ಕರ್ನಾಟಕ

ಮಂಡ್ಯ ಉಪಚುನಾವಣೆ: ಮೈತ್ರಿ ಅಭ್ಯರ್ಥಿ ಪರ ಕ್ಯಾಂಪೇನ್ ಮಾಡಲು ಸಿದ್ದರಾಮಯ್ಯ ಮನವಿ!

Pinterest LinkedIn Tumblr


ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಜಿಲ್ಲೆಯ ಉಪಚುನಾವಣೆ ಗೆಲ್ಲುಲು ಜೆಡಿಎಸ್ & ಬಿಜೆಪಿ ಪಕ್ಷಗಳು ವಿವಿಧ ರೀತಿಯಲ್ಲಿ ಕಸರತ್ತು ನಡೆಸುತ್ತಿವೆ. ಒಂದೆಡೆ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಅವರು, ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ಧಾರೆ. ಇನ್ನೊಂಡೆಡೆ ಕಾಂಗ್ರೆಸ್​ ಬಂಡಾಯ ನಾಯಕರ ಸಂಧಾನ ನಡೆಸಿ ಮೈತ್ರಿ ಅಭ್ಯರ್ಥಿ ಪರವಾಗಿ ಕ್ಯಾಂಪೇನ್​​ ಮಾಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

ಜೆಡಿಎಸ್- ಕಾಂಗ್ರೆಸ್​​ ಮೈತ್ರಿ ಅಭ್ಯರ್ಥಿಪರ ಭರ್ಜರಿ ಕ್ಯಾಂಪೇನ್​ಗೆ ಮುಂದಾಗಿವೆ. ಅಲ್ಲದೇ ಮತದಾರರನ್ನು ಸೆಳೆಯಲು ಎಲ್ಲಾ ರೀತಿಯಲ್ಲಿ ಯತ್ನಿಸುತ್ತಿವೆ. ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ತೆರಳಿ ಜನರ ಬಳಿ ಮತಯಾಚನೆ ಮಾಡಿದರೆ, ಮಾಜಿ ಸಿಎಂ ಸಿದ್ದರಾಮಯ್ಯ ಹೋಟೆಲ್​ನಲ್ಲಿ ಕಾಂಗ್ರೆಸ್​​ ನಾಯಕರ ಸಂಧಾನ ಮಾಡಿದ್ಧಾರೆ ಎನ್ನಲಾಗಿದೆ.

ಕ್ಯಾಂಪೇನ್​​ ಬಳಿಕ ಮಾತಾಡಿದ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಅವರು, ನನ್ನ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಸಿ.ಎಂ ಹೆದರು ಒಂದೇ ಆಗಿದೆ. ಈ ಕಾರಣದಿಂದಲೇ ನನಗೆ ಹೆಚ್ಚಿನ ಮತಗಳು ಬರುವ ಸಾಧ್ಯತೆಗಳಿವೆ. ನನ್ನ ಹೆಸರು ಕೂಡ ಸಿದ್ದರಾಮಯ್ಯ ಆಗಿರುವ ಕಾರಣಕ್ಕೆ ಜನ ಮಾಜಿ ಸಿ.ಎಂ ಮಂಡ್ಯಕ್ಕೆ ಬಂದಿದ್ದಾರೆ ಎಂದು ಚರ್ಚಿಸುತ್ತಿದ್ಧಾರೆ. ನನ್ನನ್ನು ಹುಡುಕಿಕೊಂಡು ಬಂದು ಪರಿಚಯ ಮಾಡಿಕೊಂಡು ಹೋಗುತ್ತಿದ್ಧಾರೆ ಎಂದರು.

ಇನ್ನು ಖಾಸಗಿ ಹೋಟೆಲ್​ವೊಂದರಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​​ ನಾಯಕರ ಸಭೆ ನಡೆದಿದೆ. ಈ ವೇಳೆ ಒಗ್ಗಟ್ಟು ಪ್ರದರ್ಶನ ಮಾಡಿ ಮೈತ್ರಿ ಅಭ್ಯರ್ಥಿಪರ ಪ್ರಚಾರಕ್ಕೆ ಮುಂದಾಗಿ ಎಂದು ತರಾಟೆ ತೆಗೆದುಕೊಂಡಿದ್ಧಾರೆ ಎನ್ನಲಾಗಿದೆ. ಜೆಡಿಎಸ್​ ಜೊತೆಗಿನ ಮೈತ್ರಿ ವಿಚಾರಕ್ಕೆ ಮುನಿಸಿಕೊಂಡಿದ್ದ ಚಲುವರಾಯಸ್ವಾಮಿ, ರಮೇಶ್ ಬಾಬು, ನರೇಂದ್ರಸ್ವಾಮಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸುದ್ದಿಗೋಷ್ಟಿ ನಡೆಸುವ ಮೂಲಕ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಎಲ್ಲವು ಸರಿ ಇದೆ ಎಂದು ತೋರಿಸಲಾಗಿದೆ. ಯಾವುದೇ ಮುನಿಸಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಮೈತ್ರಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸೋದಾಗಿ ಪಣತೊಟ್ಟಿದ್ದೇವೆ ಎಂದು ಕಾಂಗ್ರೆಸ್​​ ವಕ್ತಾರರು ತಿಳಿಸಿದ್ಧಾರೆ.

Comments are closed.