ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಸರಿಗಮಪ ಸೀಸನ್ 15′ ರಲ್ಲಿ ಕುರಿಗಾಹಿ ಅಂತಲೇ ಖ್ಯಾತಿ ಪಡೆದಿರುವ ಹನುಮಂತನಿಗೆ ವಾಹಿನಿ ಒಂದು ಸರ್ಪ್ರೈಸ್ ನೀಡಿದೆ. ಆದರೆ ಆ ಸರ್ಪ್ರೈಸ್ ನೋಡಿ ಹನುಮಂತ ವೇದಿಯ ಮೇಲೆಯೇ ಕಣ್ಣೀರು ಹಾಕಿದ್ದಾರೆ.
ಇದೇ ಭಾನುವಾರ ಖಾಸಗಿ ವಾಹಿನಿಯಲ್ಲಿ ‘ಜೀ ಕುಟುಂಬ ಅವಾರ್ಡ್ಸ್ ‘ಕಾರ್ಯಕ್ರಮ ಪ್ರಸಾರವಾಗಿದೆ. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಿರುತೆರೆಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದಿರುವ ನಟ-ನಟಿ ಸೇರಿದಂತೆ ಕಲಾವಿದರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿತ್ತು.
ಇದೇ ಕಾರ್ಯಕ್ರಮದಲ್ಲಿ ಜನತೆ ಮೆಚ್ಚಿದೆ ಅಚ್ಚುಮೆಚ್ಚಿನ ಸ್ಪರ್ಧಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ 5 ಮಂದಿ ನಾಮಿನೇಟ್ ಆಗಿದ್ದರು. ಆದರೆ ಕೊನೆಯಲ್ಲಿ ಸರಿಗಮಪ ಸೀಸನ್ 5ರ ಸ್ಪರ್ಧಿ ಹನುಮಂತನಿಗೆ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಹನುಮಂತ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಹನುಮಂತ್ ತಮ್ಮ ತಂದೆ-ತಾಯಿ ಇಬ್ಬರನ್ನು ಬಿಟ್ಟು ಬೆಂಗಳೂರಿಗೆ ಬಂದು 20 ದಿನಗಳಾಗಿತ್ತು.
ಈ ಹಿಂದೆ ಸರಿಗಮಪ ವೇದಿಕೆಯಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದರು. ಆದ್ದರಿಂದ ಪ್ರಶಸ್ತಿಯ ಜೊತೆ ಅವರ ತಾಯಿ ಶೀಲವ್ವ ಅವರನ್ನು ಕರೆಸಲಾಗಿತ್ತು. ಆಗ ವೇದಿಕೆಯ ಮೇಲೆ ತಾಯಿಯನ್ನು ನೋಡಿ ಒಂದು ಕ್ಷಣ ಹನುಮಂತ ಮೂಕರಾಗಿ ನಿಂತು ಕಣ್ಣೀರು ಹಾಕಿದ್ದಾರೆ. ಬಳಿಕ ಹನುಮಂತನ ಆಸೆಯಂತೆ ತಮ್ಮ ಮನೆಯಿಂದ ಜೋಳದ ರೊಟ್ಟಿ ತಂದು ತಾಯಿ ಕೈಯಿಂದ ವೇದಿಕೆಯ ಮೇಲೆಯೇ ತಿನ್ನಿಸಿದ್ದಾರೆ.
ಹನುಮಂತ ಜೊತೆಗೆ ವೇದಿಕೆ ಮೇಲಿದ್ದ ನಿರೂಪಕರು ಕೂಡ ಸೇರಿ ಕುಳಿತು ಅವರ ಕೈಯಿಂದ ಕೈತ್ತುತ್ತು ತಿಂದಿದ್ದಾರೆ. ಹನುಮಂತ ಯಾವುದೇ ಸಂಗೀತ ತರಬೇತಿಗೂ ಹೋಗದೆ, ಕುರಿ ಕಾಯುತ್ತಾ, ಫೋನಿನಲ್ಲಿ ಹಾಡು ಕೇಳುತ್ತಾ ಬೆಳೆದಿದ್ದರು. ಇಂದು ಸರಿಗಮಪ ಕಾರ್ಯಕ್ರಮದ ಮೂಲಕ ಜನತೆಯ ಮೆಚ್ಚುಗೆಯನ್ನು ಪಡೆದು ಕುರಿಗಾಯಿ ಹನುಮಂತ ಎಂದು ಖ್ಯಾತಿ ಪಡೆದಿದ್ದಾರೆ.
Comments are closed.