ಕುಂದಾಪುರ: ಪ್ರಗತಿ ಹೊಂದದ ನಮ್ಮೂರು, ರಾಜಕಾರಣಿಗಳ ನಿರ್ಲಕ್ಷ್ಯ…ಹಲವು ವರ್ಷಗಳಿಂದ ಮಾಡಿದ ಹೋರಾಟ ಪ್ರಯೋಜನಕ್ಕಿಲ್ಲ. ನಮ್ಮ ಸಮಸ್ಯೆಯನ್ನು ಕಣ್ಣೆತ್ತಿ ಕಾಣುತ್ತಿಲ್ಲ ರಾಜಕಾರಣಿಗಳು! ಅಭಿವೃದ್ದಿ ಕಾಣದ ಊರಿನ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ! ಗ್ರಾಮಸ್ಥರ ಆಕ್ರೋಷ! ಚುನಾವಣೆಗೆ ಧಿಕ್ಕಾರ, ವಿರೋಧ!– ಇದೆಲ್ಲ ಕಂಡು ಬಂದಿದ್ದು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೂರು ಎಂಬಲ್ಲಿನ ನಾಲ್ಕನೆ ವಾರ್ಡ್ ಪ್ರದೇಶದಲ್ಲಿ.
(ವೈರಲ್ ಆದ ಫೋಟೋಗಳು)
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಬಿಜೂರು ಗ್ರಾಮದ ನಾಲ್ಕನೆ ವಾರ್ಡ್ (ಬಿಜೂರು ಶೆಟ್ರಕೇರಿ ರಸ್ತೆ) ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದು ಅಲ್ಲಲ್ಲಿ ‘ಪ್ಲೇ ಕಾರ್ಡ್’ನಲ್ಲಿ ಮತದಾನದ ಬಹಿಷ್ಕಾರ ಎಚ್ಚರಿಕೆ ನೀಡಿದ್ದು ಅಧಿಕಾರಿ ವರ್ಗದ ಸಮೇತ ಇದೀಗ ವಿವಿಧ ಪಕ್ಷಗಳ ರಾಜಕೀಯ ಮುಖಂಡರಿಗೆ ತಲೆನೋವು ಆರಂಭವಾಗಿದೆ.
ಇವರ ಅಹವಾಲು ಏನು?
ಕಳೆದ ಹಲಾವರು ವರ್ಷಗಳಿಂದ ಬಿಜೂರು ನಾಲ್ಕನೇ ವಾರ್ಡ್‌ಗೆ ಅನುದಾನಗಳನ್ನೇ ನೀಡಿಲ್ಲ. ಇದರಿಂದ ಯಾವುದೇ ಅಭಿವ್ರದ್ದಿಯೂ ಇಲ್ಲಿ ಆಗಿಲ್ಲ. ಈ ಭಾಗಕ್ಕೆ ಸಂಸದರಾಗಿ ಆಯ್ಕೆಯಾಗಿದ್ದ ಯಡಿಯೂರಪ್ಪನವರು ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಗ್ರಾಮಪಂಚಾಯಿತಿಗೆ ಸಾಕಷ್ಟು ಮೊತ್ತದಲ್ಲಿ ಅನುದಾನ ಬರುತ್ತೆ. ಆದರೆ ನಮ್ಮ ವಾರ್ಡ್‌ನಲ್ಲಿ ಇದುವರೆಗೂ ಯಾವುದೇ ಕಾಮಗಾರಿ ನಡೆದಿಲ್ಲ. ಕುಡಿಯುವ ನೀರಿನ ಸಮಸ್ಯೆ, ದಾರಿದೀಪ ಮುಂತಾದ ಮೂಲಭೂತ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಜನರಿಗೆ ಸಿಗುವ ಕಡಿಮೆ ದರದ ಪಡಿತರ ತರಲು ಕಿಲೋಮೀಟರುಗಟ್ಟಲೇ ಆಟೋ ರಿಕ್ಷಾದಲ್ಲಿ ಸಾಗಿ ನೂರಾರು ರೂಪಾಯಿ ವ್ಯಯಿಸಬೇಕು. ಪ್ರತೀ ಭಾರಿ ಚುನಾವಣೆ ಬಂದಾಗ ಆಶ್ವಾಸನೆ ಕೊಟ್ಟು ಹೋಗುವ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಪರಿಹಾರ ಮಾಡಿಲ್ಲ. ನಮಗೆ ಸಮಸ್ಯೆ ನಿವಾರಣೆಯಾಗಲೇಬೇಕಿದ್ದು ಹೀಗಾಗಿ ನಾವೇ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದು ಬಿಜೂರು ಶೆಟ್ರಕೇರಿ ವಾರ್ಡ್ ನಿವಾಸಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಗ್ರಾಮಸ್ಥರ ಈ ಚುನಾವಣಾ ಬಹಿಷ್ಕಾರ ಎಚ್ಚರಿಕೆ ಫೋಟೋ ಹಾಗು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆ ಬಳಿಕವೇ ಉಭಯ ಪಕ್ಷಗಳ ಮುಖಂಡರು ಮತ್ತು ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ನಾಳೆ ಏನು ನಡೆಯುತ್ತೋ ಕಾದುನೋಡೋಣ.
(ವರದಿ- ಯೋಗೀಶ್ ಕುಂಭಾಸಿ)
Comments are closed.