ಮಂಗಳೂರು : ಲೈಸನ್ಸ್ ಪಡೆಯದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಅಧೀಕ್ಷಕಿಯಾದ ಡಾ.ರಾಜೇಶ್ವರಿಯವರ ನಡೆಯು ತೀವ್ರ ಸಂಶಯಕ್ಕೆಡೆ ಮಾಡಿದ್ದು,ಇದನ್ನು ಸಮಗ್ರ ತನಿಖೆಗೊಳಪಡಿಸಬೇಕೆಂದು CITU ಮಂಗಳೂರು ನಗರ ಸಮಿತಿಯು ಒತ್ತಾಯಿಸಿದ್ದು, ನಾಳೆ ತಾ.3-11-2018ರಂದು ಬೆಳಿಗ್ಗೆ 10ಕ್ಕೆ ನಗರದ ಮಿನಿ ವಿಧಾನಸೌಧದೆದುರು ಪ್ರತಿಭಟನಾ ಪ್ರದರ್ಶನ ಜರುಗಲಿದೆ ಎಂದು CITU ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ನೆಲೆಯಲ್ಲಿ ದುಡಿಯುತ್ತಿರುವ ಡಿ ಗ್ರೂಫ್ ಪೇಷೆಂಟ್ ಕ್ಯಾರ್ ನೌಕರರು ಸಾಯಿ ಸೆಕ್ಯುರಿಟಿ ಸಂಸ್ಥೆಯ ಮೂಲಕ ಗುತ್ತಿಗೆ ನೌಕರರಾಗಿದ್ದು,ಇಲ್ಲಿಯವರೆಗೆ ಸವಲತ್ತುಗಳನ್ನು ನೀಡದೆ ನೌಕರರನ್ನು ಗುಲಾಮರಂತೆ ದುಡಿಸಿಕೊಳ್ಳುತ್ತಿದೆ.ಇದಕ್ಕೆ ಕುಮ್ಮಕ್ಕು ನೀಡುವಂತೆ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ.ರಾಜೇಶ್ವರಿಯವರು ನೌಕರರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು,ಸಾಯಿ ಸೆಕ್ಯುರಿಟಿ ಸಂಸ್ಥೆಯೊಂದಿಗೆ ಸೇರಿಕೊಂಡು ಕುತಂತ್ರಗಳನ್ನು ಹೆಣೆಯುತ್ತಿದ್ದಾರೆ.
ನೂರಾರು ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಸಾಯಿ ಸೆಕ್ಯುರಿಟಿ ಸಂಸ್ಥೆಯು ಲೈಸನ್ಸ್ ಪಡೆಯದೆ ಕಳೆದ 6-7 ವರ್ಷಗಳಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಪಡೆದುಕೊಂಡಿರುವುದು ಹಲವಾರು ಸಂಶಯಕ್ಕೆಡೆ ಮಾಡಿದೆ.
ಮೇಲಾಧಿಕಾರಿಗಳಿಂದ ತೀವ್ರ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಕಳೆದ 8 ತಿಂಗಳ ಹಿಂದೆ ಲೈಸನ್ಸ್ ಪಡೆಯಲಾಗಿದೆ.ಒಟ್ಟಿನಲ್ಲಿಜಿಲ್ಲಾ ಅಧೀಕ್ಷಕರು ಹಾಗೂ ಸಾಯಿ ಸೆಕ್ಯುರಿಟಿ ಸಂಸ್ಥೆಯ ಮಧ್ಯೆ ಭಾರೀ ಅವ್ಯವಹಾರಗಳಿದ್ದು,ಅದನ್ನು ಕೂಡಲೇ ಸಮಗ್ರ ತನಿಖೆಗೊಳಪಡಿಸ ಬೇಕಾಗಿದೆ.
ಬಡವರ ಹಾಗೂ ಹಿಂದುಳಿದ ವರ್ಗದವರ ಆಶಾಕಿರಣವಾದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಲೆಬಾಳುವ ಔಷಧಿಗಳು ಹೊರಗಡೆ ರವಾನೆಯಾಗುತ್ತಿರುವುದು,ಅಲ್ಲಿನ ಆಹಾರ ಪದಾರ್ಥ ಸಾಮಾಗ್ರಿಗಳು ಮಾರಾಟವಾಗುತ್ತಿರುವುದು,ಶವಾಗಾರದ ಅವ್ಯವಸ್ಥೆ,ಆರೋಗ್ಯ ಕಾರ್ಡ್ ಹೆಸರಿನಲ್ಲಿ ಭಾರೀ ಗೋಲ್ ಮಾಲ್ ಸೇರಿದಂತೆ ಹಲವಾರು ಅವ್ಯವಸ್ಥೆಗಳು ಕಂಡು ಬಂದಿದ್ದು,ಅವುಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕೆಂದು CITU ಒತ್ತಾಯಿಸಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 3 ರಂದು ಬೆಳಿಗ್ಗೆ 10ಕ್ಕೆ ಮಿನಿ ವಿಧಾನಸೌಧದೆದುರು ನಡೆಯುವ ಪ್ರತಿಭಟನೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಅಧಿಕಾರಿಗಳಿಂದ ಅನ್ಯಾಯಕ್ಕೊಳಗಾಗಿರುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು CITU ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Comments are closed.