ಕರ್ನಾಟಕ

ಉಪ ಚುನಾವಣೆ ಬಳಿಕ ದೋಸ್ತಿ ಸರ್ಕಾರ ಪತನ: ಯಡಿಯೂರಪ್ಪ

Pinterest LinkedIn Tumblr


ಬಳ್ಳಾರಿ: ಉಪ ಚುನಾವಣೆ ಬಳಿಕ ದೋಸ್ತಿ ಸರ್ಕಾರ ಪತನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಪಬ್ಲಿಕ್ ಟಿವಿಗೆ ಕಿರು ಸಂದರ್ಶನ ನೀಡಿರೋ ಯಡಿಯೂರಪ್ಪ, ಸರ್ಕಾರ ಹೇಗೆ ಪತನ ಆಗುತ್ತೆ.. ಅದು ಆಪರೇಷನ್ ಕಮಲದ ಮೂಲಕನಾ ..? ಅಂತ ಹೇಳೋದು ಈಗ ಟೂ ಅರ್ಲಿ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ.

ಅಕ್ಟೋಬರ್ 30 ಹಾಗೂ 31ರಂದು ಶಿವಮೊಗ್ಗದಲ್ಲಿ ಪ್ರಚಾರ ಕೈಗೊಳ್ಳುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿಗೂ ಟಾಂಗ್ ನೀಡಿರೋ ಬಿಎಸ್‍ವೈ, ಅಪ್ಪ-ಮಕ್ಕಳ ರಾಜಕೀಯ ನಿವೃತ್ತಿಗೂ ಈ ಫಲಿತಾಂಶ ಕಾರಣವಾಗಲಿದೆ. 75 ವರ್ಷ ವಯಸ್ಸಾದವರು ಸಿಎಂ ಆಗಬಾರದು ಅಂತ ಬಿಜೆಪಿಯಲ್ಲೇನೂ ಕಾನೂನು ಇಲ್ಲ. ನಾನು ಇನ್ನೂ 10 ವರ್ಷ ರಾಜಕೀಯದಲ್ಲಿರುತ್ತೇನೆ ಅಂತ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ನನಗೆ ಸಿಎಂ ಆಗಬೇಕೆಂಬ ಆಸೆ ಇಲ್ಲ. ಈಗಾಗಲೇ ಆ ಪದವಿಯನ್ನು ನೋಡಿದ್ದೇನೆ. 2019ರ ಚುನಾವಣೆಗೆ ಕರ್ನಾಟಕದಿಂದ 20 ರಿಂದ 22 ಸಂಸದರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುವುದೇ ನಮ್ಮ ಗುರಿ. ಉಪ ಚುನಾವಣೆ ಫಲಿತಾಂಶದ ಬಳಿಕ ಏನು ಆಗುತ್ತೆ ಎಂಬುದನ್ನು ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಣಯಿಸುತ್ತೇವೆ. ಚುನಾವಣಾಯಲ್ಲಿ ಸೋಲು ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ ನಿಶ್ಚಿತವಾಗಿದ್ದರಿಂದ ನಿಂತಲ್ಲಿ, ಕೂತಲ್ಲಿ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದಕ್ಕೂ ಮುನ್ನ ಮಾತನಾಡಿದ್ದ ಯಡಿಯೂರಪ್ಪನವರು, ನಾನು ಶಿವಮೊಗ್ಗದಲ್ಲಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದೇನೆ. ಈಗ ರಾಘವೇಂದ್ರ ಸಹ ಅಷ್ಟೇ ಅಂತರಗಳದಿಂದ ಗೆಲ್ಲುತ್ತಾರೆ. ಬಳ್ಳಾರಿಯಲ್ಲಿಯೂ ಜೆ.ಶಾಂತಾ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ಜಮಖಂಡಿಯನ್ನು ಈಗಾಗಲೇ ಗೆದ್ದಿದ್ದೇವೆ. ಮಂಡ್ಯ ಮತ್ತು ರಾಮನಗರದಲ್ಲಿ ಜೆಡಿಎಸ್ ಗೆ ಟಫ್ ಫೈಟ್ ಕೊಡಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

ಉಪ ಚುನಾವಣೆ ಬಳಿಕ ರಾಜ್ಯ ಸರ್ಕಾರಕ್ಕೆ ಕಂಟಕ ಎದುರಾಗುತ್ತೆ ಅಂತ ಭವಿಷ್ಯ ನುಡಿದಿರೋ ಬಿಎಸ್‍ವೈ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸರ್ಕಾರ ಬಿದ್ದು ಹೋಗುತ್ತೆ ಅಂದರೆ ಅಧಿಕಾರಿಗಳು ಕೆಲಸ ಮಾಡೋದಕ್ಕೆ ನಿರ್ಲಕ್ಷ್ಯ ಮಾಡುತ್ತಾರೆ. ಖಜಾನೆಯಲ್ಲಿ ಹಣ ಖಾಲಿ ಆಗಿದೆ ಅಂತ ಬಿಎಸ್‍ವೈ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾರೆ. ಏನೋ ಇವರಪ್ಪನ ಆಸ್ತಿ ತಗೊಂಡು ಮಂಡ್ಯಕ್ಕೆ ಬಂದೆ ಅನ್ನೋ ರೀತಿ ಯಡಿಯೂರಪ್ಪ ಮಾತನಾಡುತ್ತಾರೆ. ಯಾವ ಮುಖ ಇಟ್ಟುಕೊಂಡು ನಿಮ್ಮ ಬಳಿ ಮತ ಕೇಳುತ್ತಾರೆ ಅಂತ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಶುಕ್ರವಾರ ಮಳವಳ್ಳಿಯಲ್ಲಿ ಸಾವಿನ ಬಗ್ಗೆ ಪ್ರಸ್ತಾಪಿಸಿದ ಸಿಎಂ, ನನ್ನದು ಮೊಸಳೆ ಕಣ್ಣೀರು ಅನ್ನೋವ್ರಿಗೆ ಮಾನವೀಯತೆ ಇಲ್ಲ. ನಾನು ಇನ್ನು 85 ವರ್ಷ ಬದುಕಿ ಬಾಳುತ್ತೇನೆ ಅಂದಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸಹವಾಸ ಮಾಡಿದ ಮೇಲೆ ಕುಮಾರಸ್ವಾಮಿ ಅವರ ಆರೋಗ್ಯ ಹದಗೆಟ್ಟಿದೆ ಅಂತ ವ್ಯಂಗ್ಯ ಮಾಡಿದ್ದಾರೆ.

Comments are closed.