ಕರ್ನಾಟಕ

ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲ ಎಂದಿರುವ ಚಿದಂಬರಂ ಅವರದ್ದು ವೈಯಕ್ತಿಕ ಅಭಿಪ್ರಾಯ: ಪರಮೇಶ್ವರ್

Pinterest LinkedIn Tumblr


ಜಮಖಂಡಿ: ರಾಹುಲ್‌ ಗಾಂಧಿ ಪ್ರಧಾನ ಮಂತ್ರಿ ಅಭ್ಯರ್ಥಿ ಅಲ್ಲ ಎಂಬ ಮಾಜಿ ಸಚಿವ ಪಿ. ಚಿದಂಬರಂ ಅವರದ್ದು ವೈಯಕ್ತಿಕ ಹೇಳಿಕೆಯೇ ಹೊರತು ಪಕ್ಷದ ನಿಲುವಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‌ ಹೇಳಿದ್ದಾರೆ.

ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ತೀರ್ಮಾನಕ್ಕೂ, ಚಿದಂಬರಂ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ. ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷರು. ಸಾಮಾನ್ಯವಾಗಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಿರುವವರೇ ಪ್ರಧಾನಿ ಅಭ್ಯರ್ಥಿಯಾಗಿರುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳದ ಕುರಿತು ಕೇಳಿದ ಪ್ರಶ್ನೆಗೆ ಅಸಮಾಧಾನಗೊಂಡ ಪರಮೇಶ್ವರ್‌, ನನಗೆ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳದಿರಿ. ಆ ವಿಚಾರಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಾರೆ, ಅವರೇ ಉತ್ತರವನ್ನೂ ಕೊಡುತ್ತಾರೆ ಎಂದು ಉತ್ತರಿಸಿದ್ದಾರೆ.

ಉಪ ಚುನಾವಣೆಗಳ ಫಲಿತಾಂಶ ನಮ್ಮ ಸಮ್ಮಿಶ್ರ ಸರಕಾರಕ್ಕೆ ಶಕ್ತಿ ಕೊಡುತ್ತದೆ. ನಮ್ಮ ಕಾರ್ಯಕ್ರಮ, ಆಡಳಿತ ಬಗ್ಗೆ ಜನಾಭಿಪ್ರಾಯವನ್ನು ಸೂಚಿಸಲಿದೆ. ಈ ಚುನಾವಣೆಗಳ ಫಲಿತಾಂಶ ಸರಕಾರಕ್ಕೆ ಹೆಚ್ಚಿನ ಬಲ ನೀಡಲಿದೆ ಎಂದ ಅವರು, ಚುನಾವಣಾ ಪೂರ್ವ ತಯಾರಿ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಿ ಚರ್ಚೆ ಮಾಡಲಾಗಿದೆ. ಜಿಲ್ಲಾ ಪಂಚಾಯತ್‌ ಹಾಗೂ ಗ್ರಾಮಪಂಚಾಯತ್‌ ಮಟ್ಟದಲ್ಲಿ ಉಸ್ತುವಾರಿಗಳನ್ನ ನೇಮಿಸಲಾಗಿದೆ. ಸಚಿವರುಗಳಿಗೆ ಕೆಲವು ಭಾಗದ ಉಸ್ತುವಾರಿ ಕೊಡಲಾಗಿದೆ. ಕಾರ್ಯಕರ್ತರನ್ನು ಭೂತ್ ಮಟ್ಟದಲ್ಲಿ ಒಗ್ಗೂಡಿಸಿ, ಚುನಾವಣೆ ಎದುರಿಸುವಂತೆ ಸೂಚನೆ ನೀಡಲಾಗಿದೆ. ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರದ ಭರವಸೆಗಳು ಸುಳ್ಳುಗಳಾಗಿ ಪರಿವರ್ತನೆ ಆಗಿವೆ. ಕಪ್ಪು ಹಣ ವಾಪಸ್‌ ತರುವುದು, ಉದ್ಯೋಗ ಸೃಷ್ಟಿ ಮಾಡುವಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ. ದೇಶದ ಆರ್ಥಿಕ ಸ್ಥಿತಿ ದಿವಾಳಿ ಎಬ್ಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆ ಇದ್ದಾಗ್ಯೂ ದೇಶದಲ್ಲಿ ತೈಲ ಬೆಲೆ ಹೆಚ್ಚಿಸಿದ್ದರು ಎಂದು ಪರಮೇಶ್ವರ್‌ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

Comments are closed.