ರಾಷ್ಟ್ರೀಯ

ದಲಿತ ಯುವಕನನ್ನು ಪ್ರೀತಿಸುತ್ತಿದ್ದ ತನ್ನ ಮಗಳನ್ನೇ ಹತ್ಯೆ ಮಾಡಿದ ಪಾಪಿ ತಂದೆ

Pinterest LinkedIn Tumblr

ವಿಜಯವಾಡ: ಆಂಧ್ರ ಪ್ರದೇಶದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ ನಡೆದಿದ್ದು, ದಲಿತ ಯುವಕನನ್ನು ಪ್ರೀತಿಸುತ್ತಿದ್ದ ತನ್ನ ಮಗಳನ್ನೇ ಹತ್ಯೆ ಮಾಡಿದ ಘಟನೆ ಸೋಮವಾರ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

ಕೋಮರೊಲು ಮಂಡಲದ ನಾಗಿರೆಡ್ಡಿಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಕೆ ಪಾಪಯ್ಯ ಎಂಬ ವ್ಯಕ್ತಿ ದಲಿತ ಯುವಕನನ್ನು ಪ್ರೀತಿಸುತ್ತಿದ್ದ ತನ್ನ 20 ವರ್ಷದ ಮಗಳು ಇಂದ್ರಜಾಳನ್ನು ಇಂದು ಬೆಳಗಿನ ಜಾವ ಕೊಲೆ ಮಾಡಿ, ಶವಸಂಸ್ಕಾರ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದ್ರಜಾ ತಮ್ಮ ಊರಿನ ದಲಿತ ಯುವಕನನ್ನು ಪ್ರೀತಿಸುತ್ತಿದ್ದಳು. ಅಲ್ಲದೆ ಆತನನ್ನೇ ಮದುವೆಯಾಗಲು ಬಯಸಿದ್ದಳು. ಆದರೆ ನಿವೃತ್ತ ಪೊಲೀಸ್ ಪೇದೆಯಾಗಿರುವ ಪಾಪಯ್ಯ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ತಂದೆ – ಮಗಳ ನಡುವೆ ಜಗಳವಾಗಿದ್ದು, ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪಾಪಯ್ಯ ತನ್ನ ಮಾತು ಕೇಳದ ಮಗಳಿಗೆ ನೇಣು ಬಿಗಿದು ಸಾಯಿಸಿದ್ದು, ಬೆಳಗ್ಗೆ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗ್ರಾಮಸ್ಥರಿಗೆ ಹೇಳಿ ಶವಸಂಸ್ಕಾರ ಮಾಡಿ ಮುಗಿಸಿದ್ದಾನೆ. ಆದರೆ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪಾಪಯ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Comments are closed.