ಕರ್ನಾಟಕ

ಬಳ್ಳಾರಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಸಿದ್ದು-ಡಿಕೆಶಿ ನಡುವೆ ಸಮರ

Pinterest LinkedIn Tumblr


ಬೆಂಗಳೂರು: ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಆಯ್ಕೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಳ್ಳಾರಿ ಹಾಲಿ ಉಸ್ತುವಾರಿ ಡಿ.ಕೆ.ಶಿವಕುಮಾರ್​ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದ್ದು, ಜಿಲ್ಲೆಯ ಕೈ ಶಾಸಕರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ಮುಖಂಡರೊಂದಿಗೆ ಸಭೆ ನಡೆಸಿದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್​ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಬಳ್ಳಾರಿ ಶಾಸಕರು ಅಭ್ಯರ್ಥಿ ಹೆಸರಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್​ ಇಬ್ಭಾಗವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ಅಭ್ಯರ್ಥಿ ಪರ ಬ್ಯಾಟ್ ಬೀಸುತ್ತಿದ್ದರೆ, ಡಿ.ಕೆ. ಶಿವಕುಮಾರ್ ಮತ್ತೊಬ್ಬ ಅಭ್ಯರ್ಥಿ ಪರ ವಕಾಲತ್ತು ವಹಿಸುತ್ತಿದ್ದಾರೆ. ಶಾಸಕ ಬಿ ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್ ಗೆ ಬೆಂಬಲ ನೀಡಿ ಅಂತ ಸಿದ್ದರಾಮಯ್ಯ ಶಾಸಕರ ಮೇಲೆ ಒತ್ತಡ ತಂದರೆ, ಯಾವುದೇ ಕಾರಣಕ್ಕೂ ವೆಂಕಟೇಶ ಪ್ರಸಾದ್ ಗೆ ಸಪೋರ್ಟ್ ಮಾಡ್ಬೇಡಿ ಅಂತಾ ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ. ಇಬ್ಬರು ನಾಯಕರು ಹೀಗೆ ನಮ್ಮ ಮೇಲೆ ಒತ್ತಡ ಹೇರಿದರೆ ಹೇಗೆ? ನಾವು ಚುನಾವಣೆ ಮಾಡೋದು ಹೇಗೆ? ಎಂದು ವೇಣುಗೋಪಾಲ್ ಮುಂದೆ ಸಂಕಷ್ಟ ತೋಡಿಕೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಾಂಗ್ರೆಸ್​ ಸಚಿವರು ಮತ್ತು ನಾಯಕರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಐದು ಚುನಾವಣಾ ಕ್ಷೇತ್ರಗಳಿಗೆ ಕಾಂಗ್ರೆಸ್ ಉಸ್ತುವಾರಿಗಳ ನೇಮಕ, ಇಂದು ಮಧ್ಯಾಹ್ನ ನಡೆಯುವ ರಾಹುಲ್ ಸಭೆಯಲ್ಲಿ ಪ್ರಸ್ತಾಪಿಸಬೇಕಾದ ವಿಯಷಗಳು, ಯಾವ ಸಚಿವರು ಯಾವ ಕ್ಷೇತ್ರದ ಉಸ್ತುವಾರಿ ಎಂಬುದರ ಬಗ್ಗೆ ಇಂದು ನಿರ್ಧಾರವಾಗಲಿದೆ.

Comments are closed.