ಗುಜರಾತ್ / ವಡೋಧರ,ಅಕ್ಟೋಬರ್ .31: ಗುಜರಾತ್ನ ನರ್ಮದಾ ಜಿಲ್ಲೆಯ ಕೆವಾಡಿಯಾ ಬಳಿ ಸಾಧು ಬೆಟ್ ದ್ವೀಪದಲ್ಲಿ ನಿರ್ಮಿಸಲಾದ ದೇಶದ ಮೊದಲ ಉಪ ಪ್ರಧಾನಿ ಏಕತೆಯ ಹರಿಕಾರ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಬೃಹತ್ ಏಕತಾ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಸರ್ದಾರ್ ಪಟೇಲ್ ಪ್ರಯತ್ನದಿಂದ ದೇಶ ಒಂದಾಯಿತು ದೇಶವನ್ನು ವಿಭಜಿಸುವ ಪ್ರಯತ್ನವನ್ನು ಅವರು ವಿಫಲಗೊಳಿಸಿದ್ದರು. 500ಕ್ಕೂ ಹೆಚ್ಚು ಪ್ರಾಂತ್ಯಗಳಾಗಿ ವಿಂಗಡಣೆಯಾಗಿದ್ದ ದೇಶವನ್ನು ಪಟೇಲ್ ಒಂದುಗೂಡಿಸಿದ್ದರು ಎಂದು ಹೇಳಿದರು.
ದೇಶ ಇಂದು ತನ್ನದೇ ಇತಿಹಾಸವನ್ನು ರಚಿಸಿದೆ. ದೇಶದ ಶ್ರೇಷ್ಠ ವ್ಯಕ್ತಿಗೆ ಸರಿಯಾದ ಗೌರವ ಸಿಕ್ಕಿದೆ. ಪಟೇಲ್ ಪ್ರತಿಮೆ ಅನಾವರಣಗೊಳಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.
‘ಸರ್ದಾರ್ ವಲ್ಲಭಬಾಯ್ ಪಟೇಲ್ ಅಮರ ರಹೇ .. ದೇಶದ ಏಕತೆಗೆ ಜಿಂದಾಬಾದ್ ‘.. ಎಂದು ಈ ಸಂರ್ಭದಲ್ಲಿ ಘೋಷಣೆ ಕೂಗಿದ ಪ್ರಧಾನಿ ಮೋದಿ ” ಸರ್ದಾರ್ ಪಟೇಲ್ ಪ್ರಯತ್ನದಿಂದ ದೇಶ ಒಂದಾಯಿತು. ದೇಶದಲ್ಲಿ ಆವಾಗಲೂ ನಿರಾಶವಾದಿಗಳು ಇದ್ದರು. ಆದ್ರೆ ಪಟೇಲ್ ಅವರಲ್ಲೊಬ್ಬ ಅಶಾವಾದಿಯಾಗಿದ್ದರು. ಇಂಥ ಲೋಹ ಪುರುಷನಿಗೆ ನೂರೊಂದು ನಮನ ಸಲ್ಲಿಸುತ್ತೇನೆ ಎಂದರು.
ಏಕತಾ ಪ್ರತಿಮೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸಾಮರ್ಥ್ಯ ಮತ್ತು ತ್ಯಾಗದ ಸಂಕೇತವಾಗಿದೆ . ಒಂದು ಭಾರತ ಶ್ರೇಷ್ಠ ಭಾರತದ ಸಂಕೇತವಾಗಿದೆ. ರೈತರ ಸ್ವಾಭಿಮಾನದ ಪ್ರತೀಕವಾಗಿದೆ. ಪ್ರತಿಮೆಯ ಸುತ್ತಮುತ್ತ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.
182 ಮೀಟರ್ ಎತ್ತರದ ‘ಏಕತೆಯ ಪ್ರತಿಮೆ’ ಅನಾವರಣ:
ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯ್ ಪಟೇಲ್ರ ಈ ಬೃಹತ್ ಪ್ರತಿಮೆಯು 182 ಮೀಟರ್ (ಸುಮಾರು 597 ಅಡಿ) ಎತ್ತರವಿರುವುದು ಹಾಗೂ ಅದನ್ನು ದಕ್ಷಿಣ ಗುಜರಾತ್ನಲ್ಲಿ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರಿನಲ್ಲಿ ನಿರ್ಮಿಸಲಾಗಿದೆ
ಪಟೇಲ್ ಅವರ ಜನ್ಮದಿನವಾದ ಅಂಗವಾಗಿ ದೇಶಾದ್ಯಂತ ಏಕತೆಯ ಓಟ ನಡೆಯುತ್ತಿದ್ದರೆ, ಗುಜರಾತ್ ನ ನರ್ಮದಾ ನದಿ ತಟದ ಲ್ಲಿ ಪಟೇಲ್ ಅವರ ಪ್ರತಿಮೆಯ ಲೋಕಾರ್ಪಣೆಯ ಸಂಭ್ರಮ. 182 ಮೀಟರ್ ಎತ್ತರದ ವಲ್ಲಭಭಾಯ್ ಪಟೇಲ್ ಅವರ ‘ಏಕತೆಯ ಪ್ರತಿಮೆ’ ಅನಾವರಣಗೊಂಡಿದೆ.
ಭಾರತದ ಐರನ್ ಮ್ಯಾನ್ ಎಂದೇ ಖ್ಯಾತರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ :
ಗುಜರಾತಿನ ಕರಮ್ ಸಂದ್ ನಲ್ಲಿ 1875ರ ಅಕ್ಟೋಬರ್ 31ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಕಾನೂನು ಪದವಿ ಪಡೆದಿದ್ದರೂ ಗಾಂಧೀಜಿ ಅವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧುಮುಕಿ ಸ್ವತಂತ್ರ ಭಾರತಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು.
ಸ್ವಾತಂತ್ಯ ಸಿಕ್ಕ ನಂತರ ರಾಜ್ಯಗಳ ಪುನರ್ ವಿಂಗಡನೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಸುಮಾರು 500ಕ್ಕೂ ಅಧಿಕ ರಾಜಮನೆತನ ಅಡಿಯಲ್ಲಿದ್ದ ರಾಜ್ಯಗಳನ್ನು ನೆಹರೂ ಸರ್ಕಾರದ ಸುಪರ್ದಿಗೆ ತಂದರು. ಇದಲ್ಲದೆ ಗುಜರಾತಿನ ಖೇದ, ಬೊರ್ಸದ್, ಬಾರ್ಡೋಲಿಗಳಲ್ಲಿ ರೈತರ ಪರ ಹೋರಾಟದಲ್ಲೂ ಪಟೇಲ್ ಅವರು ಪಾಲ್ಗೊಂಡಿದ್ದರು.
ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು..?
ಸ್ವತಂತ್ರ ಭಾರತದ ಪ್ರಪ್ರಥಮ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ನೆನಪಿಗಾಗಿ ‘ಏಕತೆಯ ಪ್ರತಿಮೆ'(statue of unity) ಯನ್ನು ನಿರ್ಮಿಸುವ ಗುತ್ತಿಗೆ ಪಡೆದಿದ್ದು ಲಾರ್ಸನ್ ಅಂಡ್ ಟರ್ಬೋ (ಎಲ್ ಅಂಡ್ ಟಿ) ಕಂಪೆನಿ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು ಎಂಬುದು ಹೆಚ್ಚು ಪ್ರಚಲಿತವಾಗಿಲ್ಲ. ವಿಶ್ವದ ಅತಿ ಎತ್ತರದ ಪ್ರತಿಮೆ ನಿರ್ಮಿಸಿರುವ ಶಿಲ್ಪಿ ರಾಮ್ ವಾನ್ಜಿ ಸುತಾರ್.
ರಾಮ್ ವಾನ್ಜಿ ಸುತಾರ್ ಅವರ ಹಿನ್ನಲೆ :
ಮಹಾರಾಷ್ಟ್ರದ ಧೂಳಿಯಾ ಜಿಲ್ಲೆಯ ಗೊಂಡುರ್ ನಲ್ಲಿ 19 ಫೆಬ್ರವರಿ 1925ರಂದು ಸುತಾರ್ ಜನಿಸಿದರು. 1952ರಲ್ಲಿ ಪ್ರಮೀಳಾ ಅವರನ್ನು ವರಿಸಿದರು. ದಂಪತಿಯ ಪುತ್ರ ಅನಿಲ್ ಕೂಡಾ ಶಿಲ್ಪಿಯಾಗಿದ್ದಾರೆ. 1999ರಲ್ಲಿ ಪದ್ಮಶ್ರೀ, 2016ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. 2018ರ ಅಕ್ಟೋಬರ್ ನಲ್ಲಿ ಟಾಗೋರ್ ಪ್ರಶಸ್ತಿ ಸಿಕ್ಕಿದೆ.
Comments are closed.