m
ಶಿವಮೊಗ್ಗ: ‘ನನ್ನ ವಿರುದ್ಧ ನಡೆದ ಪಿತೂರಿಯಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಯಾವ ಪಾತ್ರವೂ ಇಲ್ಲ ಎಂದು ಸಿಗಂದೂರು ಚೌಡೇಶ್ವರಿ ದೇವಿಯ ಮುಂದೆ ಪ್ರಮಾಣ ಮಾಡಲಿ. ಹಾಗೇ, ಅವರಿಗೆ ಬೇರೆ ಮಹಿಳೆಯರ ಜೊತೆಗೆ ಅಕ್ರಮ ಸಂಬಂಧವಿಲ್ಲ ಎಂದು ತಮ್ಮ ಹೆಂಡತಿಯ ಎದುರು ಪ್ರಮಾಣ ಮಾಡಲಿ’ ಎಂದು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಸವಾಲು ಹಾಕಿದ್ದಾರೆ.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಹಾಲಪ್ಪ, ಗೋಪಾಲಕೃಷ್ಣ ಅವರು ಸಿಗಂದೂರಿಗೆ ಬಂದು ದೇವರ ಮುಂದೆ ಪ್ರಮಾಣ ಮಾಡಲಿ. ಸಿಗಂದೂರು ದೇವರ ಮುಂದೆ ಒಂದು ಪಟ್ಟಿ ಕೊಡುತ್ತೇನೆ. ಆ ಪಟ್ಟಿಯಲ್ಲಿರುವ ಮಹಿಳೆಯರ ಜೊತೆ ಗೋಪಾಲಕೃಷ್ಣ ಅವರಿಗೆ ಸಂಬಂಧವಿಲ್ಲ ಎಂದು ಪ್ರಮಾಣ ಮಾಡಲಿ. ನಾನು ಪತ್ನಿ ಜೊತೆ ಬಂದು ಪ್ರಮಾಣ ಮಾಡುತ್ತೇನೆ. ಅವರು ಅವರ ಹೆಂಡತಿ ಜೊತೆ ಬಂದು ಪ್ರಮಾಣ ಮಾಡಲಿ. ಮಧು ಬಂಗಾರಪ್ಪನವರನ್ನು ಬೇಕಾದರೂ ಕರೆದುಕೊಂಡು ಬರಲಿ ಎಂದು ಸವಾಲು ಹಾಕಿದ್ದಾರೆ.
ದೇವರ ಮುಂದೆ ಸತ್ಯ ಹೇಳುವ ನೈತಿಕತೆ ಇದ್ದರೆ ಪ್ರಮಾಣ ಮಾಡಲಿ. ನಾನು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ದೇವಸ್ಥಾನದಲ್ಲಿ ಪಟ್ಟಿ ಕೊಡುತ್ತೇನೆ. ನನ್ನ ಪ್ರಕರಣದಲ್ಲಿ ಅವರು ಸಂಚು ಮಾಡಿಲ್ಲ ಎಂದು ಪ್ರಮಾಣ ಮಾಡಲಿ. ಆ ಪಟ್ಟಿಯಲ್ಲಿರುವ ಮಹಿಳೆಯರ ಜೊತೆ ಸಂಬಂಧವಿಲ್ಲ ಎಂದು ಹೇಳಲಿ ಎಂದು ಸಾರ್ವಜನಿಕವಾಗಿ ಸವಾಲೆಸೆದಿದ್ದಾರೆ.
ಮಾನಸಿಕ ಅಸ್ವಸ್ಥರ ಬಗ್ಗೆ ನಾನು ಮಾತನಾಡುವುದಿಲ್ಲ:
ಹರತಾಳು ಹಾಲಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬೇಳೂರು ಗೋಪಾಲಕೃಷ್ಣ, ನಾನು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಹಾಲಪ್ಪನವರ ವಿಷಯದಲ್ಲಿ ನನ್ನ ಯಾವ ಪಾತ್ರವೂ ಇಲ್ಲ. ಮೊದಲೂ ಇದೇ ಮಾತನ್ನು ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತಿದ್ದೇನೆ. ಮಾನಸಿಕವಾಗಿ ಅಸ್ವಸ್ಥನಾಗಿರುವ ಹಾಲಪ್ಪನವರ ಹುಚ್ಚು ಹೇಳಿಕೆ ನಾನು ಉತ್ತರ ನೀಡುವುದಿಲ್ಲ. ಅವರದು ಕಾಮಾಲೆ ಕಣ್ಣು. ಹಾಗಾಗಿ, ಎಲ್ಲರೂ ಒಂದೇ ರೀತಿ ಕಾಣುತ್ತಾರೆ. ಮಹಿಳೆಯರ ಜೊತೆಗಿನ ಸಂಬಂಧದ ಬಗ್ಗೆ ನಾನು ಪ್ರತಿಕ್ರಿಯೆ ನೀಡಿದರೆ ಬಾಲಿಶ ಎನಿಸಿಕೊಳ್ಳುತ್ತದೆ ಎಂದಿದ್ದಾರೆ.
ಹಾಲಪ್ಪನವರ ಬಗ್ಗೆ ಮಾತನಾಡೋದು ಕೂಡ ಅಸಹ್ಯ. ಅವರ ಹೆಂಡತಿಯನ್ನು ಕರೆದುಕೊಂಡು ಎಲ್ಲಿ ಬೇಕಾದರೂ ಪ್ರಮಾಣ ಮಾಡಲಿ. ನನಗೂ ಅದಕ್ಕೂ ಸಂಬಂಧ ಇಲ್ಲ. ಸಿಗಂದೂರಿನ ಮೇಲೆ ನನಗೆ ನಂಬಿಕೆಯಿದೆ. ಅಲ್ಲಿ ಅವರ ವಿರುದ್ಧ ಪಿತೂರಿ ಮಾಡಿಲ್ಲ ಎಂಬ ಬಗ್ಗೆ ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಪಷ್ಟನೆ ನೀಡಿದ್ದಾರೆ.
Comments are closed.