ರಾಷ್ಟ್ರೀಯ

ವಿಶ್ವದ ಅತೀ ಎತ್ತರದ ಪ್ರತಿಮೆ ಅನಾವರಣಕ್ಕೆ ಸಾಕ್ಷಿಯಾಗುತ್ತಿರುವುದು ನನ್ನ ಸೌಭಾಗ್ಯ ಎಂದ ಪ್ರಧಾನಿ ಮೋದಿ

Pinterest LinkedIn Tumblr

ಅಹಮದಾಬಾದ್: ಇಡೀ ವಿಶ್ವಕ್ಕೇ ಏಕೀಕರಣದ ಶಕ್ತಿ ಸಾರಿದ ಸರ್ದಾರ್ ಪಟೇಲರ ವಿಶ್ವದ ಅತೀ ಎತ್ತರದ ಪ್ರತಿಮೆ ಅನಾವರಣಕ್ಕೆ ಸಾಕ್ಷಿಯಾಗುತ್ತಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಗುಜರಾತ್ ನ ಕೆವಾಡಿಯಾದ ನರ್ಮದಾ ತಟದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಬಳಿಕ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಇದು ಜಗತ್ತಿನ ಅತಿ ಎತ್ತರದ ಪ್ರತಿಮೆ. ಇಡೀ ವಿಶ್ವಕ್ಕೆ ಮತ್ತು ನಮ್ಮ ಭವಿಷ್ಯದ ಜನಾಂಗಕ್ಕೆ ಸರ್ದಾರ್ ಪಟೇಲರ ಸಾಧನೆ ಸಾರಿ ಹೇಳುತ್ತೆ ಈ ಪ್ರತಿಮೆ. ದೇಶದ ಏಕತೆಯನ್ನು ಶಂಕಿಸುವವರಿಗೆ ಇದು ಉತ್ತರ ನೀಡುತ್ತದೆ ಎಂದು ಹೇಳಿದರು.

ಸರ್ದಾರ್ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆ ಲೋಕಾರ್ಪಣೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅಮರ್ ರಹೇ ಎಂಬ ಘೋಷಣೆ ಕೂಗಿದರು. ದೇಶದ ‘ಏಕತೆಗೆ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ಈ ಐತಿಹಾಸಿಕ ಕ್ಷಣಕ್ಕೆ ದೇಶದ ಜನತೆಗೆ ಮೋದಿ ಅಭಿನಂದನೆ ಸಲ್ಲಿಸಿದರು.

‘ಏಕತಾ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ಐತಿಹಾಸಿಕ ದಿನ. ಈ ದಿನವನ್ನು ಇತಿಹಾಸದಿಂದ ಅಳಿಸಲು ಎಂದಿಗೂ ಸಾಧ್ಯವಿಲ್ಲ. ಯಾವ ಭಾರತೀಯನೂ ಈ ಪುಣ್ಯದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಕೌಟಿಲ್ಯರ ಚಾಣಾಕ್ಯತೆ ಮತ್ತು ಶಿವಾಜಿಯ ಶೌರ್ಯಗಳ ಸಮ್ಮಿಲನ ಪಟೇಲರು. ಭಾರತದ ಏಕತೆಗಾಗಿ ಸರ್ದಾರ್ ಪಟೇಲರು ನಿರಂತರ ಶ್ರಮಿಸಿದ್ದಾರೆ. ಸಾಧಾರಣ ರೈತನ ಮಗ ಪಟೇಲರ ಸಾಧನೆ ಕಡಿಮೆ ಇಲ್ಲ. 500ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ ಭಾರತ ಹಂಚಿ ಹೋಗಿತ್ತು. ಭಾರತ ಮಾತೆಯನ್ನು ತುಂಡು ತುಂಡು ಮಾಡುವ ಕಾರ್ಯವನ್ನು ಅವರು ವಿಫಲಗೊಳಿಸಿದ್ದರು. ಭಾರತ ಇಬ್ಭಾಗವಾಗದಂತೆ ಪಟೇಲರು ಎಚ್ಚರ ವಹಿಸಿದ್ದರು ಇಂತಹ ಲೋಹ ಪುರುಷ ಸರ್ದಾರ್ ಪಟೇಲರಿಗೆ ನನ್ನ ನಮನಗಳು’ ಎಂದು ಮೋದಿ ಹೇಳಿದರು.

ಸರ್ದಾರ್ ಪಟೇಲರ ಸಂಕಲ್ಪವಿಲ್ಲದೇ ಇದ್ದಲ್ಲಿ ನಾಗರಿಕ ಸೇವೆಗಳನ್ನು ಆರಂಭಿಸಲು ಕಷ್ಟಸಾಧ್ಯವಾಗುತ್ತಿತ್ತು. ನಾವು ಅಹಮದಾಬಾದ್‌ನಲ್ಲಿ ಅಭಿಯಾನ ಶುರು ಮಾಡಿದ ದಿನಗಳು ನೆನಪಾಗುತ್ತಿವೆ. ದೇಶದ ಲಕ್ಷಾಂತರ ಹಳ್ಳಿಗಳಿಂದ ಕೋಟ್ಯಂತರ ರೈತರು ಬೇಸಾಯದ ಉಪಕರಣಗಳ ಕಬ್ಬಿಣದ ತುಂಡುಗಳನ್ನು, ಕಬ್ಬಿಣದ ಕೃಷಿ ಉಪಕರಣಗಳನ್ನು ಕೊಟ್ಟರು. ಈ ಪ್ರತಿಮೆ ನಿಜವಾದ ಅರ್ಥದಲ್ಲಿ ದೇಶವನ್ನು ಬೆಸೆಯುವ ಪ್ರತಿಮೆಯಾಗಿದೆ. ಇದೀಗ ದೇಶದ ಜನರ ಕನಸು ಸಾಕಾರವಾಗಿದ್ದು, ಇದಕ್ಕಾಗಿ ವಿಶ್ವದೆಲ್ಲೆಡೆ ಇರುವ ದೇಶಪ್ರೇಮಿಗಳನ್ನು ನಾನು ಅಭಿನಂದಿಸುತ್ತೇನೆ. ಸರ್ದಾರ್ ಪಟೇಲರ ನೆನಪಿನಲ್ಲಿ ರಾಷ್ಟ್ರೀಯ ಏಕತಾ ದಿವಸ ಆಚರಿಸಲಾಗುತ್ತಿದೆ. ದೇಶದ ವಿವಿಧೆಡೆ ಭಾರತದ ಏಕತೆಯ ಘೋಷಣೆಗಳು ಮೊಳಗುತ್ತಿವೆ. ಭಾರತದ ಬಗ್ಗೆ ನಮಗಿರುವ ಭಾವನೆಗೆ ಸಾವಿರಾರು ವರ್ಷಗಳ ಆಧಾರವಿದೆ. ಭಾರತದ ಇತಿಹಾಸದಲ್ಲಿ ಈ ದಿನ ಅತ್ಯಂತ ಮಹತ್ವದ್ದು ಎಂದು ದಾಖಲಾಗುತ್ತದೆ ಎಂದು ಹೇಳಿದರು.

‘ಭಾರತದ ಏಳ್ಗೆಗಾಗಿ ಸಮರ್ಪಿಸಿಕೊಂಡ ವಿರಾಟ ವ್ಯಕ್ತಿತ್ವಕ್ಕೆ ನಾವು ನಮಿಸುತ್ತಿದ್ದೇವೆ. ಇದಕ್ಕಾಗಿ ನಾವು ಇಷ್ಟು ವರ್ಷ ನಿರೀಕ್ಷಿಸಬೇಕಾಗಿದ್ದು ವಿಪರ್ಯಾಸ. ಇದು ನಮ್ಮ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದ್ದು, ಭೂಮಿಯಿಂದ ಬಾನಿನವವರೆಗೆ ವ್ಯಾಪಿಸಿ ನಿಂತಿರುವ ಸರ್ದಾರ್ ಸಾಹೇಬರಿಗೆ ಅಭಿಷೇಕ ನಡೆಯುತ್ತಿದೆ. ದೇಶದ ಭವಿಷ್ಯಕ್ಕೆ ಗಗನಚುಂಬಿ ಆಧಾರ ನಮಗೆ ಸಿಕ್ಕಿದೆ. ಸರ್ದಾರ್ ಪಟೇಲರ ಇಂಥ ವಿಶಾಲ ಪ್ರತಿಮೆಯನ್ನು ದೇಶಕ್ಕೆ ಸಮರ್ಪಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಾನು ಈ ಕಲ್ಪನೆ ಮಾಡಿದ್ದೆ. ನಾನು ಪ್ರಧಾನಿಯಾಗಿ ಈ ಪುಣ್ಯ ಕೆಲಸ ಮಾಡುವ ಅವಕಾಶ ಸಿಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ. ಸರ್ದಾರರ ಆಶೀರ್ವಾದ, ದೇಶದ ಕೋಟಿಕೋಟಿ ಜನರ ಆಶೀರ್ವಾದದಿಂದ ಧನ್ಯನಾಗಿದ್ದೇನೆ ಎಂದು ಮೋದಿ ಹೇಳಿದರು.

ಅಂತೆಯೇ ‘ಗುಜರಾತ್‌ನ ಜನರು ಕೊಟ್ಟಿರುವ ಅಭಿನಂದನೆ ಪತ್ರಕ್ಕಾಗಿಯೂ ಗುಜರಾತ್‌ನ ಜನರಿಗೆ ನಾನು ಅಭಾರಿ. ತಾಯಿ ಮಗುವಿನ ಮೈದಡವಿದಾಗ ಮಗುವಿಗೆ ಹೊಸ ಉತ್ಸಾಹ ಸಿಗುತ್ತದೆ. ನೀವು ಕೊಟ್ಟ ಈ ಅಭಿನಂದನಾ ಪತ್ರದಿಂದ ನನ್ನಲ್ಲಿ ಇಂಥ ಅನುಭೂತಿ ಮೂಡುತ್ತಿದೆ. ಮತ್ತಷ್ಟು ಉತ್ತಮ ಕೆಲಸ ಮಾಡಬೇಕು ಎಂಬ ಹೊಸ ಉತ್ಸಾಹ ಮೂಡಿದೆ. ದೇಶದ ಭವಿಷ್ಯದ ಬಗ್ಗೆ ಘೋರ ನಿರಾಶೆ ಆವರಿಸಿದ್ದಾಗ, ದೇಶದ ಭೂಮಿ ನೂರಾರು ಹೋಳುಗಳಾಗಿ ತುಂಡುಗಳಾಗಿದ್ದಾಗ, ದೇಶದ ವೈವಿಧ್ಯತೆಯನ್ನೇ ಈ ದೇಶದ ಶಕ್ತಿ ಎಂದು ಸರ್ದಾರ್ ವಲ್ಲಭಬಾಯ್ ಪಟೇಲ್ ಸಾರಿ ಹೇಳಿದರು. ಪಟೇಲರ ಬಳಿ ಕೌಟಿಲ್ಯನ ಕುಟಿಲ ನೀತಿ, ಶಿವಾಜಿ ಮಹಾರಾಜರ ಕ್ಷಾತ್ರ ಬೆಸೆದುಕೊಂಡಿತ್ತು. ವಿದೇಶಿ ಆಕ್ರಮಣಕ್ಕಿಂತಲೂ ನಮ್ಮ ಒಳಜಗಳೇ ನಮಗೆ ದೊಡ್ಡ ಶತ್ರು ಎಂದು ಸರ್ದಾರ್ ಪಟೇಲರು ಸಾರಿ ಹೇಳಿದ್ದರು. ಏಕೀಕರಣದ ಶಕ್ತಿಯನ್ನು ಅವರು ಅರ್ಥ ಮಾಡಿಕೊಂಡಿದ್ದರು. ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ದೇಶದ ರಾಜರು ತಮ್ಮ ಸಂಸ್ಥಾನಗಳನ್ನು ಒಪ್ಪಿಸಿದರು.

ಇದೇ ಸ್ಥಳದಲ್ಲಿ ತಮ್ಮ ಸಂಸ್ಥಾನಗಳನ್ನು ದೇಶಕ್ಕೆ ಒಪ್ಪಿಸಿದ ರಾಜ–ಮಹಾರಾಜರ ತ್ಯಾಗ ಬಿಂಬಿಸುವ ಮ್ಯೂಸಿಯಂ ನಿರ್ಮಿಸುವ ಆಸೆ ನನಗೆ ಇದೆ. ಸರ್ಕಾರ ಆಡಳಿತ ಹೇಗೆ ನಡೆಸಬೇಕು ಎನ್ನುವುದನ್ನು ಸರ್ದಾರ್ ಪಟೇಲರು ಮಾಡಿ ತೋರಿಸಿದರು. ಸರ್ದಾರ್ ಪಟೇಲರ ಸಂಕಲ್ಪ ಇರದಿದ್ದರೆ ಕಾಶ್ಮೀರ–ಕನ್ಯಾಕುಮಾರಿ ರೈಲಿನ ಬಗ್ಗೆ ನಾವು ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ದೇಶದ ನಾಗರೀಕ ಸೇವಾ ಪರೀಕ್ಷೆಗಳ ಯೋಚಿಸಲೂ ಆಗುತ್ತಿರಲಿಲ್ಲ ಎಂದು ಮೋದಿ ಹೇಳಿದರು.

Comments are closed.