ಕರ್ನಾಟಕ

ಬಳ್ಳಾರಿ ಉಪಚುನಾವಣೆ: ಶ್ರೀರಾಮುಲು ಬಣದ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕೆ!

Pinterest LinkedIn Tumblr


ಬೆಂಗಳೂರು: ಬಳ್ಳಾರಿ ಉಪಚುನಾವಣೆಯ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಡಾ.ಟಿ.ಆರ್​​​ ಶ್ರೀನಿವಾಸ್ ಸ್ಪಷ್ಟಪಡಿಸಿದ್ಧಾರೆ. ಅಲ್ಲದೇ ಕೆಲವು ಮುಖಂಡರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಜಿಲ್ಲೆಯ ಮತ ಬಾಂಧವರ ವಿಶ್ವಾಸಗಳಿಸಿದ್ದೇನೆ. ಈ ಬಾರಿ ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಶ್ರೀನಿವಾಸ್ ಅವರು ಶ್ರೀರಾಮುಲುಗೆ ಸವಾಲ್​​ ಎಸೆದಿದ್ಧಾರೆ.

ಬಿಜೆಪಿ ಭದ್ರಕೋಟೆ ಬಳ್ಳಾರಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ಧಾರೆ. ಅದರಲ್ಲಿ ಕೆಲವರು ನನ್ನ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡುತ್ತಿದ್ಧಾರೆ. ಇದು ಉತ್ತಮ ಬೆಳವಣಿಗೆ ಅಲ್ಲ. ನಾನು ಯಾರ ಕಣ್ಣಿಗೂ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದಿರಬಹುದು. ಆದರೆ, ಇಡೀ ಜಿಲ್ಲಾದ್ಯಂತ ಸಂಚಾರ ಮಾಡುತ್ತಿದ್ದೇನೆ. ಹೀಗಾಗಿ ಜನತೆ ಮತ ಹಾಕಿ ನನ್ನ ಗೆಲ್ಲಿಸಲಿದ್ಧಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

ಉತ್ತಮ ಪ್ರತಿಕ್ರಿಯೆ: ಈ ಸಂಬಂಧ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್​​ ಅವರು, ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈಗಾಗಲೇ ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ ಸೇರದಿಂತೆ ಬಳ್ಳಾರಿ ಗ್ರಾಮೀಣ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿರುವೆ. ನನ್ನಂತ ವಿದ್ಯಾವಂತರು ಲೋಕಸಭೆ ಪ್ರವೇಶಿಸಬೇಕು ಎಂದು ಮತದಾರರು ಹೇಳುತ್ತಿದ್ದಾರೆ ಎಂದರು.

ಈ ಹಿಂದೆ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶ್ರೀರಾಮುಲು ನಯಾಪೈಸೆ ಕೆಲಸ ಮಾಡಿಲ್ಲ ಎಂದು ಜನ ಹೇಳುತ್ತಿದ್ದಾರೆ. ಜಿಲ್ಲಾದ್ಯಂತ ಕನಿಷ್ಠ ಮೂಲ ಸೌಕರ್ಯಗಳ ಕೊರತೆಗಳು ಕಂಡು ಬರುತ್ತಿವೆ. ಜನರು ತಮ್ಮ ಸಂಕಟವನ್ನು ನನ್ನ ಬಳಿ ಹೇಳಿಕೊಂಡಿದ್ಧಾರೆ. ಈ ಉಪಚುನಾವಣೆಯಲ್ಲಿ ಜನರು ಮತಹಾಕಿ ಗೆಲ್ಲಿಸಿದರೆ, ಜಿಲ್ಲೆಗಾಗಿ ದುಡಿಯುತ್ತೇನೆ ಎಂದು ಶ್ರೀನಿವಾಸ್​ ತಿಳಿಸಿದರು.

ಬಿಜೆಪಿ ವಿರುದ್ಧ ಕಿಡಿ: ಬಿಜೆಪಿ-ಕಾಂಗ್ರೆಸ್​​ ಜಾತಿ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿವೆ. ಪ್ರಚಾರದ ಭರದಲ್ಲಿ ಎರಡು ಪಕ್ಷಗಳ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ಧಾರೆ. ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ನಡೆಯಬೇಕೇ ವಿನಃ ಜಾತಿ-ಧರ್ಮದ ಹೆಸರಿನಲ್ಲಲ್ಲ. ಆದರೆ, ಇಲ್ಲಿ ಧರ್ಮದ ಹೆಸರಿನಲ್ಲಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಗೆಲ್ಲುವ ವಿಶ್ವಾಸವಿದೆ: ಸಮಾನ ಮನಸ್ಕ ಗೆಳೆಯರು, ಬೆಂಬಲಿಗರು ಹಾಗೂ ಆಪ್ತರೊಂದಿಗೆ ಸೇರಿ ಜಿಲ್ಲೆಯ ಎಲ್ಲ ಕಡೆ ಪ್ರಚಾರ ಮಾಡುತ್ತಿರುವೆ. ವೈದ್ಯರು, ವಕೀಲರು ಸೇರಿದಂತೆ ವಿದ್ಯಾವಂತರು, ರೈತರು, ದುಡಿವ ವರ್ಗದ ಜನರು ನನ್ನ ಪರವಾಗಿದ್ದಾರೆ. ಮತದಾರರೇ ನನ್ನ ಸ್ಟಾರ್ ಪ್ರಚಾರಕರು. ಅವರೇ ನನ್ನ ಸರ್ವಸ್ವ. ಸಮಾಜಿಕ ಬದಲಾವಣೆ ಆಗುವುದೇ ಮತದಾರರ ಶಕ್ತಿಯಿಂದ ಎಂದು ಜನರನ್ನು ಕೊಂಡಾಡಿದರು.

ಕಾಂಗ್ರೆಸ್​ ಪಕ್ಷದ ವಿರುದ್ಧ ಗೆಲ್ಲಲೇಬೇಕು ಎಂದು ಹೊರಿಟಿದ್ದ ಶಾಸಕ ಶ್ರೀರಾಮುಲು ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಳ್ಳಾರಿ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಡಾ.ಶ್ರೀನಿವಾಸ್​​ ಎಂಬುವವರು ಕಣಕ್ಕಿಳಿಯಲಿದ್ಧಾರೆ. ಇಲ್ಲಿಯವರೆಗೂ ಡಿಕೆಶಿ ವರ್ಸಸ್​​ ಶ್ರೀರಾಮುಲು ಎನ್ನುತ್ತಿದ್ದ ಚುನಾವಣಾ ಕಣಕ್ಕೆ ಮತ್ತೊಬ್ಬರು ಪ್ರವೇಶಿಸಿದ್ಧಾರೆ ಎನ್ನಲಾಗಿದೆ.

Comments are closed.