ಮನೋರಂಜನೆ

ವಿಲನ್‌ ಮೇಲೆ ಬೇಸರ ಬೇಡ, ಪಾತ್ರ ತೃಪ್ತಿ ಕೊಟ್ಟಿದೆ: ಶಿವರಾಜ್ ಕುಮಾರ್

Pinterest LinkedIn Tumblr


“ದಿ ವಿಲನ್‌’ ಮೂಲಕ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದ ಶಿವರಾಜಕುಮಾರ್‌ ಇದೀಗ ಮತ್ತೂಂದು ಹೊಸ ಅವತಾರದಲ್ಲಿ ಅಭಿಮಾನಿಗಳನ್ನು ಖುಷಿಪಡಿಸಲು ಸಜ್ಜಾಗಿದ್ದಾರೆ. ಇದುವರೆಗೆ ಶಿವರಾಜಕುಮಾರ್‌ ಅವರನ್ನು ನೋಡದೇ ಇರುವಂತಹ ಪಾತ್ರದಲ್ಲಿ ಅಭಿಮಾನಿಗಳು ನೋಡಿ ಖುಷಿಯಾಗುವ ಸಮಯ ಹತ್ತಿರವಾಗುತ್ತಿದೆ. ಸ್ವತಃ ಶಿವರಾಜಕುಮಾರ್‌ ಅವರೇ ತಮ್ಮ ಮುಂದಿನ ಚಿತ್ರ ಮತ್ತು ಪಾತ್ರ ಕುರಿತು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅದು “ಕವಚ’. ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು, ಇಷ್ಟರಲ್ಲೇ ಟ್ರೇಲರ್‌ ಬಿಡುಗಡೆ ಮಾಡಲು ಚಿತ್ರತಂಡ ಅಣಿಯಾಗುತ್ತಿದೆ. ಆ ಬಗ್ಗೆ ಹೇಳಿಕೊಳ್ಳುವ ಶಿವರಾಜಕುಮಾರ್‌, “ನನ್ನ ಅಭಿನಯದ “ಮಫ್ತಿ’, “ಟಗರು’, “ದಿ ವಿಲನ್‌’ ಚಿತ್ರಗಳ ಪಾತ್ರ ಬಿಟ್ಟು, “ಕವಚ’ ಚಿತ್ರ ನೋಡಬೇಕು. ಯಾಕೆಂದರೆ, ಮೊದಲ ಸಲ ನಾನು ಆ ಚಿತ್ರದಲ್ಲಿ ಅಂಧ ಪಾತ್ರ ನಿರ್ವಹಿಸಿದ್ದೇನೆ. ನನಗೂ ಆ ಚಿತ್ರದ ಮೇಲೆ ಕುತೂಹಲವಿದೆ.

“ಮಫ್ತಿ’ ಚಿತ್ರ ನೋಡಿದವರು, ಶಿವಣ್ಣ, ಬರೀ ಕಣ್ಣಲ್ಲೇ ಮಾತಾಡುತ್ತಾರೆ ಅಂತ ಹೇಳುವ ಮೂಲಕ ಮೆಚ್ಚುಗೆ ಸೂಚಿಸಿದ್ದರು. ಆದರೆ, “ಕವಚ’ ಚಿತ್ರದಲ್ಲಿ ಕಣ್ಣಿಲ್ಲದ ಪಾತ್ರ ಮಾಡಿದ್ದೇನೆ. ಕಣ್ಣಿರುವ ನಾನು ಕಣ್ಣು ಕಾಣಿಸದ ವ್ಯಕ್ತಿಯಾಗಿ ನಟಿಸಿರುವುದೇ ವಿಶೇಷ. ಅಂತಹ ಪಾತ್ರ ನಟರಿಗೆ ಚಾಲೆಂಜ್‌ ಕೂಡ. ಇಷ್ಟರಲ್ಲೇ “ಕವಚ’ ಕೂಡ ಬರುತ್ತದೆ. ವಿಭಿನ್ನ ಕಥೆ, ಪಾತ್ರ ಮೂಲಕ ಕಾಣಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆಯೂ ಇದೆ’ ಎಂಬುದು ಶಿವರಾಜಕುಮಾರ್‌ ಅವರ ಮಾತು.

ನನಗೆ ನಿರ್ದೇಶಕರ ಕಲ್ಪನೆ ಕೆಡಿಸಲು ಬರಲ್ಲ: ಇನ್ನು, “ದಿ ವಿಲನ್‌’ ಸಕ್ಸಸ್‌ ಬಗ್ಗೆ ಖುಷಿ ಹಂಚಿಕೊಳ್ಳುವ ಅವರು, ಎಲ್ಲೆಡೆ ಜನರು ಇಷ್ಟಪಟ್ಟಿದ್ದಾರೆ. ದೊಡ್ಡ ಮಟ್ಟದ ಮೆಚ್ಚುಗೆಯೂ ಸಿಕ್ಕಿದೆ. ಚಿತ್ರರಂಗದ ದಾಖಲೆ ಎನ್ನಲಾಗುತ್ತಿದೆ. ಒಳ್ಳೆಯ ಚಿತ್ರದಲ್ಲಿ ನಾನು ಭಾಗಿಯಾಗಿದ್ದೇನೆಂಬ ಖುಷಿ ಇದೆ. ನನ್ನ ಅಭಿಮಾನಿಗಳಿಗೆ ಬೇಸರವಾಗಿರಬಹುದು.

ಆದರೆ, ಅದನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು. ಲೈಫ್ ಇಷ್ಟೇ ಅಲ್ಲ, ಇನ್ನೂ ದೊಡ್ಡದಿದೆ. ನನಗೀಗ ವಯಸ್ಸು 56. ಇನ್ನೂ ಹೊಸಬಗೆಯ ಪಾತ್ರ ಮಾಡುತ್ತಲೇ ಅಭಿಮಾನಿಗಳನ್ನು ರಂಜಿಸುತ್ತೇನೆ. ಅಭಿಮಾನಿಗಳಿಗೆ ನಿರಾಸೆಯಾಗಿರಬಹುದು. ಯಾರೂ ಬೇಸರ ಮಾಡಿಕೊಳ್ಳದೆ, ಎಂಜಾಯ್‌ ಮಾಡಿಕೊಂಡು ಚಿತ್ರ ನೋಡಿ. ನನ್ನ ಅಭಿಮಾನಿಗಳಿಗೆ ಎಲ್ಲವೂ ಅರ್ಥ ಆಗುತ್ತೆ.

ನನಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ ತೃಪ್ತಿ ಇದೆ. ನಿರ್ದೇಶಕರ ಕಲ್ಪನೆಯನ್ನು ಕೆಡಿಸುವುದಕ್ಕೆ ನನಗೆ ಬರಲ್ಲ. ಯಾವುದು ತಪ್ಪು, ಸರಿ ಎಂಬುದನ್ನು ಅವರಿಗೇ ಬಿಟ್ಟು ಬಿಡ್ತೀನಿ. ಪಾತ್ರದ ತಕ್ಕಂತೆ ಮಾಡುವುದು ನನ್ನ ಜವಾಬ್ದಾರಿ. “ದಿ ವಿಲನ್‌’ ಗಳಿಕೆಯಲ್ಲಿ ಚೆನ್ನಾಗಿದೆ. ಫ್ಯಾಮಿಲಿ ಆಡಿಯನ್ಸ್‌ ಕೂಡ ನೋಡುತ್ತಿದ್ದಾರೆಂಬುದೇ ಖುಷಿ’ ಎನ್ನುತ್ತಾರೆ ಶಿವರಾಜಕುಮಾರ್‌.

Comments are closed.