ಕರ್ನಾಟಕ

ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಬಿಟ್ಟು ಹಾರಿದ ಹೆಲಿಕಾಪ್ಟರ್

Pinterest LinkedIn Tumblr


ಹಾಸನ: ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಬೇಕಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೆಲಿಪ್ಯಾಡ್‌ಗೆ ನಿಗದಿತ ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ ಸಿಎಂ ಅವರನ್ನು ಬಿಟ್ಟು ಹೆಲಿಕಾಪ್ಟರ್ ಬೆಂಗಳೂರಿಗೆ ತೆರಳಿದ ಘಟನೆ ಶನಿವಾರ ನಡೆದಿದೆ.

ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರು ಪ್ರಚಾರ ಮುಗಿಸಿ ಕೆ.ಆರ್.ಪೇಟೆ ಮಾರ್ಗವಾಗಿ ಶ್ರವಣಬೆಳಗೊಳ ಹೆಲಿಪ್ಯಾಡ್‌ಗೆ ಆಗಮಿಸಿ ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಬೇಕಿತ್ತು.

ಸಿಎಂ ಕಚೇರಿಯ ಪೂರ್ವ ನಿಗದಿಯಂತೆ 3.35ಕ್ಕೆ ಶ್ರವಣಬೆಳಗೊಳ ಹೆಲಿಪ್ಯಾಡ್‌ನಿಂದ ಬೆಂಗಳೂರಿಗೆ ಸಿಎಂ ತೆರಳಬೇಕಾಗಿತ್ತು. ಆದರೆ ಸಿಎಂ ನಿಗದಿತ ಸಮಯಕ್ಕೆ ಬಾರದೆ ಸಂಜೆ 5 ಗಂಟೆಗೆ ಸಮಯವನ್ನು ಮುಂದೂಡಲಾಗಿತ್ತು.

5 ಗಂಟೆಗೂ ಸಿಎಂ ಬಾರದೆ ಇದ್ದುದರಿಂದ ಪೊಲೀಸರ ಮನವಿ ಮೇರೆಗೆ ಪೈಲಟ್‌ಗಳು 5.30ರವರೆಗೂ ಕಾದರು. ಆ ಸಮಯಕ್ಕೂ ಸಿಎಂ ಆಗಮಿಸಲಿಲ್ಲ. ಕತ್ತಲಾದ ಬಳಿಕ ಹಾರಾಟಕ್ಕೆ ಅವಕಾಶವಿಲ್ಲದ ಕಾರಣ ಪೈಲಟ್‌ಗಳು ಅನಿವಾರ್ಯವಾಗಿ ಸಿಎಂ ಅವರನ್ನು ಬಿಟ್ಟು ಬೆಂಗಳೂರಿಗೆ ತೆರಳಿದರು. ನಂತರ ಸಿಎಂ ಕೆ.ಆರ್.ಪೇಟೆ ಕಾರ್ಯಕ್ರಮ ಮುಗಿಸಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸಿದರು.

Comments are closed.