯುವತಿಯೊಬ್ಬಳೇ ಇದ್ದ ಸಂದರ್ಭ ಆಕೆ ಮಾವನ ಮಗನಾದ ಮಂಜುನಾಥ ನಾಯ್ಕ್ ಆಕೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಕೊಲೆ ಬೆದರಿಕೆ ಹಾಕಿದ್ದ. ಆಕೆ ಇದರಿಂದಾಗಿ ಗರ್ಭಿಣಿಯಾಗಿದ್ದು ವಿಚಾರ ತಿಳಿಯುತ್ತಲೇ ಮನೆಯವರು ಮದುವೆ ಪ್ರಸ್ತಾಪ ಮಾಡಿದಾಗ ಆತ ಮದುವೆಗೆ ಒಲ್ಲೆ ಎನ್ನುತ್ತಾನೆ. 2010ಸೆಪ್ಟಂಬರ್ ತಿಂಗಳಿನಲ್ಲಿ ಸಂತ್ರಸ್ತ ಯುವತಿ ಖಾಸಗಿ ದೂರು ದಾಖಲಿಸಿದ್ದು ನ್ಯಾಯಾಲಯವು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬೈಂದೂರು ಠಾಣೆಗೆ ಆದೇಶ ನೀಡಿತ್ತು. ಅದರಂತೆಯೇ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಸಮಗ್ರ ತನಿಖೆಯನ್ನು ನಡೆಸಿದ್ದರು. ಬಳಿಕ ಆತ ಜಾಮೀನು ಪಡೆದು ಹೊರಬಂದಿದ್ದ. ಸಂತ್ರಸ್ತ ಯುವತಿ ಅದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗು ತನ್ನದಲ್ಲ ಎಂದು ಮಂಜುನಾಥ ನಾಯ್ಕನ ವಾದಿಸಿದ್ದ. ಆದರೆ ಪ್ರಾಸಿಕೂಶನ್ ಪರ ವಕೀಲ ಪ್ರಕಾಶ್ಚಂದ್ರ ಶೆಟ್ಟಿ ಈ ಸಮಜಾಯಿಷಿ ತಳ್ಳಿಹಾಕಿದ್ದು ಡಿ.ಎನ್.ಎ. ಪರೀಕ್ಷೆಗೆ ಅವಕಾಶ ನೀಡುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಡಿ.ಎನ್.ಎ ಪರೀಕ್ಷೆ ನಡೆದಿತ್ತು.ಆ ವರದಿಯಲ್ಲಿ ಮಂಜುನಾಥನದ್ದೇ ಮಗು ಎಂದು ದ್ರಢಪಟ್ಟಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.