ಕರ್ನಾಟಕ

ಕೊಡಗಿನ ದುರಂತಕ್ಕೆ ಅಮೆರಿಕದ ಉಪಕರಣ ಹೇಳುವುದೇನು?

Pinterest LinkedIn Tumblr


ಕೊಡಗು: ಆಗಸ್ಟ್ ತಿಂಗಳಲ್ಲಿ ಇಲ್ಲಿ ಸಂಭವಿಸಿದ ಜಲ ಪ್ರಳಯ ಮತ್ತು ಭೂಕುಸಿತ ನೆನಪಿಸಿಕೊಂಡರೆ ಈಗಲೂ ಮೈ ನಡುಗಿ ಬಿಡುತ್ತದೆ. ಇಷ್ಟು ಭೀಕರ ಅನಾಹುತಕ್ಕೆ ಸ್ಪಷ್ಟ ಕಾರಣಗಳು ಸಿಕ್ಕದೆ ವಿವಿಧ ವಾದ ಪ್ರತಿವಾದಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಭೂಗರ್ಭ ಶಾಸ್ತ್ರಜ್ಞರ ತಂಡವೊಂದು ಅಮೆರಿಕದ ಅತ್ಯಾಧುನಿಕ ಉಪಕರಣ ಬಳಸಿ ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೇಸರ್ ರೇಣುಕಾಪ್ರಸಾದ್ ಮತ್ತು ಡಾ. ಪರಮೇಶ್ ನಾಯಕ್ ನೇತೃತ್ವದ ಭೂಗರ್ಭ ಶಾಸ್ತ್ರಜ್ಞರ ತಂಡವು ಅಡ್ವಾನ್ಸ್ ಸಬ್‍ಸರ್ಫೇಸ್ ಪರೀಕ್ಷೆಯ ಉಪಕರಣವನ್ನು ಬಳಸಿ ಭೂಗರ್ಭದಾಳದಲ್ಲಿನ ಬೆಳವಣಿಗೆ ಕುರಿತು ಅಧ್ಯಯನ ನಡೆಸುತ್ತಿದೆ. ಈ ತಂಡಕ್ಕೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಕೊಡಗಿನಲ್ಲಿ ಭೂಕುಸಿತ ದುರಂತಗಳಿಗೆ ಕಾರಣವಾಗಿದ್ದು ಭೂಕಂಪವೆನ್ನಲಾಗಿದೆ.

ಭೂಕುಸಿತವಾಗಿರುವ ಸ್ಥಳದಿಂದ 280 ಮೀಟರ್ ಸುತ್ತಳತೆಯಲ್ಲಿ ಅಡ್ವಾನ್ಸ್ ಸಬ್ ಸರ್ಫೇಸ್ ಪರೀಕ್ಷೆಯ ಉಪಕರಣದಿಂದ ಅಧ್ಯಯನ ನಡೆಸಲಾಗುತ್ತಿದೆ. ಇದು ಸುಮಾರು 500 ಮೀಟರ್ ಅಡಿ ಆಳದವರೆಗಿನ ಭೂಮಿಯಾಳದ ಚಿತ್ರವನ್ನು ಸೆರೆಹಿಡಿದು 2ಡಿ ಮತ್ತು 3ಡಿ ಚಿತ್ರಗಳನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿ ಕೊಡಗಿನಲ್ಲಿ ಆಗಿರುವ ಭೂಕುಸಿತಕ್ಕೆ ನೈಜ ಕಾರಣ ತಿಳಿದುಕೊಳ್ಳುವ ವೈಜ್ಞಾನಿಕ ಪ್ರಯತ್ನವನ್ನು ಪ್ರೊಫೇಸರ್ ತಂಡ ನಡೆಸಿದೆ. ಇವರು ಹೇಳುವ ಪ್ರಕಾರ ಇಲ್ಲಿ ಭೂ ಕಂಪನವಾಗಿದೆ. ಇದು ಜನರಿಗೂ ಕೂಡ ಗಮನಕ್ಕೆ ಬಂದಿದೆ. ಆದ್ರೆ ಇದನ್ನು ದಾಖಲಿಸುವ ಯಂತ್ರಗಳು ಇಲ್ಲಿ ಇಲ್ಲದ ಕಾರಣ ಭೂಕಂಪನದ ಸಾಧ್ಯತೆಗಳನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ ಎನ್ನೋದು ಡಾ. ಪರಮೇಶ್ ನಾಯಕ್ ಅವರ ಅಭಿಪ್ರಾಯ.

ಯಾವತ್ತೋ ಆದ ಭೂಕಂಪದಿಂದ ಈಗ ಯಾಕೆ ಪರಿಣಾಮ?

ಎಂದೋ ಆಗಿರುವ ಭೂಕಂಪದಿಂದಾಗಿ ಭೂಮಿಯಲ್ಲಿ ಬಿರುಕುಗಳು ನಿರ್ಮಾಣವಾಗಿರುತ್ತವೆ. ಈ ವೀಕ್ ಝೋನ್ಸ್ ಅಥವಾ ಬಿರುಕುಗಳ ಮೂಲಕ ಅಪಾರ ಪ್ರಮಾಣದ ನೀರು ಭೂಮಿಯೊಳಕ್ಕೆ ಹೋಗುತ್ತದೆ. ಕೊನೆಗೆ ಅದರ ಒತ್ತಡವನ್ನು ತಡೆಯಲಾರದೆ ನೀರು ಭೂಮಿಯನ್ನು ಕೊಚ್ಚಿಕೊಂಡು ಬರುತ್ತದೆ. ಕೊಡಗಿನಲ್ಲಿ ಭೂ ಕುಸಿತ ಆಗಿರೋದು ಇದೇ ಕಾರಣದಿಂದಲೇ. ಎಲ್ಲಿ ಗಟ್ಟಿ ಬಂಡೆಗಳ ಪದರವಿರುತ್ತದೆಯೋ ಅಲ್ಲಿ ಭೂಕುಸಿತ ಆಗುವುದಿಲ್ಲ. ಎಲ್ಲಿ ವೀಕ್ ಝೋನ್ಸ್ ಇರುತ್ತವೆಯೋ ಅಲ್ಲಿ ಯಾವುದೇ ಕಟ್ಟಡ ಅಥವಾ ಕೃಷಿ ಚಟುವಟಿಕೆ ಮಾಡಬಾರದು. ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು ಇಂತಹ ಉಪಕರಣಗಳನ್ನು ಬಳಸಿ ಭೂಮಿಯ ಗುಣದ ಬಗ್ಗೆ ಅಧ್ಯಯನ ನಡೆಸಿದರೆ, ಇಂತಹ ಅನಾಹುತಗಳನ್ನು ತಡೆಗಟ್ಟಬಹುದು. ಪರಿಸರ ಮತ್ತು ಭೂಗರ್ಭ ಇಲಾಖೆಯವರಿಗೆ ಇಂತಹ ಉಪಕರಣಗಳ ಅಗತ್ಯವಿದೆ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು 2ಡಿ ಚಿತ್ರ ಸಹಿತ ವಿವರಿಸಿದ್ದಾರೆ.

ಒಟ್ಟಿನಲ್ಲಿ ಕೊಡಗಿನಲ್ಲಿ ಭೂಕಂಪನವಾಗಿ, ವೀಕ್ ಝೋನ್ಸ್ ನಿರ್ಮಾಣವಾಗಿವೆ. ಈ ವೀಕ್‍ಜೋನ್ಸ್ ಮೂಲಕ ಅಪಾರ ನೀರು ಹೋಗಿದ್ದೇ ಇಡೀ ಬೆಟ್ಟಗುಡ್ಡಗಳು ಕುಸಿದು ಇಂತಹ ಅನಾಹುತಕ್ಕೆ ಕಾರಣವಾಗಿದೆ ಎನ್ನೋ ಸತ್ಯವನ್ನ ಈ ಪ್ರೊಫೆಸರ್‍ಗಳ ಬಿಚ್ಚಿಟ್ಟಿದ್ದಾರೆ. ಇನ್ನಾದ್ರೂ ಸಂಬಂಧಿಸಿದ ಇಲಾಖೆಯವರು ಇಂತಹ ಯಂತ್ರಗಳನ್ನು ಬಳಸಿ ಮತ್ತಷ್ಟು ಅಪಾಯಗಳನ್ನು ತಪ್ಪಿಸುವ ಅಗತ್ಯವಿದೆ.

Comments are closed.