ಕರ್ನಾಟಕ

ಫೇಸ್‌ಬುಕ್‌ ಲವ್‌: 23ರ ಹರೆಯದ ಉತ್ತರ ಪ್ರದೇಶದ ಯುವತಿ ಬೆಂಗಳೂರಿನ 20ರ ಯುವಕನನ್ನು ಮದುವೆಯಾಗಿ ಮೋಸ ಹೋದ ಕಥೆ…

Pinterest LinkedIn Tumblr


ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವಕನ ಬಣ್ಣದ ಮಾತುಗಳಿಗೆ ಮರುಳಾಗಿ ಉತ್ತರ ಪ್ರದೇಶದಿಂದ ನಗರಕ್ಕೆ ಬಂದ ಯುವತಿಯೊಬ್ಬಳು ಮದುವೆಯಾಗಿ ಮೋಸ ಹೋಗಿದ್ದಾಳೆ. ಈಕೆಯನ್ನು ಪ್ರೇಮಪಾಶಕ್ಕೆ ಬೀಳಿಸಿದ ಯುವಕನಿಗೆ ಕಾನೂನು ಪ್ರಕಾರ ಮದುವೆಯ ವಯಸ್ಸಾಗದಿದ್ದರೂ ಮದುವೆ ನಾಟಕವಾಡಿ ಒಂದು ತಿಂಗಳ ಜತೆಗಿದ್ದು ಕೈಕೊಟ್ಟಿದ್ದಾನೆ.

ಮೋಸ ಹೋದ ಯುವತಿಗೆ 23 ವರ್ಷ. ವೃತ್ತಿಯಲ್ಲಿ ಶಿಕ್ಷಕಿ. ನಗರದ ಯುವಕನಿಗಿನ್ನೂ 20 ವರ್ಷ. ಸರಿಯಾದ ಕೆಲಸವೂ ಇಲ್ಲ. ಆರು ತಿಂಗಳಿಗೂ ಮೊದಲು ಇಬ್ಬರ ನಡುವೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದೆ. ಆರಂಭದಿಂದಲೂ ಸುಳ್ಳಿನ ಮಂಟಪ ಕಟ್ಟಿದ್ದ ಯುವಕ ತನ್ನ ವಯಸ್ಸು, ವೃತ್ತಿ ಸೇರಿದಂತೆ ಎಲ್ಲ ವಿಚಾರಗಳನ್ನು ಮುಚ್ಚಿಟ್ಟಿದ್ದ. ಖಾಸಗಿ ಕಂಪನಿ ಉದ್ಯೋಗಿ ಎಂದು ಹೇಳಿಕೊಂಡಿದ್ದ. ಬೆಂಗಳೂರಿಗೆ ಬಂದರೆ ಮದುವೆಯಾಗುತ್ತೇನೆ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಆತನ ಮಾತನ್ನು ನಂಬಿದ ಯುವತಿ, ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ದಿಲ್ಲಿಗೆ ಬಂದು, ಅಲ್ಲಿಂದ ರೈಲು ಹತ್ತಿ ಬೆಂಗಳೂರಿಗೆ ಬಂದಿದ್ದಾಳೆ.

ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ಮದುವೆ ಶಾಸ್ತ್ರ ಮುಗಿಸಿದ್ದಾನೆ. ಸುಮಾರು ಒಂದು ತಿಂಗಳ ಕಾಲ ಲಾಡ್ಜ್‌, ಪೇಯಿಂಗ್‌ ಗೆಸ್ಟ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ತನ್ನ ಮನೆಗೆ ಕರೆದೊಯ್ದಿದ್ದಾನೆ. ಮದುವೆಯನ್ನು ಒಪ್ಪುವುದಿಲ್ಲ ಎಂದು ಹೇಳಿ ಇಬ್ಬರನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ಅಲ್ಲದೇ, ಉತ್ತರ ಪ್ರದೇಶದಿಂದ ಆಕೆಯ ಪಾಲಕರನ್ನು ನಗರಕ್ಕೆ ಕರೆಸಿಕೊಂಡು, ಮಗಳನ್ನು ಕರೆದೊಯ್ಯುವಂತೆ ಸೂಚಿಸಿದ್ದಾರೆ.

ತಮ್ಮ ಮಗಳು ಮೋಸ ಹೋಗಿರುವ ವಿಚಾರ ತಿಳಿದು ಬೆಂಗಳೂರಿಗೆ ಬಂದ ಯುವತಿಯ ಪಾಲಕರು ಮಗಳನ್ನು ವಾಪಸು ಕರೆದೊಯ್ಯಲು ಸಿದ್ಧವಾಗಿದ್ದರು. ಆದರೆ, ತಾನು ಆತನೊಂದಿಗೇ ಇರುತ್ತೇನೆ ಎಂದು ಹಠ ಹಿಟಿದ ಮಗಳಿಗೆ ಆಕೆಯ ತಂದೆ ರೈಲು ನಿಲ್ದಾಣದಲ್ಲೇ ಹಲ್ಲೆ ಮಾಡಿದ್ದರು. ಇದನ್ನು ಗಮನಿಸಿದ ರೈಲ್ವೆ ಪೊಲೀಸರು ವನಿತಾ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಯುವತಿಯನ್ನು ರಕ್ಷಿಸಿ ಕಚೇರಿಗೆ ಕೌನ್ಸಿಲಿಂಗ್‌ ನಡೆಸಿದಾಗ ಮೋಸದ ಪ್ರಕರಣ ಬೆಳಕಿಗೆ ಬಂದಿದೆ.

ಸಹಾಯವಾಣಿ ಸಿಬ್ಬಂದಿ ಯುವಕನನ್ನು ಕರೆಸಿದಾಗ, ತನಗೆ ಈಗ ಕೇವಲ 20 ವರ್ಷ. ಕೆಲಸ ಸಿಕ್ಕಿ ಸೆಟಲ್‌ ಆದ ಬಳಿಕ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ. ನಗರದಲ್ಲೇ ಕೆಲಸ ಮಾಡುವುದಾಗಿ ಹೇಳಿರುವ ಯುವತಿಯನ್ನು ಮಹಿಳೆಯರ ಆಶ್ರಯ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ವನಿತಾ ಸಹಾಯವಾಣಿ ಪರಿಹಾರ ಕೇಂದ್ರದ ಕೌನ್ಸಿಲರ್‌ ಸಂಧ್ಯಾರಾಣಿ ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಹಾಕಿರುವ ಎಲ್ಲ ಮಾಹಿತಿ ನೈಜವಾಗಿರುವುದಿಲ್ಲ. ಫೇಸ್‌ಬುಕ್‌ನಲ್ಲಿ ಯಾರನ್ನೇ ನಂಬುವ ಮುನ್ನ ಹೆಣ್ಣು ಮಕ್ಕಳು ಸಾಕಷ್ಟು ಬಾರಿ ಯೋಚನೆ ಮಾಡಬೇಕು- ರಾಣಿ ಶೆಟ್ಟಿ, ಸಂಯೋಜಕಿ, ವನಿತಾ ಸಹಾಯವಾಣಿ

ವಿದೇಶಿ ಯುವತಿ ಯಾಮಾರಿಸಿದ್ದ ಗ್ಯಾರೇಜ್‌ ಹುಡುಗ !

ನಗರದ ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ವಿದೇಶಿ ಯುವತಿಯನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ತಲೆಕೆಡಿಸಿ ಯಾಮಾರಿಸಿದ್ದ ಪ್ರಕರಣವೂ ನಡೆದಿದೆ. ಆತನಿಗೆ 18 ವರ್ಷವೂ ಆಗಿರಲಿಲ್ಲ ಎಂದು ವನಿತಾ ಸಹಾಯವಾಣಿ ಸಂಯೋಜಕಿ ರಾಣಿಶೆಟ್ಟಿ ಮಾಹಿತಿ ನೀಡಿದ್ದಾರೆ.

ಗ್ಯಾರೇಜ್‌ಗೆ ಬರುವ ತರಾವರಿ ಬೈಕ್‌ಗಳ ಮೇಲೆ ನಾನಾ ರೀತಿಯ ಫೋಸ್‌ಕೊಟ್ಟು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡುತ್ತಿದ್ದ ಆತನನ್ನು ನಂಬಿದ್ದ ವಿದೇಶಿ ಹುಡುಗಿ, ಆತನನ್ನು ಕಾಣಲು ಭಾರತಕ್ಕೆ ಬರಲು ನಿರ್ಧರಿಸಿದ್ದಳು. ಕೊನೇ ಹಂತದಲ್ಲಿ ಫೇಸ್‌ಬುಕ್‌ನಲ್ಲಿನ ಮಾಹಿತಿ ಬಗ್ಗೆ ಅನುಮಾನಗೊಂಡು ನಮಗೆ ದೂರು ನೀಡಿದ್ದಳು. ಬಾಲಕನನ್ನು ಕರೆಸಿ ವಿಚಾರಣೆ ನಡೆಸಿದಾಗ ಅಪ್ರಾಪ್ತನೆಂದು ಗೊತ್ತಾಗಿದೆ. ಅಲ್ಲದೇ, ಫೇಸ್‌ಬುಕ್‌ನಲ್ಲಿ ಸುಳ್ಳು ಮಾಹಿತಿ ಹಾಕಿದ್ದನ್ನು ಆತ ಒಪ್ಪಿದ್ದಾನೆ ಎಂದರು.

Comments are closed.