ಅಂತರಾಷ್ಟ್ರೀಯ

ಭಾರತದೊಂದಿಗೆ ಸೌಹಾರ್ದ ಮಾತುಕತೆಗೆ ಮತ್ತೆ ಪ್ರಯತ್ನ’: ಪಾಕ್ ಪ್ರಧಾನಿ ಇಮ್ರಾನ್​ ಖಾನ್​​

Pinterest LinkedIn Tumblr


ನವದೆಹಲಿ: ಭಾರತ-ಪಾಕ್​​ ನಡುವೆ ಶಾಂತಿ ಸ್ಥಾಪನೆಗಾಗಿ ಮತ್ತೊಮ್ಮೆ ಪ್ರಯತ್ನಿಸುತ್ತೇನೆ. ಭಾರತದ 2019 ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಪಾಕ್​​ ಸರ್ಕಾರ ಸೌಹಾರ್ದಯುತ ಮಾತುಕತೆಗೆ ಮುಂದಾಗಲಿದೆ. ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನುಡವೇ ಹೇಗೆ ಶಾಂತಿ ಸ್ಥಾಪಿಸಬೇಕು? ಎಂಬುದರ ಬಗ್ಗೆ ಚರ್ಚಿಸುತ್ತೇವೆ ಎಂದು ಪಾಕ್​​ ಪ್ರಧಾನಿ ಇಮ್ರಾನ್​​ ಖಾನ್​​​ ಹೇಳಿದ್ದಾರೆ.

ಸೌಹಾರ್ದ ಮಾತುಕತೆ ನಡೆಸಲು ನಮ್ಮ ಸರ್ಕಾರ ಇಟ್ಟಿದ್ದ ಬೇಡಿಕೆಯನ್ನು ಭಾರತ ತಿರಸ್ಕರಿಸಿದೆ. ನಾವು ಗಡಿಯಲ್ಲಿ ನಡೆಯುವ ಉಗ್ರರ ಚಟುವಟಿಕೆಗೆ ಕಡಿವಾಣ ಹಾಕುವ ಸಲುವಾಗಿ ಭಾರತ ಸರ್ಕಾರದ ಜೊತೆಗೆ ಚರ್ಚೆಗೆ ಮುಂದಾಗಿದ್ದೆವು. ಆದರೆ, ನಮಗೆ ಪ್ರಧಾನಿ ಮೋದಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಒಮ್ಮೆ ವಿಫಲವಾದರೂ, ಮತ್ತೊಮ್ಮೆ ದೇಶದ ಶಾಂತಿಗಾಗಿ ಪ್ರಯತ್ನಿಸುವೆ ಎಂದು ಇಮ್ರಾನ್​​ ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ಅಂತ್ಯದಲ್ಲಿ ನ್ಯೂಯಾರ್ಕ್‌ನಲ್ಲಿ ಭಾರತದ ಜೊತೆಗೆ ಪಾಕಿಸ್ತಾನ ಮಾತುಕತೆ ನಡೆಸಲು ಬೇಡಿಕೆ ಇಟ್ಟಿತ್ತು. ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯ ವೇಳೆ ಉಭಯ ದೇಶಗಳ ನಡುವೆ ಮಾತುಕತೆ ನಡೆಸಬಹುದು ಎಂದು ಹೇಳಲಾಗಿತ್ತು. ಆದರೆ, ಭಾರತ ಪಾಕ್​​ ಆಹ್ವಾನವನ್ನು ತಳ್ಳಿಹಾಕುವ ಮೂಲಕ ನಿಮ್ಮೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು.

ಮೋದಿಗೆ ಇಮ್ರಾನ್​​ ಪತ್ರ: ಇತ್ತೀಚೆಗೆ ಇಮ್ರಾನ್​ ಖಾನ್​​ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಹೊಸ ಸರ್ಕಾರ ಸ್ಥಾಪಿಸಿದರು. ಪಾಕ್​​ ನೂತನ ಪ್ರಧಾನಿಗೆ ಅಭಿನಂದನೆ ಸಲ್ಲಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪತ್ರ ಕೂಡ ಬರೆದಿದ್ದರು. ಈ ವೇಳೆ ಧನ್ಯವಾದಗಳನ್ನು ತಿಳಿಸಿದ್ದ ಇಮ್ರಾನ್​​ ಖಾನ್​​ ಪ್ರತ್ಯುತ್ತರ ಬರೆದು ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಮುಂದಿಟ್ಟಿದ್ದರು.

ಬಳಿಕ ಭಾರತದ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಜೊತೆಗೆ ನಮ್ಮ ದೇಶದ ಸಚಿವ ಶಾ ಮೆಹಮೂದ್ ಖುರೇಶಿ ಮಾತುತಕೆ ನಡೆಸಲಿದ್ಧಾರೆ. ಭಾರತ ಒಪ್ಪಿದರೆ ಎರಡೂ ದೇಶಗಳಿಗೆ ಹೊಂದಿಕೆಯಾಗುವ ದಿನಾಂಕ ನಿಗದಿ ಮಾಡುತ್ತೇವೆ. ಈ ಭೇಟಿಗೆ ಯಾವುದೇ ಕಾರ್ಯಸೂಚಿ ನಿಗದಿ ಮಾಡಿಲ್ಲ ಎಂದು ಇಮ್ರಾನ್​​ ಖಾನ್​​ ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ, ಭಾರತ ಈ ಮಾತುಕತೆಯ ಪ್ರಸ್ತಾಪವನ್ನು ತಳ್ಳಿ ಹಾಕಿದೆ ಎನ್ನಲಾಗಿತ್ತು.

ಈ ಹಿಂದೆ 2015ರಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು. ಆಗ ಉಭಯ ದೇಶಗಳ ನಡುವೆ ಮಾತುಕತೆ ನಡೆದಿತ್ತು. ಆದರೆ, 2016ರಲ್ಲಿ ನಡೆದ ಪಠಾಣ್‌ ಕೋಟ್ ವಾಯುನೆಲೆ ಮೇಲಿನ ದಾಳಿ ಬಳಿಕ ಉಭಯ ದೇಶಗಳ ನಡುವೆ ಯಾವುದೇ ಮಾತುಕತೆ ನಡೆದಿರಲಿಲ್ಲ.

ಇದೀಗ ಪಾಕಿಸ್ತಾನ ಪದೇ ಪದೇ ಭಾರತದ ಜೊತೆ ಮಾತುಕತೆಯ ಪ್ರಸ್ತಾಪ ಇಡುತ್ತಿದೆ. ಭಾರತ ಮಾತ್ರ ಮಾತುಕತೆ ಪ್ರಸ್ತಾಪವನ್ನು ತಳ್ಳಿ ಹಾಕುತ್ತಿದೆ. ಈ ಮೂಲಕ ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರ ಚಟುವಟಿಕೆಗೆ ಕಡಿವಾಣ ಹಾಕಲು ದೇಶ ವಿಫಲವಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಲೋಕಸಭಾ ಚುನಾವಣೆಯ ನಂತರವಾದರೂ ಎರಡು ದೇಶಗಳ ನಡುವೇ ಮಾತುಕತೆ ನಡೆಯಬಹುದಾ? ಎಂಬ ಪ್ರಶ್ನೆಯೂ ಕೂಡ ಹುಟ್ಟಿಕೊಂಡಿದೆ.

Comments are closed.