ರಾಷ್ಟ್ರೀಯ

ಸಿಬಿಐ ಸಂಸ್ಥೆಯಲ್ಲಿನ ಆಂತರಿಕ ಸಂಘರ್ಷ: ರಾಕೇಶ್‌ ಆಸ್ಥಾನಾ ವಿರುದ್ಧದ ಪ್ರಕರಣದ ಯಥಾಸ್ಥಿತಿ ಕಾಪಾಡಿಕೊಳ್ಳಲು ದೆಹಲಿ ಹೈಕೋರ್ಟ್ ಆದೇಶ

Pinterest LinkedIn Tumblr

ನವದೆಹಲಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿನ ಆಂತರಿಕ ಸಂಘರ್ಷ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಸಿಬಿಐಗೆ ಆದೇಶಿಸಿದೆ.

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾ ಅವರ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ರಾಕೇಶ್ ಆಸ್ಥಾನಾ ಅವರು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ತನ್ನನ್ನು ಬಂಧಿಸದಂತೆ ಮತ್ತು ತಮ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ರಾಕೇಶ್ ಆಸ್ಥಾನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಜಿಮ್ ವಜಿರಿ ಅವರು, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸಿಬಿಐಗೆ ಸೂಚಿಸಿದ್ದಾರೆ. ಅಲ್ಲದೆ ವಿಶೇಷ ನಿರ್ದೇಶಕರ ವಿರುದ್ಧ ನಡೆಯುತ್ತಿರುವ ತನಿಖೆಗೆ ಯಾವುದೇ ತಡೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರಿಗೆ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೂ ಪ್ರತಿಕ್ರಿಯೆ ಸಲ್ಲಿಸುವಂತೆ ಹೈಕೋರ್ಟ್ ನೋಟಿಸ್ ನೀಡಿ, ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿದೆ.

ಈಗಾಗಲೇ ರಾಕೇಶ್‌ ಅಸ್ತಾನ ವಿರುದ್ಧ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರು ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲು ಮುಂದಾಗಿದ್ದರು. ಈ ಹಿನ್ನೆಲ್ಲೆಯಲ್ಲಿ ಬಂಧನದ ಭೀತಿಯಲ್ಲಿರುವ ಆಸ್ತಾನ ಕೋರ್ಟ್​ ಮೊರೆ ಹೋಗಿದ್ದು, ಪ್ರಕರಣ ರದ್ದುಗೊಳಿಸುವಂತೆ ಮನವಿ ಮಾಡಿದ್ದರು.

ಈ ಹಿಂದೆ ಅಲೋಕ್ ವರ್ಮಾ ವಿರುದ್ಧವೇ ಸುಮಾರು 10 ಪ್ರಕರಣಗಳಲ್ಲಿ ಹಲವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ರಾಕೇಶ್ ಆಸ್ತಾನ ಸಹ ಆರೋಪಿಸಿದ್ದರು. ಈ ಕುರಿತು ಸಂಪುಟ ಕಾರ್ಯದರ್ಶಿ ಹಾಗೂ ಕೇಂದ್ರ ಜಾಗೃತ ಆಯೋಗಕ್ಕೂ ಪತ್ರ ಬರೆದಿದ್ದರು.

Comments are closed.