ರಾಷ್ಟ್ರೀಯ

ತಾಯಿಯಿಂದಲೇ ಹತ್ಯೆಯಾದ ಉತ್ತರ ಪ್ರದೇಶದ ವಿಧಾನ ಪರಿಷತ್ ಸಭಾಪತಿಯ ಪುತ್ರ 

Pinterest LinkedIn Tumblr


ಲಕ್ನೋ: ಉತ್ತರ ಪ್ರದೇಶದ ವಿಧಾನ ಪರಿಷತ್ ಸಭಾಪತಿ ರಮೇಶ್ ಯಾದವ್ ಪುತ್ರ ಅಭಿಜಿತ್ ಯಾದವ್ ಕೊಲೆಯನ್ನು ಆತನ ತಾಯಿಯೇ ಮಾಡಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಅಭಿಜಿತ್ ಯಾದವ್ ತಾಯಿ ಮೀರಾ ಯಾದವ್‍ರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧನದ ನಂತರ ತಪ್ಪೊಪ್ಪಿಕೊಂಡಿರುವ ಮೀರಾ ಯಾದವ್, ಮಗ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದರಿಂದ ಮಲಗಿದ್ದ ವೇಳೆ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ರಮೇಶ್ ಯಾದವ್ ಎರಡನೇ ಪತ್ನಿ ಮೀರಾ ಯಾದವ್ ದಂಪತಿಗೆ ಅಭಿಜಿತ್ ಮತ್ತ ಅಭಿಷೇಕ್ ಎಂಬ ಎರಡು ಮಕ್ಕಳಿದ್ದು, ಮೊದಲ ಮಗನನ್ನೇ ತಾಯಿ ಈಗ ಕೊಲೆ ಮಾಡಿದ್ದಾಳೆ.

ಭಾನುವಾರ ಮಲಗಿದ ಸ್ಥಿತಿಯಲ್ಲಿ ಅಭಿಜಿತ್ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಸಹಜ ಸಾವು ಅಂತಾ ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆ ಸಿದ್ಧತೆಯಲ್ಲಿ ತೊಡಗಿದ್ದರು. ಆದ್ರೆ ಕೆಲವರು ಇದೊಂದು ಅಸಹಜ ಸಾವು ಅಂತಾ ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಅಂತ್ಯಕ್ರಿಯೆ ತಡೆದು ಮೃತ ದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು, ಮರಣೋತ್ತರ ಶವ ಪರೀಕ್ಷೆ ವೇಳೆ ಅಭಿಜಿತ್ ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎನ್ನುವ ಫಲಿತಾಂಶ ಬಂದಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಕುಟುಂಬಸ್ಥರು ವಿಚಾರಣೆಗೆ ಒಳಪಡಿಸಿದಾಗ ತಾಯಿ ಮೀರಾ ಯಾದವ್ ತಪ್ಪೊಪ್ಪಿಕೊಂಡಿದ್ದಾಳೆ. ಪುತ್ರ ಅಭಿಜಿತ್ ಪ್ರತಿನಿತ್ಯ ಕುಡಿದು ತಡರಾತ್ರಿ ಮನೆಗೆ ಬರುತ್ತಿದ್ದನು. ಪ್ರತಿದಿನ ನನ್ನೊಂದಿಗೆ ಜಗಳ ಮಾಡಿ, ಹಲ್ಲೆ ನಡೆಸುತ್ತಿದ್ದನು. ಶನಿವಾರ ಮದ್ಯ ಸೇವಿಸಿ ಬಂದ ಅಭಿಜಿತ್ ವಿನಾಕಾರಣ ಜಗಳ ಆರಂಭಿಸಿದನು. ನಶೆಯಲ್ಲಿದ್ದ ಅಭಿಜಿತ್ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದನು. ಈ ವೇಳೆ ನನ್ನ ಜೀವ ಉಳಿಸಿಕೊಳ್ಳಲು ಆತನನ್ನು ದೂರ ತಳ್ಳಿದಾಗ, ಗೋಡೆಗೆ ತಾಗಿ ಕೆಳಗೆ ಬಿದ್ದನು. ಕೋಪದಿಂದ ನನ್ನನ್ನು ಕೊಲ್ಲಲು ಮುಂದಾದ ನಾನೇ ಸೆಣಬಿನಿಂದ ಆತನ ಕುತ್ತಿಗೆಯನನ್ನು ಬಿಗಿದು ಕೊಲೆ ಮಾಡಿದೆ ಎಂದು ಮೀರಾ ಯಾದವ್ ಹೇಳಿಕೆ ನೀಡಿದ್ದಾಳೆ.

ಸದ್ಯ ಪೊಲೀಸರು ಆರೋಪಿ ತಾಯಿಯನ್ನು ವಶಕ್ಕೆ ಪಡೆದು, ಇತರೆ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Comments are closed.