ರಾಷ್ಟ್ರೀಯ

ನೀರವ್​​ ಮೋದಿಗೆ ಸೇರಿದ 255 ಕೋಟಿ ಮೌಲ್ಯದ ಆಸ್ತಿ ಜಪ್ತಿ!

Pinterest LinkedIn Tumblr


ನವದೆಹಲಿ: ಪಿಎನ್‍ಬಿ ಬ್ಯಾಂಕ್​ಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಕಳಂಕಿತ ಉದ್ಯಮಿ, ವಜ್ರ ವ್ಯಾಪಾರಿ ನೀರವ್ ಮೋದಿಗೆ ಜಾರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಾಂಕಾಂಗ್‍ನಲ್ಲಿ ನೀರವ್​​ ಮೋದಿಗೆ ಸೇರಿದ 255 ಕೋಟಿ ರೂ. ಮೌಲ್ಯದ ಆಸ್ತಿ ಸೇರಿದಂತೆ ವಜ್ರ-ಚಿನ್ನಾಭರಣಗಳು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ವಂಚಕ ನೀರವ್​​ ಮೋದಿಗೆ ಸೇರಿದ 4,744 ಕೋಟಿ ರೂ. ಮೌಲ್ಯದ ಆಸ್ತಿ/ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಹಾಂಕಾಂಗ್‍ನಲ್ಲಿ 34.97 ದಶಲಕ್ಷ ಡಾಲರ್(ಸುಮಾರು 255 ಕೋಟಿ ರೂ.ಗಳು) ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಮೂಲಕ ಜಾರಿ ನಿರ್ದೇಶನಾಲಯ ನೀರವ್​​ಗೆ ಆರ್ಥಿಕ ಮರ್ಮಾಘಾತ ನೀಡಿದೆ.

ವಂಚಕ ನೀರವ್​​ ಮೋದಿ ದೇಶಕ್ಕೆ ಆರ್ಥಿಕ ಅಪರಾಧ ಎಸಗಿದ್ದಾರೆ. ಹೀಗಾಗಿ ಈತನಿಗೆ ಸೇರಿದ ಎಲ್ಲಾ ಆಸ್ತಿ/ಪಾಸ್ತಿಗಳನ್ನು ದುರ್ಬಳಕೆ ನಿಯಂತ್ರಣ ಕಾಯ್ದೆ(ಪಿಎಂಎಲ್‍ಎ) ಅಡಿ ವಶಪಡಿಸಿಕೊಳ್ಳುತ್ತಿದ್ದೇವೆ. ವಶಪಡಿಸಿಕೊಳ್ಳಲಾದ ಸದರಿ ಮೌಲ್ಯಯುತ ವಸ್ತುಗಳನ್ನು ಪಿಎನ್​ಬಿ ಬ್ಯಾಂಕಿಗೆ ನೀಡಲಾಗುವುದು. ಈ ಮೂಲಕ ಬ್ಯಾಂಕ್​​ಗೆ ಆಗಿರುವ ನಷ್ಟವನ್ನು ತುಂಬಲಾಗುವುದು ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಾಗಲೇ ನೀರವ್ ಮೋದಿ ಒಡೆತನದ ಹಾಂಕಾಂಗ್‍/ದುಬೈನಲ್ಲಿರುವ ಕಂಪನಿಗಳನ್ನು ಇಡಿ ಜಪ್ತಿ ಮಾಡಿಕೊಂಡಿದೆ. ಆತನ ಸಂಸ್ಥೆಗಳಿಂದ 26 ಹಡಗುಗಳ ಜೊತೆಗೆ ವಜ್ರ/ಚಿನ್ನಾಭರಣ/ದುಬಾರಿ ಮೌಲ್ಯದ ವಸ್ತುಗಳು ಇಡಿ ಅಧಿಕಾರಿಗಳ ತೆಕ್ಕೆಗೆ ಬಂದಿದೆ. ತನಿಖೆಯಲ್ಲಿ ಅವುಗಳ ಮೌಲ್ಯ, ವಸ್ತುಗಳ ವಿವರ, ರಫ್ತು ಮಾಡುವ ಕಂಪನಿ, ರವಾನಿಸಲ್ಪಡುವ ಹಡುಗು, ತಲುಪುವ ಸ್ಥಳ ಎಲ್ಲವನ್ನು ತಿಳಿದುಕೊಂಡೇ ಜಪ್ತಿ ಮಾಡಿದ್ದೇವೆ ಎಂದು ಇಡಿ ಹೇಳಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 12,800 ಕೋಟಿ ರೂ.ಗಳನ್ನು ವಂಚಿಸಿ ನೀರವ್ ಮೋದಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ಧಾನೆ. ಆತನನ್ನು ಬಂಧಿಸಿ ಭಾರತಕ್ಕೆ ಕರೆತರಲು ಸಿಬಿಐ ಮುಂದಾಗಿದ್ದು, ಅಂತಾರಾಷ್ಟ್ರೀಯ ಪೊಲೀಸ್ ನೆರವು ಕೂಡ ಕೋರಿದೆ. ಅಲ್ಲದೆ, ಆತನ ಬಂಧನಕ್ಕಾಗಿ ಕಾನೂನು ಕುಣಿಕೆಯನ್ನೂ ಸಹ ಬಿಗಿಗೊಳಿಸುತ್ತಿದೆ.

ಇನ್ನು ನೀರವ್ ಮೋದಿ ಸಹಚರ ಫೈರ್ ಸ್ಟಾರ್ ಸಿಇಒ ಮಿಹಿರ್ ಬನ್ಸಾಲಿ ವಿರುದ್ಧ ಕೂಡ ರೆಡ್​ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಅವರ ಸಹೋದರಿಯ ವಿರುದ್ದವೂ ಕೋರ್ಟ್​​ ನೋಟಿಸ್ ಜಾರಿ ಮಾಡಿದೆ. ನೀರವ್ ಮೋದಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ವಿಪಕ್ಷಗಳು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರವೂ ಸಹ ಕಠಿಣ ಕ್ರಮಕ್ಕೆ ಮುಂದಾಗಿ ಇಂಟರ್ ಪೋಲ್ ಸಹಾಯ ಕೇಳಿದೆ.

Comments are closed.