ರಾಷ್ಟ್ರೀಯ

ಮೀಟೂ: ಹೋಟೆಲ್ ನಲ್ಲಿ ಯಾವ ರೂಮ್ ಬುಕ್ ಮಾಡಲಿ ಎಂದು ಕೇಳಿದ್ದರು: ಬಿಜೆಪಿ ಮಾಜಿ ಸಚಿವ ಶಿವಾನಂದ ನಾಯ್ಕ್ ವಿರುದ್ಧ ಮಹಿಳೆ ಆರೋಪ

Pinterest LinkedIn Tumblr


ಬೆಂಗಳೂರು: ದೇಶದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಮೀಟೂ ಈಗ ರಾಜ್ಯ ರಾಜಕೀಯದಲ್ಲೂ ಸದ್ದು ಮಾಡಿದ್ದು, ಬಿಜೆಪಿ ಮುಖಂಡ, ಮಾಜಿ ಸಚಿವ ಶಿವಾನಂದ ನಾಯ್ಕ್ ವಿರುದ್ಧ ಆರೋಪ ಕೇಳಿ ಬಂದಿದೆ.

ಈ ಹಿಂದೆ ರಾಜ್ಯ ಬಿಜೆಪಿಯಲ್ಲಿ ಕೆಲಸ ಮಾಡಿದ್ದ ಮಾಧುರಿ ಎಂಬವರು ತಮ್ಮ ಫೇಸ್‍ಬುಕ್ ನಲ್ಲಿ ಭಟ್ಕಳ ಮಾಜಿ ಶಾಸಕ ಶಿವಾನಂದ ನಾಯಕ್ ಮೇಲೆ ಆರೋಪ ಮಾಡಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಶಿವಾನಂದ ನಾಯಕ್ ಅವರ ಪರಿಚಯವಾಯಿತು. ಬಳಿಕ ಅವರ ಖಾಸಗಿ ಫೋನ್ ನಂಬರ್ ಪಡೆದು, ತನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು. ತಮಗೆ 100ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದು, ಊಟ, ಕಾಪಿಗೆ ಬಂದು ತಮ್ಮೊಂದಿಗೆ ರಾತ್ರಿ ಪೂರ್ಣ ಕಾಲ ಕಳೆಯುವಂತೆ ಹೇಳಿದ್ದರು ಎಂದು ಆರೋಪಿಸಿದ್ದಾರೆ.

ಎಫ್‍ಬಿ ಪೋಸ್ಟ್ ನಲ್ಲಿ ಏನಿದೆ?
ನಾನು ಕೆಲ ಮುಖಂಡರಿಗೆ ಫೋನ್ ನಂಬರ್ ನೀಡಿದ್ದನ್ನು ಅವರು ಗ್ರೀನ್ ಸಿಗ್ನಲ್ ಎಂದೇ ಭಾವಿಸಿದ್ದರು. ನನ್ನನ್ನು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಕಾಫಿಗಾಗಿ ಕರೆದಿದ್ದರು. ಕಾಫಿ ಕುಡಿಯುವಾಗ ಯಾವ ರೂಮ್ ಬುಕ್ ಮಾಡಲಿ ಎಂದು ಕೇಳಿದ್ದರು. ಯಾಕೆ ಎಂದು ಕೇಳಿದಾಗ ನಿಮ್ಮ ಪ್ರಿಫರೆನ್ಸ್ ನೋಡಬೇಕು ವಿತ್ ಟಬ್ ಆರ್ ವಿಥೌಟ್ ಟಬ್ ಎಂದಿದ್ದರು. ನಾನು ಕೂಡಲೇ ಕಾಫಿಯನ್ನು ಅವರ ಮುಖದ ಮೇಲೆ ಎಸೆದಿದ್ದೆ. ಆಗ ನನಗೆ 500 ರೂ.ಗಳ ಬಂಡಲ್ ಹಣ ಕೊಡಲು ಬಂದಿದ್ರು. ನನ್ನ ಕೈ ಹಿಡಿದು ಎಳೆದಾಡಿದರು. ಅವರು 50 ಸಾವಿರ ರೂ.ಗೆ ನನ್ನನ್ನು ಖರೀದಿಸಬಹುದು ಎಂದುಕೊಂಡಿದ್ದರು. ಇದಕ್ಕೆ ನಾನು, ನೀವು ಇಲ್ಲಿಂದ ಹೊರಗಡೆ ಹೋಗ್ತೀರಾ ಅಥವಾ ಹೊಡೆಯಬೇಕೇ ಎಂದು ಪ್ರಶ್ನಿಸಿದೆ. ಕೂಡಲೇ ಅವರು ಹೊರಟು ಹೋದರು. ಈ ಘಟನೆಯಾದ ಬಳಿಕ 100 ಬಾರಿ ನನಗೆ ಕರೆ ಮಾಡಿದ್ದು ನನಗೆ ನೆನಪಿದೆ. ಆ ಸಮಯದಲ್ಲಿ ಮೊಬೈಲ್ ನಲ್ಲಿ ಯಾವುದೇ ಬ್ಲಾಕ್ ಆಯ್ಕೆಗಳು ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ..

ಈ ಕುರಿತು ಪ್ರತಿಕ್ರಿಯಿಸಿರುವ ಶಿವಾನಂದ್ ನಾಯ್ಕ್, ವೈಯಕ್ತಿಕವಾಗಿ ಅವರ ಪರಿಚಯ ನನಗಿಲ್ಲ. ಅವರು ಯಾರೆಂಬುದೇ ನನಗೆ ಗೊತ್ತಿಲ್ಲ. ಅಂತಹ ಯಾವುದೇ ಆರೋಪವನ್ನು ಅವರು ಸಾಬೀತು ಪಡಿಸಲಿ, ನಾನು ಯಾವುದೇ ಹೆಣ್ಣು ಮಕ್ಕಳ ಜೊತೆ ಆ ರೀತಿ ನಡೆದುಕೊಂಡಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದೇನೆ. ಅವರ ಹೇಳಿಕೆಗಳು ಸುಳ್ಳು, ನನ್ನನ್ನು ಮುಂದಿನ ಲೋಕಸಭಾ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದ್ದು, ಇದನ್ನು ತಪ್ಪಿಸಲು ಉದ್ದೇಶ ಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ದೂರನ್ನು ದಾಖಲಿಸುತ್ತೇನೆ ಎಂದು ತಿಳಿಸಿದರು.

ಫೇಸ್‍ಬುಕ್ ನಲ್ಲಿ ಬಿಜೆಪಿ ನಾಯಕರ ಬಗ್ಗೆ ಹೇಳಿಕೊಂಡಿದ್ದ ಮಾಧುರಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಈ ಹಿಂದೆ ಪ್ರಕಟಿಸಿದ್ದ ಪೋಸ್ಟನ್ನು ಡಿಲೀಟ್ ಮಾಡಿದ್ದಾರೆ.

Comments are closed.