ಕರ್ನಾಟಕ

ಪ್ರಿನ್ಸಿಪಾಲ್ ರಂಗನಾಥ್ ಹತ್ಯೆ: ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

Pinterest LinkedIn Tumblr


ಬೆಂಗಳೂರು: ಹಾವನೂರ್ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ರಂಗನಾಥ್ ಕೊಲೆಯ ಆರೋಪಿಗಳ ಪೈಕಿ ಒಬ್ಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಕಿರ್ಲೋಸ್ಕರ್ ಪೌಂಡ್ರಿ ಬಳಿ ಆರೋಪಿ ಮುನಿರಾಜು ಅಲಿಯಾಸ್ ಬಬ್ಲಿಯನ್ನು ಅರೆಸ್ಟ್ ಮಾಡಲಾಗಿದೆ. ತನ್ನನ್ನು ಹಿಡಿಯಲು ಬಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಬಬ್ಲಿ ಯತ್ನಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದರೆನ್ನಲಾಗಿದೆ. ಈ ಪ್ರಕರಣದ ಇತರ ಪ್ರಮುಖ ಆರೋಪಿಗಳು ಇನ್ನೂ ಸಿಗಬೇಕಿದೆ.

ವಿಜಯನಗರ ಮಾಗಡಿ ರಸ್ತೆ ಸಮೀಪದ ಅಗ್ರಹಾರ ದಾಸರಹಳ್ಳಿಯಲ್ಲಿ ಭಾನುವಾರ ಹಾಡಹಗಲೇ ಕೊಲೆಯಾಗಿದೆ. ಹಾವನೂರು ಪಬ್ಲಿಕ್ ಶಾಲೆಯ ಆವರಣದಲ್ಲೇ ಪ್ರಾಂಶುಪಾಲ ರಂಗನಾಥ್ ನಾಯಕ್ ಅವರನ್ನು ಚಾಕು ಮತ್ತು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಇವತ್ತು ಸ್ಪೆಷಲ್ ಕ್ಲಾಸ್​ಗೆಂದು ಬಂದಿದ್ದ ಶಾಲಾ ಮಕ್ಕಳ ಕಣ್ಣೆದುರೇ ಈ ಪೈಶಾಚಿಕ ಘಟನೆ ನಡೆದಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ರಂಗನಾಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ 10:30ಕ್ಕೆ ಈ ಘಟನೆ ಸಂಭವಿಸಿದೆ.

ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿ ಈ ಕೊಲೆ ನಡೆದಿರುವ ಶಂಕೆ ಇದೆ. ಗಂಗಮ್ಮ ಎಂಬುವರ ಮಕ್ಕಳಾದ ಪ್ರಸಾದ್ ಹಾಗೂ ಮಹೇಶ್ ಅವರು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆನ್ನಲಾಗಿದೆ. ಗಂಗಮ್ಮ ಹಾಗೂ ರಂಗನಾಥ್ ಮಧ್ಯೆ 10 ಅಡಿ ಜಾಗದ ಕುರಿತು ಹಲವು ವರ್ಷಗಳಿಂದಲೂ ವ್ಯಾಜ್ಯವಿತ್ತು. ಈ ವಿಚಾರದಲ್ಲಿ ಹಲವು ಬಾರಿ ಜಗಳಗಳಾಗಿತ್ತೆನ್ನಲಾಗಿದೆ. ರಂಗನಾಥ್ ಅವರಿಗೆ ಸೇರಬೇಕಾದ 10 ಅಡಿ ಜಾಗವನ್ನು ಗಂಗಮ್ಮ ಒತ್ತುವರಿ ಮಾಡಿಕೊಂಡ ಆರೋಪವಿದೆ. ರಂಗನಾಥ್ ಅವರು ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದುಕೊಂಡಿದ್ದರು. ಕೋರ್ಟ್ ಆದೇಶದ ಮೇರೆ ಮೊನ್ನೆ ಶುಕ್ರವಾರದಂದು ವ್ಯಾಜ್ಯದ 10 ಅಡಿ ಪ್ರದೇಶವನ್ನು ತೆರವುಗೊಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡು ಗಂಗಮ್ಮನ ಮಕ್ಕಳು ಈ ಕೊಲೆ ಮಾಡಿರಬಹುದೆಂಬ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆಯಾದ ಪ್ರಿನ್ಸಿಪಾಲ್ ರಂಗನಾಥ್

ಪ್ರತ್ಯಕ್ಷದರ್ಶಿ ಆಂಜನಪ್ಪ ಎಂಬುವರು ನೀಡಿರುವ ಮಾಹಿತಿ ಪ್ರಕಾರ, ಇವತ್ತು ಭಾನುವಾರ ಗಂಗಮ್ಮನ ಮಕ್ಕಳಾದ ಮಹೇಶ್, ಪ್ರಸಾದ್ ಹಾಗೂ ಅವರ ಸಂಗಡಿಗರು ಶಾಲೆಗೆ ಬಂದು ಪ್ರಿನ್ಸಿಪಾಲ್ ಜೊತೆ ರಾಜಿ ಸಂಧಾನದ ಮಾತಿಗೆ ಯತ್ನಿಸುತ್ತಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ದುಷ್ಕರ್ಮಿಗಳು ಚಾಕುವಿನಿಂದ ರಂಗನಾಥ್ ಅವರಿಗೆ ಬಾರಿ ಬಾರಿ ಇರಿಯುತ್ತಾರೆ.

ಆದರೆ, ರಂಗನಾಥ್ ನಾಯಕ್ ಅವರನ್ನ ತಮ್ಮ ಮಕ್ಕಳು ಕೊಲೆ ಮಾಡಿದ್ದಾರೆಂಬ ಆರೋಪವನ್ನು ಗಂಗಮ್ಮನ ಪತಿ ರಾಜು ತಳ್ಳಿಹಾಕಿದ್ದಾರೆ. ಆಸ್ತಿ ವಿಚಾರವಾಗಿ ತಮ್ಮ ತಂಟೆಗೆ ಬರೋದಿಲ್ಲವೆಂದು ತಾವೆಲ್ಲರೂ ಒಪ್ಪಿ ಅಗ್ರೀಮೆಂಟ್ ಮಾಡಿ ಕೊಟ್ಟಿದ್ದೇವೆ. ಈಗ ಇವರ ಕೊಲೆ ಯಾರು ಮಾಡಿದ್ದು ಎಂಬುದು ಗೊತ್ತಿಲ್ಲ. ಕೊಲೆಯಾದಾಗ ತಮ್ಮ ಮಕ್ಕಳು ಸ್ಥಳದಲ್ಲೇ ಇರಲಿಲ್ಲ ಎಂದು ರಾಜು ಹೇಳಿದ್ದಾರೆ. ಹಾಗೆಯೇ, ರಂಗನಾಥ್ ಅವರು ಜಮೀನು ಆಕ್ರಮಿಸಿಕೊಳ್ಳಲು ಕೋರ್ಟ್​ಗೆ ಹೋಗಿ ತೆರವುಗೊಳಿಸುವ ಕೆಲಸ ಮಾಡಿದರು ಎಂದು ರಾಜು ಈ ವೇಳೆ ತಮ್ಮ ಆಕ್ರೋಶವನ್ನೂ ಹೊರಹಾಕಿದ್ದಾರೆ.

ಕೊಲೆಯಾದ ರಂಗನಾಥ್ ನಾಯಕ್ ಅವರ ಪತ್ನಿಯ ದೂರನ್ನು ಪಡೆದು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳಾದ ಮಹೇಶ್ ಮತ್ತು ಪ್ರಸಾದ್ ಅವರು ತಮ್ಮ ಮೊಬೈಲನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳನ್ನ ಹಿಡಿಯಲು ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು 3 ತಂಡಗಳನ್ನ ರಚಿಸಿದ್ದಾರೆ. ಮಾಗಡಿ ರಸ್ತೆ ಠಾಣೆ ಇನ್ಸ್​ಪೆಕ್ಟರ್ ಹೇಮಂತ್ ನೇತೃತ್ವದಲ್ಲಿ ಒಂದು ತಂಡ; ಕೆ.ಪಿ. ಅಗ್ರಹಾರ ಠಾಣೆ ಇನ್ಸ್​ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಎರಡನೇ ತಂಡ; ಹಾಗೂ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್​ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ಮೂರನೇ ತಂಡವನ್ನು ರಚಿಸಲಾಗಿದೆ. ಇದೀಗ ಒಬ್ಬ ಆರೋಪಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಉಳಿದ ಆರೋಪಿಗಳನ್ನು ಹಿಡಿಯಲು ಪೊಲೀಸರು ಬಲೆಬೀಸಿದ್ದಾರೆ.

Comments are closed.