ರಾಷ್ಟ್ರೀಯ

ಶಬರಿಮಲೆ: ಬೆಟ್ಟ ಏರ ಹೊರಟ ಸಾಮಾಜಿಕ ಕಾರ್ಯಕರ್ತೆಯ ಹಿನ್ನೆಲೆ ಪರೀಕ್ಷಿಸಲು ಮುಂದಾದ ಪೊಲೀಸರು

Pinterest LinkedIn Tumblr


ತಿರುವನಂತಪುರಂ: ಉದ್ವಿಗ್ನ ಸ್ಥಿತಿ ನಡುವೆಯೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲು ಹೊರಟಿರುವ ಸಾಮಾಜಿಕ ಕಾರ್ಯಕರ್ತೆಯ ಹಿನ್ನೆಲೆ ಪರೀಕ್ಷಿಸಲು ಪೊಲೀಸರು ಮುಂದಾಗಿದ್ದಾರೆ.

ಇರುಮುಡಿ ಹೊತ್ತು ಶನಿವಾರ ಮಧ್ಯಾಹ್ನ ಪಂಪಾ ಬೇಸ್‌ಕ್ಯಾಂಪ್‌ ತಲುಪಿದ ಕೇರಳ ದಲಿತ ಮೋರ್ಚಾ ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಮಂಜು ಅವರು, ಅಲ್ಲಿಂದ 5 ಕಿ.ಮೀ ದೂರದವರೆಗೆ ಬೆಟ್ಟ ಏರಲು ಪೊಲೀಸರ ರಕ್ಷಣೆ ಕೋರಿದರು. ತೀರ್ಮಾನ ಪುನರ್‌ ಪರಿಶೀಲಿಸುವಂತೆ ಪೊಲೀಸರು ಸಾಕಷ್ಟು ಸಲ ಮನವಿ ಮಾಡಿದರೂ ಆಕೆ ಜಗ್ಗಲಿಲ್ಲ. ಕೆಲಸಮಯದಲ್ಲೇ ಮಳೆ ಆರಂಭವಾದರೂ ಬೆಟ್ಟ ಏರುವುದಾಗಿ ಹಠ ಪ್ರದರ್ಶಿಸಿದರು. ಈ ಹಂತದಲ್ಲಿ ಖಡಕ್‌ ನಿಲುವು ತಳೆದ ಪೊಲೀಸರು, 38 ವರ್ಷದ ಮಂಜು ಅವರ ಹಿನ್ನೆಲೆಯನ್ನು ಪರೀಕ್ಷಿಸಿ, ತೃಪ್ತಿಕರವಾಗಿದ್ದಲ್ಲಿ ಭಾನುವಾರ ಬೆಳಗ್ಗೆ ಅನುಮತಿ ನೀಡುವುದಾಗಿ ತಿಳಿಸಿದರು. ಹೀಗಾಗಿ ಮಂಜು ನಿರಾಸೆಯಿಂದ ಮರಳಬೇಕಾಯಿತು.

ಮಂಜು ವಿರುದ್ಧ ಕೆಲವು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಆಕೆ ವಿರುದ್ಧ ಹಲವು ಜನಾಂಗೀಯ ಸಂಘಟನೆಗಳ ಜತೆ ನಂಟು ಹೊಂದಿರುವ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಿನ್ನೆಲೆ ಪರೀಕ್ಷಿಸುವ ತೀರ್ಮಾನ ಕೈಗೊಂಡಿದ್ದಾರೆ.

ಗಾಳಿ ಸುದ್ದಿಗೆ ಪರಿಸ್ಥಿತಿ ಉದ್ವಿಗ್ನ
ಪ್ರತಿಭಟನಾಕಾರರ ಕಟ್ಟೆಚ್ಚರದ ಕಾವಲಿನ ನಡುವೆಯೂ ತಮಿಳುನಾಡಿನ 50 ವರ್ಷದೊಳಗಿನ ಮಹಿಳೆಯೊಬ್ಬರು ದೇಗುಲ ಪ್ರವೇಶಿಸಿದ್ದಾರೆ ಎನ್ನುವ ಗಾಳಿ ಸುದ್ದಿ ಹರಡಿ, ಕೆಲಹೊತ್ತು ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಇರುಮುಡಿ ಕಟ್ಟಿದ ಕಿರಿಯ ವಯಸ್ಸಿನ ಮಹಿಳೆಯೊಬ್ಬರು ಪವಿತ್ರ ಮೆಟ್ಟಿಲುಗಳನ್ನೇರಿ ಸ್ವಾಮಿಯ ದರ್ಶನ ಪಡೆದಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡಾಗ ಹಠಾತ್ತನೆ ಪರಿಸ್ಥಿತಿ ಉದ್ವಿಗ್ನಗೊಂಡಿತು. ನಿಷೇಧಾಜ್ಞೆ ಉಲ್ಲಂಘಿಸಿದ ಪ್ರತಿಭಟನಾಕಾರರು ದೇಗುಲದ ಬಳಿ ಜಮಾಯಿಸಿದರು.

ಆದರೆ ಆ ಮಹಿಳೆ ಪ್ರತಿಭಟನಾಕಾರರ ಮುಂದೆ ತಮ್ಮ ಗುರುತಿನ ಚೀಟಿ ತೋರಿಸಿ, ತಮಗೆ 52 ವರ್ಷ ವಯಸ್ಸಾಗಿದೆ ಎನ್ನುವುದನ್ನು ಸಾಬೀತುಪಡಿಸಿದರು. ಗುರುತಿನ ಚೀಟಿ ತೋರಿಸಿದ ಬಳಿಕ ಪ್ರತಿಭಟನಾಕಾರರು ದೇಗುಲ ಪ್ರವೇಶಕ್ಕೆ ಅನುಮತಿ ನೀಡಿದರು. ಆಕೆ 18 ಮೆಟ್ಟಿಲುಗಳನ್ನು ಏರಿ ದರ್ಶನ ಪಡೆದರು. ಕುಟುಂಬ ಸಮೇತ ಬಂದಿದ್ದ ಆಕೆಯನ್ನು ತಮಿಳುನಾಡಿನ ತಿರುಚ್ಚಿಯ ಲತಾ ಎಂದು ಗುರುತಿಸಲಾಗಿದೆ. ತಾವು ಎರಡನೇ ಸಲ ಅಯ್ಯಪ್ಪನ ದರ್ಶನಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ಎಲ್ಲ ವಯೋಮಾನದ ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಬಳಿಕ ಮಾಸಿಕ ಪೂಜೆಗೆಂದು ಮೊದಲ ಬಾರಿಗೆ ಅ.17ರಂದು ಶಬರಿಮಲೆ ದೇಗುಲದ ಬಾಗಿಲು ತೆರೆಯಲಾಗಿದೆ. ನಿತ್ಯ ಸಾವಿರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಆದರೆ, 10-50 ವರ್ಷ ವಯೋಮಿತಿಯೊಳಗಿನ ಮಹಿಳೆಯರಿಗೆ ಪ್ರವೇಶ ಇಲ್ಲ ಎನ್ನುವ ನಿಯಮಕ್ಕೆ ಮಾತ್ರ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡು ಬರುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದಾರೆ.

ಇಂತಹ ವಿಷಯಗಳಲ್ಲಿ ನನ್ನ ಅಭಿಪ್ರಾಯ ಕೇಳುವುದೇ ಸರಿಯಲ್ಲ. ತಟಸ್ಥವಾಗಿ ಉಳಿದರೂ ಮಹಿಳೆಯರಿಗೆ ಅನುಕೂಲವಾಗಬೇಕು ಎನ್ನುವುದು ನನ್ನ ಧೋರಣೆ. ಆದರೆ, ಅಯ್ಯಪ್ಪನ ಭಕ್ತರದ್ದು ಏನು ಧೋರಣೆ ಎನ್ನುವುದು ನನಗೆ ಅರ್ಥವಾಗಿಲ್ಲ. ಆದ್ದರಿಂದ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರುವುದೇ ಕ್ಷೇಮವೆಂದು ಭಾವಿಸಿರುವೆ.
ಕಮಲ್‌ಹಾಸನ್‌, ನಟ.

Comments are closed.