ಕರ್ನಾಟಕ

ಸುಪ್ರೀಂ ತೀರ್ಪಿಗೆ ಮುನ್ನವೇ ಬಡ್ತಿ ಮೀಸಲು ಕಾಯಿದೆ ಜಾರಿಗೆ ಮುಂದಾದ ರಾಜ್ಯ ಸರಕಾರ?

Pinterest LinkedIn Tumblr


ಬೆಂಗಳೂರು: ಬಡ್ತಿ ಮೀಸಲು ಪ್ರಕರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ಪರಿಶಿಷ್ಟ ನೌಕರರನ್ನು ರಕ್ಷಿಸುವ ಉದ್ದೇಶದ ಕಾಯಿದೆ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಶೀಘ್ರದಲ್ಲೆ ಈ ಸಂಬಂಧ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಧಿಕಾರಿಗಳು ಮತ್ತು ನೌಕರರ ಹಿತ ಕಾಯುವ ‘ಕರ್ನಾಟಕ (ರಾಜ್ಯದ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲು ಆಧಾರದ ಮೇಲೆ ಬಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆ ವಿಸ್ತರಿಸುವ ವಿಧೇಯಕ-2017’ ಈಗಾಗಲೇ ಕಾಯಿದೆಯ ಸ್ವರೂಪ ಪಡೆದುಕೊಂಡಿದೆ. ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ಈ ವಿಧೇಯಕಕ್ಕೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ. ಅದಾದ ಬಳಿಕ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗಿದೆ.

ಬಿ.ಕೆ. ಪವಿತ್ರ ಪ್ರಕರಣದ ಕುರಿತ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಕಾರಣ ಈ ಕಾಯಿದೆ ಜಾರಿ ಸಾಧ್ಯವಾಗಿಲ್ಲ. ಈಗಲೂ ಈ ವಿಚಾರಣೆ ಅಂತ್ಯಗೊಂಡಿಲ್ಲ. ಅ.23ರಂದು ಅಂತಿಮ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಇದರ ಮಧ್ಯೆಯೇ ಕಾಯಿದೆ ಜಾರಿಗೆ ಅಡ್ಡಿಯೇನೂ ಇಲ್ಲವೆಂದು ಎಸ್‌ಸಿ, ಎಸ್‌ಟಿ ನೌಕರರ ಸಂಘಟನೆ ಪ್ರತಿನಿಧಿಗಳು ಸರಕಾರಕ್ಕೆ ಒತ್ತಡ ತಂದಿದ್ದಾರೆ. ಪರಿಶಿಷ್ಟರನ್ನು ಪ್ರತಿನಿಧಿಸುವ ಸಚಿವರೂ ಈ ವಿಚಾರದಲ್ಲಿ ವಿಳಂಬ ಸಲ್ಲ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಾಯಿದೆ ಜಾರಿ ಬಗ್ಗೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಕಾಯಿದೆ ಅನುಷ್ಠಾನಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಬಹುದು ಎಂಬ ಸಲಹೆಯೂ ಬಂದಿದೆ. ಹಾಗಾಗಿ ಸುಪ್ರೀಂಕೋರ್ಟ್‌ನ ಮುಂದಿನ ವಿಚಾರಣೆಗೆ ಮುನ್ನವೇ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಬಿ.ಕೆ. ಪವಿತ್ರ ಪ್ರಕರಣದಲ್ಲಿ 2017ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್‌ ಹೊರಡಿಸಿದ ಆದೇಶದಂತೆ ಮೀಸಲಿನಡಿ ಬಡ್ತಿ ಪಡೆದುಕೊಂಡಿದ್ದ 3,750 ಎಸ್‌ಸಿ, ಎಸ್‌ಟಿ ನೌಕರರಿಗೆ ಹಿಂಬಡ್ತಿ ನೀಡಲಾಗಿದೆ. ಈ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಿ ಪರಿಷ್ಕೃತ ಜೇಷ್ಠತಾ ಪಟ್ಟಿ ತಯಾರಿಸಲಾಗಿತ್ತು. ರಾಜ್ಯದ ಕಾಯಿದೆ ಜಾರಿಗೊಳಿಸಿದರೆ ಈ ಎಲ್ಲ ನೌಕರರನ್ನು ಮೊದಲಿನ ಹುದ್ದೆಯಲ್ಲಿ ಮರು ನಿಯುಕ್ತಿಗೊಳಿಸಲಾಗುತ್ತದೆ. ಆದರೆ, ಇದನ್ನು ಸಂಖ್ಯಾಧಿಕ ಕೋಟಾವೆಂದು (ಸೂಪರ್‌ ನ್ಯೂಮರರಿ) ಪರಿಗಣಿಸಲಾಗುತ್ತದೆ. ಆದರೆ, ಕಾರ್ಯಕಾರಿ ಹುದ್ದೆ (ಎಕ್ಸಿಕ್ಯೂಟಿವ್‌ ಪವರ್‌) ಕುರಿತು ಕಾಯಿದೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೆ ಇರುವುದರಿಂದ ಈ ಬಗ್ಗೆ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿದೆ.

ನೀತಿ ಸಂಹಿತೆ ಜಿಜ್ಞಾಸೆ

ರಾಜ್ಯದ ಕಾಯಿದೆಯನ್ನು ಜಾರಿಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ (ಡಿಪಿಎಆರ್‌) ಸೂಚನೆಯೊಂದನ್ನು ಕಳುಹಿಸಿ ಕೊಟ್ಟರೆ ಸಾಕಾಗುತ್ತದೆ. ಆದರೆ, ಉಪ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಆಡಳಿತಾತ್ಮಕವಾಗಿ ಇಂಥ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲವೆಂದು ಸರಕಾರಕ್ಕೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿಯವರೂ ನೀತಿ ಸಂಹಿತೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಜತೆಗೆ ಸುಪ್ರೀಂಕೋರ್ಟ್‌ನ ಮುಂದಿನ ವಿಚಾರಣೆಯವರೆಗೆ ಕಾಯುವುದು ಉತ್ತಮವೆಂಬ ಅಭಿಪ್ರಾಯವನ್ನೂ ನೀಡಿದ್ದಾರೆ. ಸಂಪುಟದ ಕೆಲವು ಸದಸ್ಯರು ಇದನ್ನು ಒಪ್ಪಲು ಸಿದ್ಧರಿಲ್ಲ. ಪರಿಶಿಷ್ಟ ನೌಕರರಿಗೆ ಹಿಂಬಡ್ತಿ ನೀಡುವಾಗಲೂ ವಿಧಾನಸಭೆ ಚುನಾವಣೆ ನೀತಿ ಸಂಹಿತೆಯಿತ್ತು. ಅಷ್ಟಕ್ಕೂ ಈಗ 5 ಜಿಲ್ಲೆಗಳಿಗೆ ಸೀಮಿತವಾಗಿ ನೀತಿ ಸಂಹಿತೆಯಿದೆ ಎಂದು ಗಮನ ಸೆಳೆದಿದ್ದಾರೆ. ಹಾಗಾಗಿ ಕಾನೂನು ಸಂಘರ್ಷಕ್ಕೆ ಆಸ್ಪದವಾಗದಂತೆ ಆದಷ್ಟು ಬೇಗ ಕಾಯಿದೆ ಜಾರಿಗೆ ಕ್ರಮ ಕೈಗೊಳ್ಳಬೇಕು. ಬಿ.ಕೆ. ಪವಿತ್ರ ಪ್ರಕರಣದಲ್ಲಿ ರಾಜ್ಯ ಸರಕಾರದ ಪರ ಸುಪ್ರೀಂಕೋರ್ಟ್‌ನಲ್ಲಿ ವಾದಿಸುತ್ತಿರುವ ಹಿರಿಯ ವಕೀಲ ಮುಕುಲ್‌ ರೋಹಟಗಿ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನಕ್ಕೆ ಬರಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತಿಭಟನೆ ಎಚ್ಚರಿಕೆ

ಸರಕಾರ ತರಾತುರಿಯಲ್ಲಿ ಕಾಯಿದೆ ಜಾರಿ ಮಾಡಬಾರದು. ಇದರಿಂದ ಮತ್ತಷ್ಟು ಸಮಸ್ಯೆ ಎದುರಾಗುತ್ತದೆ. ನ್ಯಾಯಾಂಗ ನಿಂದನೆಗೂ ಗುರಿಯಾಗುವ ಆತಂಕವಿದೆ. ಹಾಗಾಗಿ ಸುಪ್ರೀಂಕೋರ್ಟ್‌ ವಿಚಾರಣೆ ಪೂರ್ಣಗೊಂಡ ಬಳಿಕವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅಹಿಂಸಾ ಸಂಘಟನೆ ಎಚ್ಚರಿಕೆ ನೀಡಿದೆ.

“ರಾಜ್ಯದ ಕಾಯಿದೆ ಈಗಾಗಲೇ ಗೆಜೆಟ್‌ ಆಗಿದೆ. ಹಿಂಬಡ್ತಿಗೆ ಒಳಗಾದವರಿಗೆ ಈ ಹಿಂದಿನ ಹುದ್ದೆ ನೀಡಲು ಸೂಚನೆ ಕೊಟ್ಟರೆ ಕಾಯಿದೆ ಜಾರಿಗೊಳಿಸಿದಂತಾಗುತ್ತದೆ. ಸುಪ್ರೀಂಕೋರ್ಟ್‌ನಲ್ಲಿ ಬಿ.ಕೆ. ಪವಿತ್ರ ಪ್ರಕರಣದ ವಿಚಾರಣೆ ಬಾಕಿಯಿದ್ದರೂ ಈ ಕಾಯಿದೆ ಜಾರಿಗೊಳಿಸಲು ತೊಂದರೆಯಿಲ್ಲ. ಪರಿಶಿಷ್ಟರ ಹಿತ ಕಾಯುವುದನ್ನು ಸರಕಾರ ಆದ್ಯತೆಯಾಗಿ ಪರಿಗಣಿಸಬೇಕು.”
— ಶಿವಶಂಕರ್‌, ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ

“ರಾಜ್ಯದ ಕಾಯಿದೆ ಸಂಬಂಧ ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಈ ನಡುವೆಯೂ ಕಾಯಿದೆ ಜಾರಿಗೊಳಿಸಿದರೆ ಸರಕಾರವೇ ತೊಂದರೆಗೆ ಸಿಲುಕಲಿದೆ. ಜತೆಗೆ ನಾವು ಅಸಹಕಾರ ಚಳವಳಿ ಪ್ರಾರಂಭಿಸುತ್ತೇವೆ.”
— ಎಂ. ನಾಗರಾಜ್‌, ಅಹಿಂಸಾ ಸಂಘಟನೆ ರಾಜ್ಯಾಧ್ಯಕ್ಷ

Comments are closed.