ಕರ್ನಾಟಕ

ವೇದಿಕೆಯಲ್ಲಿಯೇ ಡಿಕೆಸಿ ವಿರುದ್ಧ ಸಿಟ್ಟಾದ ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಲಿಂಗಾಯತ ಧರ್ಮ ವಿಚಾರದಲ್ಲಿ ನಾನು ಸೇರಿದಂತೆ ಕಾಂಗ್ರೆಸ್​ ಸರ್ಕಾರ ತಪ್ಪು ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್​ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಟ್ಟಾದ ಘಟನೆ ನಡೆಯಿತು.

ದೇವೇಗೌಡರೊಂದಿಗೆ ಜಂಟಿ ಸುದ್ದಿಗೋಷ್ಠಿನಡೆಸುತ್ತಿದ್ದ ವೇಳೆ ತಮ್ಮದೇ ಪಕ್ಷದ ನಾಯಕರು ತನ್ನ ಸರ್ಕಾರದ ನಿರ್ಧಾರದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಇದಕ್ಕೆ ನಿಮ್ಮ ಉತ್ತರ ಏನು ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಲಾಯಿತು.

ಈ ವೇಳೆ ಸಿಟ್ಟಿಗೆದ್ದ ಸಿದ್ದರಾಮಯ್ಯ, ಈ ವಿಚಾರಕ್ಕೆ ನಾನು ಯಾವುದೇ ಉತ್ತರವನ್ನು ಇಲ್ಲಿ ನೀಡುವುದಿಲ್ಲ. ಹೊರಗೆ ಈ ಬಗ್ಗೆ ಅಭಿಪ್ರಾಯ ತಿಳಿಸುತ್ತೇನೆ. ಇಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಡಿ ಎಂದರು. ಈ ವೇಳೆ ಡಿಕೆ ಶಿವಕುಮಾರ್​ ಕೂಡ ಇದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಕ್ಷಕ್ಕೂ ಹೇಳಿಕೆಗೂ ಸಂಬಂಧವಿಲ್ಲ:

ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಅವರು, ಸಚಿವ ಡಿಕೆ ಶಿವಕುಮಾರ್​ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು.

ಲಿಂಗಾಯತ ಧರ್ಮಕ್ಕೆ ಶಿಫಾರಸು ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿದ್ದೆವು. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವಾಗ ಡಿಕೆಶಿ ಕೂಡಾ ಇದ್ದರು. ಈಗ ಯಾವ ಅರ್ಥದಲ್ಲಿ ಡಿ.ಕೆ.ಶಿವಕುಮಾರ್​ ಹೇಳಿದ್ದಾರೋ ಗೊತ್ತಿಲ್ಲ. ಡಿಕೆಶಿ ಹೇಳಿಕೆಯಿಂದ ಯಾವುದೇ ಪರಿಣಾಮ‌ ಉಂಟಾಗುವುದಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಚುನಾವಣೆ ಮೇಲೆ ಪ್ರಭಾವ ಬೀರಲ್ಲ. ನನ್ನನ್ನ ಯಾರೂ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ

ಡಿಕೆ ಶಿವಕುಮಾರ್​ ಹೇಳಿಕೆ ವಿರುದ್ಧ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದು, ಇಂದು ಜಂಟಿ ಪತ್ರಿಕಾಗೋಷ್ಠಿಗೆ ಮುನ್ನ ಡಿಕೆಶಿಯನ್ನು ನೋಡಿದರೂ ಸಿದ್ದರಾಮಯ್ಯ ಮಾತನಾಡಿಸಲಿಲ್ಲ.

ಅಲ್ಲದೇ ಅಕ್ಕ ಪಕ್ಕ ನಿಂತರೂ ಒಬ್ಬರು,ಇನ್ನೊಬ್ಬರನ್ನು ನೋಡಲಿಲ್ಲ, ಹೊಟೇಲ್​ ಒಳಗೆ ಹೋದರೂ ಸಿದ್ದರಾಮಯ್ಯ ಡಿಸಿಎಂ ಪರಮೇಶ್ವರ್​ ಜೊತೆ ಮಾತನಾಡಿದರೂ ವಿನಃ ಡಿಕೆ ಶಿವಕುಮಾರ್​ ಮುಖ ನೋಡಲು ಹೋಗಲಿಲ್ಲ.ಇತ್ತ ಡಿಕೆ ಶಿವಕುಮಾರ್​ ಕೂಡ ಸಿದ್ದರಾಮಯ್ಯ ಅವರನ್ನು ಮಾತನಾಡಿಸುವ ಸಾಹಸಕ್ಕೆ ಮುಂದಾಗಲಿಲ್ಲ.

ಕಾಂಗ್ರೆಸ್​ ಸರ್ಕಾರದಲ್ಲಿ ಆಪ್ತರಾಗಿದ್ದ ಡಿಕೆ ಶಿವಕುಮಾರ್​, ಸಿದ್ದರಾಮಯ್ಯ ಮೈತ್ರಿ ಸರ್ಕಾರದ ಬಳಿಕ ಕೊಂಚ ಅಂತರ ಕಾಯ್ದುಕೊಂಡಿದ್ದರು. ಮೈತ್ರಿ ಸರ್ಕಾರ ರಚನೆಯಲ್ಲಿ ಪಕ್ಷ ಮುಖ್ಯ. ವ್ಯಕ್ತಿ ಅಲ್ಲ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಸಿದ್ದರಾಮಯ್ಯಗೆ ಟಾಂಗ್​ ನೀಡಿದರು.

Comments are closed.