ರಾಷ್ಟ್ರೀಯ

ಶಬರಿಮಲೆಗೆ ಹೊರಟಿದ್ದ ಮಹಿಳೆಗೆ ಸಿಗದ ಅಯ್ಯಪ್ಪನ ದರ್ಶನ

Pinterest LinkedIn Tumblr


ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಇದೀಗ ಭಾರೀ ವಿವಾದವನ್ನು ಸೃಷ್ಟಿಸಿದೆ. ವಾರ್ಷಿಕ ಪೂಜೆ 5 ದಿನ ನಡೆಯಲಿದ್ದು, ಪೂಜೆಗಾಗಿ ಮೂರು ದಿನಗಳ ಹಿಂದೆ ಅಯ್ಯಪ್ಪನ ದೇಗುಲದ ಬಾಗಿಲು ತೆರೆದಿದೆ. ಸುಪ್ರೀಂ ತೀರ್ಪಿನಂತೆ ಮೂರು ದಿನಗಳಿಂದ ಮಹಿಳೆಯರು ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದರಾದರೂ, ಪ್ರತಿಭಟನಾಕಾರರು ಹಾಗೂ ಭಕ್ತರ ಆಕ್ರೋಶ ಕಂಡು ಹಿಂದೆ ಸರಿದಿದ್ದಾರೆ. ಇಂದು ಒಟ್ಟು ಮೂವರು ಮಹಿಳೆಯರು ಶಬರಿಮಲೆ ಆವರಣಕ್ಕೆ ತಲುಪಿದರಾದರೂ ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ ತಲುಪಲು ಸಾಧ್ಯವಾಗದೆ ಹಿಂತಿರುಗಿದ್ದಾರೆ. ಪೊಲೀಸರು ಕೂಡಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಷ್ಟಕ್ಕೂ ಇಂದು ಏನೇನಾಯ್ತು? ಮಹಿಳೆಯರು ಹಿಂತಿರುಗಿದ್ದೇಕೆ? ಇಲ್ಲಿದೆ ವಿವರ

ಕೇರಳದ ಶಬರಿಮಲೆ 3ನೇ ದಿನವೂ ಭಾರೀ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಕಳೆದೆರಡು ದಿನಗಳಿಂದ ಮಹಿಳೆಯರನ್ನು ಅರ್ಧ ದಾರಿಯಲ್ಲೇ ಪ್ರತಿಭಟನಾಕಾರರು ತಡೆದಿದ್ದರು, ಕಲ್ಲು ತೂರಾಟವೂ ನಡೆದಿತ್ತು.ಈಗಾಗಲೇ ಕೇರಳ ಪೊಲೀಸರು ಭದ್ರತೆಗಾಗಿ ಕಮಾಂಡೋ ಪಡೆಯನ್ನು ಕರೆದಿದೆ. ಇವರೆಲ್ಲರೂ ಸೇರಿ ಶಬರಿಮಲೆಯಲ್ಲಿ ಪರಿಸ್ಥಿತಿ ಶಾಂತಗೊಳಿಸಲು ಯತ್ನಿಸುತ್ತಿದ್ದಾರಾದರೂ ಯಾವುದೇ ಉಪಯೋಗವಾಗುತ್ತಿಲ್ಲ. ಸುಪ್ರೀಂ ಕೋರ್ಟ್​ ಆದೇಶ ಜಾರಿಯಾದರೂ ಈವರೆಗೆ ಯಾವೊಬ್ಬ ಮಹಿಳೆಯೂ ದೇಗುಲ ಪ್ರವೇಶಿಸಲು ಸಾಧ್ಯವಾಗಿಲ್ಲ. ಇಂದು ಬೆಳಗ್ಗೆ ತೆಲಂಗಾಣದ ಪತ್ರಕರ್ತೆ ಹಾಗೂ ಕೊಚ್ಚಿಯ ಸಾಮಾಜಿಕ ಹೋರಾಟಗಾರ್ತಿ ಶಬರಿಮಲೆಗೆ ಹೊರಟಿದ್ದರು. ಭಾರೀ ವಿರೋಧ ವ್ಯಕ್ತವಾದರೂ ಮುಂದೆ ಸಾಗುತ್ತಿದ್ದ ಇವರನ್ನು ಕಂಡು ಇಂದು ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರು ಪ್ರವೇಶಿಸುವುದು ಖಚಿತ ಎಂದೇ ತಿಳಿಯಲಾಗಿತ್ತು. ಈ ನಡುವೆ ಸಾಮಾಜಿಕ ಕಾರ್ಯಕರ್ತೆಯ ಮನೆಯ ಮೇಲೂ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಇನ್ನೇನು ದೇಗುಲಕ್ಕೆ ತಲುಪಲು ಕೇವಲ 500 ಮೀಟರ್​ ಇದೆ ಎನ್ನುವಷ್ಟರಲ್ಲಿ ಪೂಜೆ ಅರ್ಧದಲ್ಲೇ ನಿಲ್ಲಿಸಿದ ಪ್ರಧಾನ ಅರ್ಚಕರು ಮಹಿಳೆಯರನ್ನು ತಡೆಯಲು ತಾವಾಗೆ ಪ್ರಧಾನ ದ್ವಾರದ ಬಳಿ ಬಂದು ನಿಂತಿದ್ದರು.

ಈ ವೇಳೆ ಇಬ್ಬರೂ ಮಹಿಳೆಯರು ಸೇರಿದಂತೆ ಕೇರಳ ಐಜಿ ಎಸ್​.ಶ್ರೀಜಿತ್​ಗೆ ಮನವಿ ಮಾಡಿಕೊಂಡ ಪ್ರಧಾನ ಅರ್ಚಕ ​ಕಂಡರಾರು ರಾಜೀವನ್​ “ಮಹಿಳೆಯರು 18 ಮೆಟ್ಟಿಲು ಏರಿ ದೇಗುಲ ಪ್ರವೇಶಿಸಿದರೆ ಎಲ್ಲಾ ಪೂಜಾ ಕಾರ್ಯಗಳನ್ನು ನಿಲ್ಲಿಸಿ ಗರ್ಭಗುಡಿ ಬಾಗಿಲು ಮುಚ್ಚಿ ಮನೆಗೆ ಹೋಗುತ್ತೇನೆ. ನಾನು ಭಕ್ತರೊಂದಿಗಿದ್ದೇನೆ. ಭಕ್ತರ ಭಾವನೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾಗಿ ನಾನು ಭಕ್ತರನ್ನು ಬೆಂಬಲಿಸುತ್ತೇನೆ” ಎಂದಿದ್ದಾರೆ. ಇವರ ಈ ಮನವಿಗೆ ಸ್ಪಂದಿಸಿದ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ದೇಗುಲ ಪ್ರವೇಶಿಸದೆ ಹಿಂತಿರುಗಿದ್ದಾರೆ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇರಳ ಐಜಿ ಎಸ್​.ಶ್ರೀಜಿತ್ “ಶಬರಿಮಲೆ ದೇಗುಲದ ತಂತ್ರಿಗಳು ನನ್ನ ಜೊತೆ ಚರ್ಚಿಸಿದ್ದಾರೆ. ಮಹಿಳೆಯರು ಪ್ರವೇಶಿಸಿದರೆ ಆಚಾರ ಉಲ್ಲಂಘನೆಯಾಗುತ್ತೆ. ದೇವರ ದರ್ಶನಕ್ಕೆ ಅವಕಾಶ ಕೊಡಲ್ಲ ಎಂದು ತಂತ್ರಿ ಹೇಳಿದ್ದಾರೆ. ಹೀಗಾಗಿ ಇಬ್ಬರು ಮಹಿಳೆಯರನ್ನು ವಾಪಸ್​ ಕರೆದೊಯ್ಯಲು ತೀರ್ಮಾನಿಸಿದ್ದೇವೆ. ಇದಕ್ಕೆ ಮಹಿಳೆಯರೂ ಒಪ್ಪಿಗೆ ನೀಡಿದ್ದಾರೆ” ಎಂದಿದ್ದಾರೆ.

ಹೀಗಿದ್ದರೂ ಬೇಸ್​ ಕ್ಯಾಂಪ್​ ತಲುಪಿದ ಪತ್ರಕರ್ತೆ “ನಮಗೆ ನೀಡಿದ ಭದ್ರತೆ ಹಾಗೂ ಕೈಗೊಂಡ ಕ್ರಮಗಳನ್ನು ನೋಡಿ ಬಹಳ ಖುಷಿಯಾಯ್ತು. ಆದರೆ ನಾವು ದೇಗುಲಕ್ಕೆ ಮರಳಿ ಬರುತ್ತೇವೆ” ಎಂದಿದ್ದಾರೆ. ಈ ಮೂಲಕ ದೇಗುಲ ಪ್ರವೇಶಿಸುವುದು ಖಚಿತ ಎಂಬುವುದನ್ನು ತಿಳಿಸಿದ್ದಾರೆ.

ಇಬ್ಬರು ಮಹಿಳೆಯರು ಹಿಂತಿರುಗುತ್ತಿದ್ದಂತೆಯೇ ಬೇಸ್​ ಕ್ಯಾಂಪ್​ನಿಂದ ಮತ್ತೊಬ್ಬ ಹೋರಾಟಗಾರ್ತಿ ಶಬರಿಮಲೆಗೆ ಹೊರಟಿದ್ದಾರೆ. ಆದರೆ ಅರ್ಧದಾರಿ ತಲುಪುತ್ತಿದ್ದಂತೆಯೇ ಅವರ ಮನೆ ಮೇಲೂ ಪ್ರತಿಭಟನಾಕಾರರು ದಾಳಿ ನಡೆಸಿದ್ದರಿಂದ ಅವರೂ ದೇಗುಲಕ್ಕೆ ತಲುಪದೆ, ಹಿಂತಿರುಗಿದ್ದಾರೆ.

“ನಾನೊಬ್ಬ ಭಕ್ತೆಯಾಗಿ ಶಬರಿಮಲೆಗೆ ಹೊರಟಿದ್ದೆ. ಆದರೆ ನನ್ನನ್ನು ಇಲ್ಲಿ ಭಕ್ತರೇ ತಡೆದಿದ್ದಾರೆ, ಇದು ತಪ್ಪಲ್ಲವೇ? ಇದನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ತಮ್ಮಂತಹ ಭಕ್ತರನ್ನು ಅವರು ಹೀಗೆ ದೂರ ಕಳುಹಿಸುವುದು ಎಷ್ಟು ಸರಿ? ಅವರು ನಮ್ಮನ್ನು ಬೆದರಿಸಿದ್ದಾರೆ, ಹೀಗಿರುವಾಗಿ ಅವರು ತಮ್ಮನ್ನು ತಾವು ಹೇಗೆ ಭಕ್ತರು ಎನ್ನಲು ಸಾಧ್ಯ?” ಎಂಬುವುದು ಶಬರಿಮಲೆಗೆ ತೆರಳಿ ದೇಗುಲಕ್ಕೆ ಭೇಟಿ ನೀಡಲಾಗದೆ ಮರಳಿದ ಸಾಮಾಜಿಕ ಕಾರ್ಯಕರ್ತೆಯ ಮಾತು.

ಸದ್ಯ ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವ ವಿಚಾರ ರಾಜಕೀಯ ಬಣ್ಣ ಪಡೆದುಕೊಂಡಿದೆ. ಅತ್ತ ಮಹಿಳೆಯರು ಹಿಂತಿರುಗಿದ ವಿಚಾರ ಪ್ರತಿಭಟನಾಕಾರರಿಗೆ ಸಮಾಧಾನ ನೀಡಿದರೆ, ಇತ್ತ ಸುಪ್ರೀಂ ಕೋರ್ಟ್​ ತೀರ್ಪು ಬೆಂಬಲಿಸಿದವರನ್ನು ಮತ್ತಷ್ಟು ಕೆರಳಿಸಿದೆ. ಹೀಗಾಗಿ ಕಾನೂನು ಉಲ್ಲಂಘನೆಯಾಗುತ್ತಿದೆ ಎಂಬ ಧ್ವನಿಯೂ ಸದ್ಯ ಸದ್ದು ಮಾಡಲಾರಂಭಿಸಿದೆ. ಇವೆಲ್ಲದರ ನಡುವೆ ಎರಡೂ ಬಣಗಳು ಇಲ್ಲಿನ ಪೊಲೀಸ್​ ಇಲಾಖೆಯನ್ನು ದೂರಲಾರಂಭಿಸಿವೆ. ಒಂದೆಡೆ ಪೊಲೀಸರು ಶಬರಿಮಲೆಯ ಪರಂಪರೆಯನ್ನು ಅರಿತು ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದರೆ, ಮತ್ತೊಂದು ಬಣ ಸುಪ್ರೀಂ ಕೋರ್ಟ್​ ತೀರ್ಪಿನಂತೆ ಮಹಿಳೆಯರನ್ನು ದೇಗುಲಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು, ಪೊಲೀಸರು ಅವರಿಗೆ ಭದ್ರತೆ ಒದಗಿಸಬೇಕು ಎಂದು ಹೇಳಲಾರಂಭಿಸಿದ್ದಾರೆ. ಈ ಎರಡೂ ಬಣಗಳ ನಡುವೆ ಇಲ್ಲಿನ ಪೊಲೀಸ್​ ಇಲಾಖೆ ಮಾತ್ರ ಇಕ್ಕಟ್ಟಿಗೆ ಸಿಲುಕಿದೆ.

ಈ ವಿವಾದಕ್ಕೆ ಸಮಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇರಳ ಸಚಿವೆ ಕೆ. ಕೆ ಶೈಲಜಾ “ಕೇರಳ ಸರ್ಕಾರವು ಸುಪ್ರೀಂ ಕೋರ್ಟ್​ನ ಆದೇಶವನ್ನು ಪಾಲಿಸಲಿದೆ. ಹೀಗಂತ ಸರ್ಕಾರ ಇಲ್ಲಿನ ಭಕ್ತರ ಭಾವನೆಗಳನ್ನು ಘಾಸಿಗೊಳಿಸಲು ಇಚ್ಛಿಸುತ್ತಿಲ್ಲ. ಹೀಗಾಗಿ ಯಾವೊಬ್ಬ ಮಹಿಳೆಗೂ ದೇಗುಲಕ್ಕೆ ಪ್ರವೇಶಿಸಿ ಎಂದು ಒತ್ತಾಯಿಸುವುದಿಲ್ಲ. ಮಹಿಳೆಯರಿಗೆ ದೇಗುಲಕ್ಕೆ ಹೋಗಬೇಕೆಂಬ ಇಚ್ಛೆ ಇದ್ದರೆ ಭದ್ರತೆ ಒದಗಿಸಲಾಗುತ್ತದೆ” ಎಂದಿದ್ದಾರೆ.

Comments are closed.