ರಾಷ್ಟ್ರೀಯ

ರುದ್ರಭೂಮಿಯಲ್ಲಿ ಕಟ್ಟಿಗೆ ಬದಲು ಸೆಗಣಿ ಬಳಕೆಗೆ ದಿಲ್ಲಿ ಐಐಟಿ ವಿದ್ಯಾರ್ಥಿಗಳಿಂದ ವಿಶೇಷ ಯೋಜನೆ

Pinterest LinkedIn Tumblr


ಹೊಸದಿಲ್ಲಿ: ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಬದಲು ಸೆಗಣಿ, ಬೆರಣಿ ಬಳಸಿ ಪರಿಸರ ಮಾಲಿನ್ಯ ತಡೆಯುವ ಮತ್ತು ಕಟ್ಟಿಗೆ ಬಳಕೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ದಿಲ್ಲಿ ಐಐಟಿ ವಿದ್ಯಾರ್ಥಿಗಳು ವಿಶೇಷ ಯೋಜನೆ ರೂಪಿಸಿದ್ದಾರೆ.

ಸಾಂಪ್ರದಾಯಿಕ ರುದ್ರಭೂಮಿಯಲ್ಲಿ ಶವಸಂಸ್ಕಾರದ ವೇಳೆ ಹೆಚ್ಚಿನ ಪ್ರಮಾಣದ ಕಟ್ಟಿಗೆ ಬಳಸಲಾಗುತ್ತದೆ. ಇದರಿಂದ ಅಧಿಕ ಕಾಡು ನಾಶವಾಗುತ್ತಿದೆ. ವಿದ್ಯುತ್ ಚಿತಾಗಾರ ಎಲ್ಲೆಡೆ ಲಭ್ಯವಿಲ್ಲ. ಹೀಗಾಗಿ ದಿಲ್ಲಿ ಐಐಟಿ ವಿದ್ಯಾರ್ಥಿಗಳು ಅರ್ಥ್‌ ಎಂಬ ನೂತನ ಪ್ರಯತ್ನಕ್ಕೆ ಮುಂದಾಗಿದ್ದು, ಗೋಶಾಲೆಗಳಿಂದ ಸೆಗಣಿ ಸಂಗ್ರಹಿಸಿ ಅದನ್ನು ಬೆರಣಿಯನ್ನಾಗಿ ಪರಿವರ್ತಿಸುತ್ತಾರೆ.

ನಂತರ ಅವುಗಳನ್ನು ಚಿತಾಗಾರದಲ್ಲಿ ಬಳಸುತ್ತಾರೆ. ಇದರಿಂದ ಕಟ್ಟಿಗೆ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುವ ಜತೆಗೆ ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತಿದೆ.

ಅಲ್ಲದೆ ಬಹುತೇಕ ಗೋಶಾಲೆಗಳು, ಗೋಮಾಳದಲ್ಲಿ ಸೆಗಣಿಯ ಸೂಕ್ತ ಬಳಕೆಯಾಗದೆ ವ್ಯರ್ಥವಾಗುತ್ತಿದೆ. ಹೀಗಾಗಿ ಅದನ್ನು ಸಂಗ್ರಹಿಸಿ, ಸೂಕ್ತ ಬಳಕೆ ಮಾಡಲಾಗುತ್ತದೆ.

ಜೈಪುರ, ಗ್ವಾಲಿಯರ್, ವಾರಾಣಸಿ, ಕೋಲ್ಕತ್ತಾ, ರಾ ಮತ್ತು ನಾಗ್ಪುರದಲ್ಲಿನ ಚಿತಾಗಾರದಲ್ಲಿ ಸೆಗಣಿ ಬಳಸಲಾಗುತ್ತದೆ. ಅದೇ ಮಾದರಿಯಲ್ಲಿ ದಿಲ್ಲಿಯ ಹಲವು ಪ್ರಮುಖ ರುದ್ರಭೂಮಿಯಲ್ಲಿ ಸೆಗಣಿ ಬಳಸಿ, ರಾಷ್ಟ್ರರಾಜಧಾನಿಯ ವಾಯುಮಾಲಿನ್ಯ ಪ್ರಮಾಣ ತಗ್ಗಿಸಲು ಐಐಟಿ ವಿದ್ಯಾರ್ಥಿಗಳು ಯೋಜನೆ ರೂಪಿಸಿದ್ದಾರೆ.

Comments are closed.