ಮನೋರಂಜನೆ

ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ ಅರ್ಜುನ್ ಸರ್ಜಾ ಮಾವ, ಹಿರಿಯ ನಟ ರಾಜೇಶ್

Pinterest LinkedIn Tumblr

ಬೆಂಗಳೂರು: ಲೂಸಿಯಾ ಖ್ಯಾತಿಯ ನಟಿ ಶ್ರುತಿ ಹರಿಹರನ್ #MeToo ಅಭಿಯಾನದಲ್ಲಿ ದಕ್ಷಿಣ ಭಾರತದ ಖ್ಯಾತ ನಟ, ಕನ್ನಡಿಗ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಸ್ಯಾಂಡಲ್ ವುಡ್ ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪರ- ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ.

ಚಿತ್ರೋದ್ಯಮದ ಅನೇಕ ನಟ, ನಟಿಯರು, ನಿರ್ಮಾಪಕ ಹಾಗೂ ನಿರ್ದೇಶಕರು ಅರ್ಜುನ್ ಸರ್ಜಾ ಬೆಂಬಲಿಸಿದ್ದರೆ ಮತ್ತೆ ಕೆಲವರು ನಟಿ ಶ್ರುತಿ ಹರಿಹರನ್ ಪರ ನಿಂತಿದ್ದು, ವಿವಾದ ಇದೀಗ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲು ಹತ್ತಿದೆ.

ನಟ ಅರ್ಜುನ್ ಸರ್ಜಾ ಪರ ಅವರ ಮಾವ ಹಿರಿಯ ನಟ ರಾಜೇಶ್ , ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೆಗೌಡರನ್ನು ಭೇಟಿ ಮಾಡಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪದ ವಿರುದ್ಧ ದೂರು ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಶ್, ಚಿತ್ರರಂಗದಲ್ಲಿ ಮಡಿವಂತಿಕೆ, ಮೈಲಿಗೆ ಇಲ್ಲ, ಆಳಿಯ ಅರ್ಜುನ್ ಸರ್ಜಾ ವಿರುದ್ಧ ಆರೋಪ ಬಂದ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇನೆ. ಈ ವಿಚಾರದಲ್ಲಿ ಅದು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ತಿಳಿಸಿದರು.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಮಾತನಾಡಿ, ರಾಜೇಶ್ ಸಲ್ಲಿಸಿರುವ ದೂರಿನ ಸಂಬಂಧ ಇಂದು ಸಂಜೆ ತುರ್ತು ಸಭೆ ನಡೆಸಲಾಗುವುದು, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನಾ ಮಾತನಾಡಿದ ರಾಜೇಶ್, ಪ್ರೇಮ ಬರಹ ಚಿತ್ರದಲ್ಲಿನ ನಾಯಕನಾಗಿ ಮೊದಲಿಗೆ ಮೈನಾ ಖ್ಯಾತಿಯ ನಟ ಚೇತನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ತದನಂತರ ಅವರ ಬದಲಿಗೆ ಮತ್ತೊಬ್ಬರನ್ನು ನಾಯಕನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು, ಇದರ ಸೇಡು ತೀರಿಸಿಕೊಳ್ಳುವ ಸಲುವಾಗಿ ಚೇತನ್ ಶ್ರುತಿ ಹರಿಹರನ್ ಪರ ನಿಂತಿರುವುದಾಗಿ ಆರೋಪಿಸಿದರು.

Comments are closed.