ಮನೋರಂಜನೆ

#MeTo: , ನಟಿಯರ ಆಯ್ಕೆಗೆ ನಿರ್ಮಾಪಕರ ಹಿಂದೇಟು?

Pinterest LinkedIn Tumblr


ಮುಂಬೈ: ದೇಶಾದ್ಯಂತ #ಮೀಟೂ ಅಭಿಯಾನ ಭಾರಿ ಸದ್ದು ಮಾಡುತ್ತಿರುವಂತೆಯೇ ಇದೇ #MeToo ಅಭಿಯಾನದಿಂದ ಮಹಿಳಾ ನೇಮಕಾತಿ ಅಥವಾ ಆಯ್ಕೆಗೆ ಕುತ್ತು ಬರುತ್ತಿದೆ ಎಂಬ ಕಳಕಳಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ.
ಪ್ರಸ್ತುತ #MeToo ಅಭಿಯಾನ ದೇಶದ ಖ್ಯಾತನಾಮ ನಟರು, ರಾಜಕಾರಣಿಗಳು, ಉದ್ಯಮಿಗಳು, ಪತ್ರಕರ್ತರು, ಸಚಿವರು, ಶಾಸಕರು, ಅಧಿಕಾರಿಗಳ ಕರಾಳ ಮುಖವಾಡವನ್ನು ಬಯಲು ಮಾಡುತ್ತಿದೆಯಾದರೂ, ಇದೇ ಮೀಟೂ ಅಭಿಯಾನ ಮಹಿಳಾ ಸಬಲೀಕರಣಕ್ಕೂ ತೊಂದರೆಯಾಗುವ ಆತಂಕ ಎದುರಾಗಿದೆ ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ದೇಶದಲ್ಲಿ ಮೀಟೂ ಅಭಿಯಾನ ಮೊದಲಿನಿಂದಲೂ ಕೇಳಿ ಬರುತ್ತಿತ್ತಾದರೂ, ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಆರೋಪ ಮಾಡಿದ ಬಳಿಕ ದೇಶದಲ್ಲಿ ಮೀಟೂ ಅಭಿಯಾನ ಚುರುಕು ಪಡೆದುಕೊಂಡಿತು.
ಬಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಸೇರಿದಂತೆ ದೇಶದ ಹಲವು ಚಿತ್ರರಂಗಗಳ ಮಹಿಳಾ ನಟಿಯರು ಮತ್ತು ಸಿಬ್ಬಂದಿಗಳು ಮೀಟೂ ಅಭಿಯಾನಕ್ಕೆ ಕೈ ಜೋಡಿಸಿ ತಮಗಾದ ತೊಂದರೆ ಹಂಚಿಕೊಳ್ಳುತ್ತಿದ್ದಾರೆ. ಕೇವಲ ಚಿತ್ರರಂಗ ಮಾತ್ರವಲ್ಲದೇ ಉದ್ಯಮವಲಯ, ರಾಜಕೀಯ, ಪತ್ರಿಕಾರಂಗದಲ್ಲಿಯೂ ಮೀಟೂ ಅಭಿಯಾನ ಕೇಳಿಬರುತ್ತಿದ್ದು, ದೇಶದಲ್ಲಿ ಇದೀಗ ಮೀಟೂ ಅಭಿಯಾನ ದಿನಕ್ಕೊಂದು ಖ್ಯಾತನಾಮರ ಹೆಸರನ್ನು ಬಹಿರಂಗಗೊಳಿಸುತ್ತಿದೆ.
ಮೀಟೂ ಅಭಿಯಾನಕ್ಕೆ ವ್ಯಾಪಕ ಬೆಂಬಲ ದೊರೆಯುತ್ತಿರುವಂತೆಯೇ ಇದರ ವಿರುದ್ಧದ ಕೂಗು ಕೂಡ ಬಲವಾಗಿಯೇ ಕೇಳಿಬರುತ್ತಿದೆ. ಮೀಟೂ ಅಭಿಯಾನದ ದುರ್ಬಳಕೆ ಕುರಿತೂ ಆಗಾಗ ಸುದ್ದಿ ಕೇಳಿಬರುತ್ತಿದ್ದು, ಮೀಟೂ ಅಭಿಯಾನದ ಸಂತ್ರಸ್ಥ ಪುರುಷರು #ವಿಟೂ (#WeToo) ಅಭಿಯಾನ ಆರಂಭಿಸಿದ್ದಾರೆ. ಮೀಟೂ ಅಭಿಯಾನದ ಕುರಿತು ದೇಶದಲ್ಲಿ ಪರ-ವಿರೋಧ ವಾದಗಳು ಬಲವಾಗಿ ಕೇಳಿಬರುತ್ತಿರುವಂತೆಯೇ ಇತ್ತ ಇದೇ ಮೀಟೂ ಅಭಿಯಾನ ಮಹಿಳಾ ನೇಮಕಾತಿ ಅಥವಾ ಮಹಿಳೆಯರ ಆಯ್ಕೆ ಮೇಲೆ ಗಂಭೀರ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬ ವಾದ ಕೂಡ ಕೇಳಿಬರುತ್ತಿದೆ.
ಮೀಟೂ ಅಭಿಯಾನಕ್ಕೆ ಭಯಪಟ್ಟು ಅಥವಾ ಅದಕ್ಕೆ ವಿರುದ್ಧವಾಗಿಯೋ ಮಹಿಳಾ ಉದ್ಯೋಗಸ್ಥರನ್ನು ನೇಮಕ ಮಾಡಿಕೊಳ್ಳುವಲ್ಲಿ ನಿರಾಸಕ್ತಿ ತೋರಿಸಲಾಗುತ್ತಿದೆ. ಮಹಿಳಾ ಸಬಲೀಕರಣಕ್ಕೆ ಮೀಟೂ ತೊಡಕಾಗುತ್ತಿದ್ದು, ಮಹಿಳಾ ಉದ್ಯೋಗಸ್ಥರನ್ನು ನೇಮಕ ಮಾಡಿಕೊಳ್ಳಲು ಕಂಪನಿಗಳು ಅಥವಾ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ.
ಈ ಹಿಂದೆ ನಿರ್ಮಾಪಕ ಗೌರಂಗ್ ದೋಷಿ ವಿರುದ್ಧ ಆರೋಪ ಮಾಡಿದ್ದ ನಟಿ ಪ್ಲೋರಾ ಸೈನಿ ಕೂಡ ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, #ಮೀಟೂ ಅಭಿಯಾನದ ಬಳಿಕ ತಮಗೆ ಈ ಅನುಭವವಾಗಿದೆ. ಆದರೆ ಯಾವುದೇ ವಲಯದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಿಕೊಡಬೇಕು ಎಂದು ಹೇಳಿದ್ದಾರೆ. ಕೇವಲ ಚಿತ್ರರಂಗ ಮಾತ್ರವಲ್ಲ ದೇಶದ ವಿವಿಧ ವಲಯಗಳ ಖ್ಯಾತನಾಮರೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

Comments are closed.