ಕರಾವಳಿ

ಬಂದರು ಮಹಿಳಾ ತಲೆ ಹೊರೆ ಕಾರ್ಮಿಕರಿಂದ ಸಂಘದ ಅಧ್ಯಕ್ಷರ ಮನೆ ಮುಂದೆ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಬಂದರು ಪ್ರದೇಶದ ಅಡಿಕೆ ಗಾರ್ಬಲ್ ಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದ ಮಾಲಕ ವರ್ಗದ ವಿರುದ್ಧ ಮಹಿಳಾ ಕಾರ್ಮಿಕರು ಗುರುವಾರ ನಗರದಲ್ಲಿ ಮೆರವಣಿಗೆ ನಡೆಸಿ ಅಳಕೆಯಲ್ಲಿರುವ ಮಾಲಕರ ಸಂಘದ ಅಧ್ಯಕ್ಷರ ಮನೆ ಮುಂದೆ ಪ್ರತಿಭಟನೆ ನಡೆಸಿದರು.

250 ಕ್ಕೂ ಮಿಕ್ಕಿದ ಮಹಿಳಾ ಕಾರ್ಮಿಕರು ಬಂದರು ಪ್ರದೇಶದಿಂದ ಮೆರವಣಿಗೆಯಲ್ಲಿ ಹೊರಟು, ಕಾರ್ಮಿಕರ ಬೇಡಿಕೆ ಈಡೇರಲಿ, ಕಾರ್ಮಿಕ ಮಾಲಕರ ಮಾತುಕತೆ ಯಶಸ್ವಿಯಾಗಲಿ ಎಂಬಿತ್ಯಾದಿ ಘೋಷಣೆ ಗಳನ್ನು ಕೂಗುತ್ತಾ ಸಾಗಿದರು.

ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಲಕರ ವರ್ಗದ ಹಿತಾಸಕ್ತಿಗಳನ್ನು ಕಾಪಾಡುತ್ತದೆಯೇ ಹೊರತು ಕಾರ್ಮಿಕ ವರ್ಗದ ಪರವಾಗಿಲ್ಲ, ಇದರಿಂದಾಗಿ ಕೊಬ್ಬಿರುವ ಮಾಲಕರು ಕಾರ್ಮಿಕರ ವಿರುದ್ಧಶೋಷಣೆಗಳನ್ನು ಇನ್ನಷ್ಟು ತೀವ್ರಗೊಳಿಸಿ ಅವರಿಗೆ ನ್ಯಾಯ ಪ್ರಕಾರ ಸಿಗಬೇಕಾದ ಸವಲತ್ತುಗಳನ್ನು ಕೂಡ ನೀಡದೆ ಸತಾಯಿಸುತ್ತಿದ್ದಾರೆ.ಇದರ ವಿರುದ್ಧ ಕಾರ್ಮಿಕ ವರ್ಗ ಒಂದಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ದ.ಕ.ಜಿಲ್ಲಾ ತಲೆಹೊರೆ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಬಂದರು ಪ್ರದೇಶದ ಕಾರ್ಮಿಕರ ಬೇಡಿಕೆಗಳನ್ನು ಪ್ರತಿ 3 ವರ್ಷಕ್ಕೊಮ್ಮೆ ಸಹಾಯಕ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಕಾರ್ಮಿಕ ಮಾಲಕರ ಮಾತುಕತೆ ನಡೆದು ಅಂತಿಮವಾಗಿ ಒಂದು ಒಪ್ಪಂದಕ್ಕೆ ಬರಲಾಗುತ್ತಿತ್ತು ಆದರೆ ಈ ಸಲ ಮಾರ್ಚ್ ತಿಂಗಳಲ್ಲಿ ಹೊಸ ಒಪ್ಪಂದಕ್ಕೆ ಸಂಬಂಧಿಸಿ ಬೇಡಿಕೆ ಪಟ್ಟಿ ನೀಡಿದ್ದರೂ ಮಾಲಕ ವರ್ಗದ ಹಾಗೂ ಸಹಾಯಕ ಕಾರ್ಮಿಕ ಆಯುಕ್ತರ ಯಾವುದೇ ರೀತಿಯ ಸ್ಪಂದನವಿಲ್ಲ.

ಇದರಿಂದಾಗಿ ಕಳೆದ 7 ತಿಂಗಳಿನಿಂದ ಕಾರ್ಮಿಕರು ತೀರಾ ಸಂಕಷ್ಟದಲ್ಲಿದ್ದು, ತಾ; 26-10-2018 ರಂದು ಕಾರ್ಮಿಕ ಇಲಾಖೆಯಲ್ಲಿ ಮಾತುಕತೆಗೆ ದಿನಾಂಕ ನಿಗದಿಯಾಗಿದ್ದು, ಮಾಲಕರು ಈ ಸಭೆಯಲ್ಲಿ ಭಾಗವಹಿಸುವ ಮೂಲಕ ಕಾರ್ಮಿಕರಿಗೆ ನ್ಯಾಯ ಒದಗಿಸುವಲ್ಲಿ ಮುಂದಡಿ ಇಡಬೇಕಾಗಿದೆ,ಇಲ್ಲದಿದ್ದಲ್ಲಿ ಕಾರ್ಮಿಕರು ಇನ್ನಷ್ಟು ತೀವ್ರ ರೀತಿಯ ಹೋರಾಟಕ್ಕೆ ಮುಂದಾಗಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಹೋರಾಟದ ನೇತ್ರತ್ವವನ್ನು ತಲೆ ಹೊರೆ ಕಾರ್ಮಿಕರ ಸಂಘದ ಮುಖಂಡರಾದ ಅಹಮ್ಮದ್ ಬಾವ,ಜಯ,ಕುಶಲ, ಶಕುಂತಲಾ, ವಾರಿಜ,ರಫೀಕ್ ಹರೇಕಳ,ಅಶ್ರಫ್,ಅಸ್ಲಂ ಮುಂತಾದವರು ವಹಿಸಿದ್ದರು.

Comments are closed.