ಕರ್ನಾಟಕ

ಉಪಚುನಾವಣಾ: ಸೋಲು ಒಪ್ಪಿಕೊಂಡಿರುವ ಬಿಜೆಪಿ?

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಮೂರು ಲೋಕಸಭೆ/ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಕ್ಷಣಗಣನೇ ಶುರುವಾಗಿದೆ. ನಂವೆಬರ್​​.3 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​​-ಜೆಡಿಎಸ್​ ಮೈತ್ರಿ &​ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ, ಈ ಮಧ್ಯೆ ಉಪ ಚುನಾವಣೆಯ ಫಲಿತಾಂಶಕ್ಕೆ ಮುನ್ನವೆ ಮೈತ್ರಿ ಎದುರು ಬಿಜೆಪಿ ಸೋಲು ಒಪ್ಪಿಕೊಂಡಿದೆ? ಎಂಬ ಚರ್ಚೆ ನಡೆಯುತ್ತಿದೆ. ಹೀಗಾಗಿಯೆ ಕೇಸರಿ ಪಕ್ಷ ತನ್ನ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಮಾತ್ರ ಹೋರಾಟ ನಡೆಸುತ್ತಿದೆ ಎನ್ನಲಾಗುತ್ತಿದೆ.

ಕರ್ನಾಟಕದಲ್ಲಿ ನಡೆಯಲಿರುವ ಈ ಉಪಚುನಾವಣೆ 2019 ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ. ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ವಿರುದ್ಧ ಬಿಜೆಪಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮತ್ತೆ ನೋಡಬಹುದು. ಒಂದು ವೇಳೆ ಉಪಚುನಾವಣೆಯಲ್ಲಿ ಕಮಲ ಅರಳದೆ ಮುದುಡಿದರೆ ಮುಂದೆಯೂ ಸೋಲು ಖಚಿತ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು.

ಇದಕ್ಕೆ ಪೂರಕ ಎಂಬಂತೆ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವಿಗೆ ಪೈಪೋಟಿ ನಡೆಸಬೇಕಿದ್ದ ಬಿಜೆಪಿ, ತನ್ನ ಕ್ಷೇತ್ರಗಳನ್ನಷ್ಟೇ ಉಳಿಸಿಕೊಳ್ಳಲು ಹೋರಾಟ ನಡೆಸಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಪ್ರಾರಂಭದಲ್ಲಿಯೇ ಉಪಚುನಾವಣಾ ಅಭ್ಯರ್ಥಿಗಳನ್ನು ಪ್ರಕಟಿಸುವ ಮುಖೇನ ಕಾಂಗ್ರೆಸ್-ಜೆಡಿಎಸ್​ಗೆ ತಿರುಗೇಟು ನೀಡಿದ್ದ ಬಿಜೆಪಿ, ಇದೀಗ ಶಿವಮೊಗ್ಗ-ಬಳ್ಳಾರಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ‘ನಾಮಕಾವಸ್ತೆ’ಗೆ ಮಾತ್ರ ಸ್ಪರ್ಧಿಸುತ್ತಿದೆ ಎಂಬ ಅನುಮಾನ ಹುಟ್ಟಿಹೊಂಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪನವರು ಮಗ ರಾಘವೇಂದ್ರ ಅವರನ್ನು ಅಖಾಡಕ್ಕಿಳಿಸುವ ಮೂಲಕ ಶಿವಮೊಗ್ಗ ಕ್ಷೇತ್ರ ಉಳಿಸಿಕೊಳ್ಳಲು ಮುಂದಾಗಿದ್ದರೆ, ಬಳ್ಳಾರಿಯಲ್ಲಿ ಸಹೋದರಿ ಜೆ.ಶಾಂತಾ ಅವರನ್ನು ಗೆಲ್ಲಿಸುವ ಮುಖಾಂತರ ತಮ್ಮ ಪ್ರತಿಷ್ಠೆಯನ್ನು ಕಾಪಾಡಲು ಶಾಸಕ ಶ್ರೀರಾಮುಲು ಪ್ರಚಾರದ ಅಖಾಡಕ್ಕಿಳಿದಿದ್ಧಾರೆ. ಅಲ್ಲದೇ ಶಿವಮೊಗ್ಗ-ಬಳ್ಳಾರಿಯಲ್ಲಿ ಗೆಲ್ಲುವ ಭರವಸೆಯನ್ನು ಹೊಂದಿದ್ಧಾರೆ.

ಇನ್ನೊಂದೆಡೆ ಮೈತ್ರಿ ಅಭ್ಯರ್ಥಿಗಳ ವಿರುದ್ಧ ನೇರ ಹಣಾಹಣಿಗೆ ಸಿದ್ದರಿದ್ದೇವೆ. ಮಂಡ್ಯ ಲೋಕಸಭೆ, ಜಮಖಂಡಿ, ರಾಮನಗರ ಕ್ಷೇತ್ರಗಳಲ್ಲಿಯೂ ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿ ಮುಖಂಡರು ಸದ್ಯಕ್ಕೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಾಲುಸಾಲು ಭರವಸೆಯ ಹೇಳಿಕೆಗಳನ್ನು ನೀಡುತ್ತಿದ್ದ ಕಮಲ ಪಕ್ಷದ ಹಿರಿಯ ನಾಯಕರು, ಇದೀಗ ಮೂರು ಕ್ಷೇತ್ರಗಳ ಬಿರುಸಿನ ಪ್ರಚಾರದಿಂದ ಹಿಂದೆ ಸರಿದಿದ್ದಾರೆ ಎಂಬ ಅನುಮಾನ ಕೇಳಿ ಬರುತ್ತಿದೆ.

ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಆಪರೇಷನ್​​ ಕಮಲದ ಮೂಲಕ ಕರೆತಂದ ಅಭ್ಯರ್ಥಿಗಳನ್ನು ನಿಲ್ಲಿಸಿ ಬಿಜೆಪಿ ಕಾಂಗ್ರೆಸ್​​-ಜೆಡಿಎಸ್​​ ಎದುರು ತೊಡೆ ತಟ್ಟಿತ್ತು. ಅಲ್ಲದೇ ಬಿಎಸ್​ವೈ ಕೂಡ ಮಂಡ್ಯ ನನ್ನ ಹುಟ್ಟೂರು ನಾವು ಗೆಲ್ಲುತ್ತೇವೆ ಎಂದಿದ್ದರು. ಇನ್ನು ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಸೋಲಿಗೆ ಕಾಂಗ್ರೆಸ್ಸೇ​​ ಕಾರಣವಾಗುತ್ತದೆ ಎಂದು ಹೇಳುತ್ತಿದ್ದರು ಬಿಜೆಪಿ ಮುಖಂಡರು. ಆದರೆ, ಎಲ್ಲಾ ಹೇಳಿಕೆಗಳು ಕೇವಲ ಮಾಧ್ಯಮಕ್ಕೆ ಸೀಮಿತವಾಗಿವೆ ಹೊರತು ಕಾರ್ಯರೂಪದಲಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ಕಳೆದ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಕೇವಲ ಸಾವಿರ ಮತಗಳ ಅಂತರದಿಂದ ಸೋಲನ್ನಪ್ಪಿದ ಶ್ರೀಕಾಂತ್ ಕುಲಕರ್ಣಿ ಅವರನ್ನು ಬಿಜೆಪಿ ಈ ಬಾರಿ ಕಣಕ್ಕಿಳಿಸಿದೆ. ಚುನಾವಣಾ ಉಸ್ತುವಾರಿಯಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ನೇಮಿಸಲಾಗಿದೆ. ಆದರೆ, ಪ್ರಚಾರದಲ್ಲಿ ಭಾಗಿಯಾಗದೆ ಶೆಟ್ಟರ್​​ ವಿದೇಶ ಪ್ರವಾಸ ಕೈಗೊಂಡಿದ್ಧಾರೆ. ಈ ನಡೆಯೂ ಕೂಡ ಬಿಜೆಪಿ ಮೇಲಿನ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಈ ಕಾರಣಕ್ಕೆ ಬಿಜೆಪಿ ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ ಮೂರು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಕ್ಕೆ ಪೈಟೋಟಿ ನೀಡುವ ನಿರ್ಧಾರದಿಂದ ಹಿಂದೆ ಸರಿದಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಬಿಜೆಪಿ ಉಪಚುನಾವಣೆಗೂ ಮೊದಲೇ ಯುದ್ದದಲ್ಲಿ ಸೋಲು ಒಪ್ಪಿಕೊಂಡತಿದೆ ಎಂಬ ಚರ್ಚೆ ಬಿಜೆಪಿ ವಲಯದಲ್ಲಿಯೇ ನಡೆಯುತ್ತಿದೆ.

Comments are closed.