ಉಡುಪಿ: ಅಂಬುಲೆನ್ಸ್ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಓರ್ವ ಮಹಿಳೆ ಸಮೇತ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ಜಿಲ್ಲೆಯ ಕೋಟ ಸಮೀಪದ ಮಣೂರು ಎಂಬಲ್ಲಿ ನಡೆದಿದೆ.
ಉತ್ತರಕನ್ನಡ ಜಿಲ್ಲೆ ಕಾರವಾರದ ಶಿರವಾಡದ ಗಾಂವ್ಕರ್ ವಾಡ ನಿವಾಸಿಗಳಾದ ಉಲ್ಲಾಸ್ ತಳೇಕರ್(45), ಅಶೋಕ್ ಬಾಡ್ಕರ್(38), ಶೈಲೇಶ್ ಕಮಲಾಕರ್(40) ಮೃತ ದುರ್ದೈವಿಗಳು. ಇನ್ನು ಅದೇ ಅಂಬುಲೆನ್ಸ್ ವಾಹನದಲ್ಲಿದ್ದ ಸರಿತಾ ಉಲ್ಲಾಸ್ ತಳೇಕರ್, ಅರವಿಂದ್ ಹಾಗೂ ಅಂಬುಲೆನ್ಸ್ ಚಾಲಕ ರಾಘವೇಂದ್ರ ಗಂಭೀರವಾಗಿ ಗಾಯಗೊಂಡವರು.
ಚಿಕಿತ್ಸೆಗಾಗಿ ಕಾರವರದಿಂದ ಮಂಗಳೂರಿಗೆ….
ಕೂಲಿ ಕೆಲಸ ಮಾಡಿಕೊಂಡಿದ್ದ ಉಲ್ಲಾಸ್ ತಳೇಕರ್ ಎಂಬವರಿಗೆ ಜಾಂಡೀಸ್ ಸಮಸ್ಯೆ ಇದ್ದು ಅದು ಉಲ್ಬಣಿಸಿದ್ದು ಅಲ್ಲಿನ ವೈದ್ಯರ ಸಲಹೆಯಂತೆ ಅವರ ಪತ್ನಿ ಸರಿತಾ ಹಾಗೂ ಇತರೆ ನಾಲ್ವರು ಅಂಬುಲೆನ್ಸ್ ವಾಹನದಲ್ಲಿ ಮಂಗಳೂರಿನ ಆಸ್ಪತ್ರೆಗೆ ತಡರಾತ್ರಿ ಹೊರಟಿದ್ದರು. ಈ ವೇಳೆ ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಂಬುಲೆನ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ಎದುರಿಗೆ ಬರುತ್ತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಂಬುಲೆನ್ಸ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು ಪೊಲೀಸರು, ಸ್ಥಳೀಯರು ಹಾಗೂ ಆ ಮಾರ್ಗದಲ್ಲಿ ಸಾಗುತ್ತಿದ್ದ ಸುರತ್ಕಲ್ ಮೂಲದ ಯುವಕರು ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ಶ್ರಮಿಸಿದರು.
ಅಪಘಾತದಲ್ಲಿ ಸರಿತಾ ಉಲ್ಲಾಸ್ ತಳೇಕರ್ ಹಾಗೂ ಅರವಿಂದ, ರಾಘು ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಮಣಿಪಾಲ ಕೆಎಂಸಿ ಹಾಗೂ ಮಮ್ಗಳೂರು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೂರು ಮೃತದೇಹಗಳನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತರ ಮತ್ತು ಗಾಯಾಳುಗಳ ಸಂಬಂಧಿಕರು ಕುಂದಾಪುರಕ್ಕೆ ಆಗಮಿಸಿದ್ದಾರೆ.
ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಜಯಶಂಕರ್, ಬ್ರಹ್ಮಾವರ ಸಿಪಿಐ ಶ್ರೀಕಾಂತ್, ಕೋಟ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.