ರಾಷ್ಟ್ರೀಯ

ಸಿಬಿಐ ಡಿಎಸ್‌ಪಿ ದೇವೇಂದ್ರ ಕುಮಾರ್‌ ಬಂಧನ

Pinterest LinkedIn Tumblr


ಹೊಸದಿಲ್ಲಿ: ಸಿಬಿಐನ ವಿಶೇಷ ನಿರ್ದೇಶಕ ಅಲೋಕ್‌ ವರ್ಮಾ ಮತ್ತು 2ನೇ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾ ನಡುವಿನ ಸಂಘರ್ಷದಲ್ಲಿ ಇದೀಗ ಆಸ್ಥಾನಾ ಅವರ ಅಧೀನ ಅಧಿಕಾರಿ (ಡಿಎಸ್‌ಪಿ) ದೇವೇಂದ್ರ ಕುಮಾರ್‌ ಅವರನ್ನು ಬಂಧಿಸಲಾಗಿದೆ.

ಸೋಮವಾರ ಸಿಬಿಐ ಪ್ರಧಾನ ಕಾರ್ಯಾಲಯದ ಮೇಲೆ ಅದರದೇ ಅಧಿಕಾರಿಗಳು ದಾಳಿ ನಡೆಸಿದ್ದು, ಡಿಎಸ್‌ಪಿ ದೇವೇಂದ್ರ ಕುಮಾರ್‌ ಅವರನ್ನು ಬಂಧಿಸಿದ್ದಾರೆ. ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನ ಅವರು ಭಾಗಿಯಾಗಿರುವರೆಂದು ಆರೋಪಿಸಲಾದ ಭ್ರಷ್ಟಾಚಾರ ಪ್ರಕರಣ ಸಂಬಂಧ ಈ ಬಂಧನ ನಡೆದಿದೆ.

ಉದ್ಯಮಿ ಸತೀಶ್‌ ಸಾನಾ ಅವರ ಹೇಳಿಕೆಯನ್ನು ಫೋರ್ಜರಿ ಮಾಡಿದ್ದು ದೇವೇಂದ್ರ ಕುಮಾರ್‌ ಮೇಲಿನ ಪ್ರಮುಖ ಆರೋಪವಾಗಿದೆ. ಆಸ್ಥಾನ ಅವರ ತನಿಖಾ ತಂಡದಲ್ಲಿದ್ದ ದೇವೇಂದ್ರ ಕುಮಾರ್‌ ಸತೀಶ್‌ ಸಾನಾ ಎಂಬಾತನ ಹೇಳಿಕೆಯನ್ನು ಫೋರ್ಜರಿ ಮಾಡಿ ಸಿಬಿಐ ನಿರ್ದೇಶಕ ಅಲೋಕ್‌ ವರ್ಮ ಅವರ ಮೇಲೆ 2 ಲಕ್ಷ ರೂ. ಲಂಚದ ಆರೋಪ ಹೊರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ. 2018ರ ಆಗಸ್ಟ್‌ 24ರಂದು ವರ್ಮ ಅವರ ಮೇಲೆ ಗಂಭೀರ ಆರೋಪ ಹೊರಿಸಿದ್ದ ಆಸ್ಥಾನ ಅವರ ಮೇಲೆ ಈಗಾಗಲೇ ಭ್ರಷ್ಟಾಚಾರದ ಪ್ರಕರಣ ದಾಖಲಾಗಿದೆ.

ಆಸ್ಥಾನಾ ವಿರುದ್ಧದ ಆರೋಪವನ್ನು ಗಟ್ಟಿಗೊಳಿಸಲು ಆರೋಪಿಗಳ ನಡುವೆ ನಡೆದ ಟೆಲಿಫೋನ್‌ ಸಂಭಾಷಣೆ ಮತ್ತು ವಾಟ್ಸ್‌ ಆ್ಯಪ್‌ ಸಂದೇಶಗಳನ್ನು ಬಳಸಿಕೊಂಡಿರುವುದಾಗಿ ಸಿಬಿಐ ಹೇಳಿದೆ.

ದೂರವಾಣಿ ಮಾತುಕತೆಯೇ ಆಧಾರ

ಆಸ್ಥಾನ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಅ.16ರಂದು ದುಬೈ ಮೂಲದ ಮಧ್ಯವರ್ತಿ ಮನೋಜ್‌ ಪ್ರಸಾದ್‌ ಅವರನ್ನು ದಿಲ್ಲಿಯಲ್ಲಿ ಬಂಧಿಸಿದ ಬೆನ್ನಲ್ಲೇ ತನಿಖಾ ಸಂಸ್ಥೆಯು ಒಟ್ಟು 9 ಫೋನ್‌ ಕರೆಗಳನ್ನು ಟ್ರ್ಯಾಪ್‌ ಮಾಡಿದೆ. ಮನೋಜ್‌ ಬಂಧನದ ಬೆನ್ನಲ್ಲೇ ಅವರ ಸಹೋದರ ಸೋಮೇಶ್‌ ಪ್ರಸಾದ್‌ ಆತಂಕಗೊಂಡಿರುವುದು ಕರೆ ದಾಖಲೆಗಳಿಂದ ಬಯಲಾಗಿದೆ. ಅಲ್ಲದೆ, ಮನೋಜ್‌ ಬಂಧನವನ್ನು ಖಚಿತಪಡಿಸಿಕೊಳ್ಳಲು ಆಸ್ಥಾನ ಅವರು, ಮತ್ತೊಂದು ತನಿಖಾ ಸಂಸ್ಥೆಯ ಅಧಿಕಾರಿ ಜತೆ ದೂರವಾಣಿ ಸಂಭಾಷಣೆ ನಡೆಸಿರುವುದೂ ಕರೆ ದಾಖಲೆಗಳ ವಿಶ್ಲೇಷಣೆಯಿಂದ ಬೆಳಕಿಗೆ ಬಂದಿದೆ.

ಮನೋಜ್‌ ಬಂಧನದ ವಿಷಯ ಗೊತ್ತಾಗುತ್ತಿದ್ದಂತೆಯೇ ಆತನ ಸಹೋದರ ಸೋಮೇಶ್‌ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದಾರೆ. ಆ ಅಧಿಕಾರಿಯೂ ಸೋಮೇಶ್‌ಗೆ ಕರೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ.

ಮರುದಿನ ತನಿಖಾ ಸಂಸ್ಥೆಯ ಅಧಿಕಾರಿಯು ಹಾಲಿ ಸ್ಥಿತಿಗತಿಯ ಬಗ್ಗೆ ತಿಳಿಯಲು ಆಸ್ಥಾನಾ ಅವರಿಗೆ ಕರೆ ಮಾಡಿದ್ದಾರೆ. ಇಬ್ಬರ ನಡುವೆ ಮೂರು ಕರೆಗಳು ವಿನಿಮಯವಾಗಿವೆ. ಹಿರಿಯ ಅಧಿಕಾರಿ ಮತ್ತು ಬಂಧಿತ ಮನೋಜ್‌ ಅವರ ಪತ್ನಿ ನಡುವೆಯೂ ಕರೆಗಳು ವಿನಿಮಯವಾಗಿವೆ. ಆಸ್ಥಾನಾ ಮತ್ತು ಹಿರಿಯ ಅಧಿಕಾರಿ ನಡುವೆ ಅ.17ರಂದು ನಾಲ್ಕು ಕರೆಗಳು ವಿನಿಮಯವಾಗಿವೆ. ಮನೋಜ್‌ ಪ್ರಸಾದ್‌ ಅವರಿಂದ ವಶಪಡಿಸಿಕೊಳ್ಳಲಾದ ಫೋನ್‌ನಲ್ಲಿರುವ ವಾಟ್ಸ್‌ ಆ್ಯಪ್‌ ಸಂದೇಶಗಳನ್ನು ಪ್ರಮುಖ ಆಧಾರವಾಗಿ ಬಳಸಿಕೊಳ್ಳಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

“ಕೇವಲ ಆಸ್ಥಾನಾ ವಿರುದ್ಧ ಮಾತ್ರವಲ್ಲ, ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ವಿರುದ್ಧವೂ ಭ್ರಷ್ಟಾಚಾರದ ವರದಿಗಳಿವೆ. ವರ್ಮಾ ವಿರುದ್ಧ ಆಸ್ಥಾನಾ ಅವರೇ ಸರಕಾರಕ್ಕೆ ವರದಿ ನೀಡಿದ್ದಾರೆ. ಈ ವಿಚಾರಗಳಿಂದ ಜನರು ಸಂಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವುದು ಬೇಡ.”
-ಮೀನಾಕ್ಷಿ ಲೇಖಿ, ಬಿಜೆಪಿ ವಕ್ತಾರರು

Comments are closed.