ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಬಿಸಿ, ಬಿಸಿ ಚರ್ಚೆ ನಡೆಯುತ್ತಿರುವ ನಡುವೆಯೇ ಇದೀಗ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ಆರ್ ಅಶೋಕ್ ತಿಳಿಸಿದ್ದಾರೆ.
ಸೋಮವಾರ ಮೈಸೂರಿನಲ್ಲಿ ಟಿಪ್ಪು ಜಯಂತಿ ಕುರಿತು ವಿರೋಧ ವ್ಯಕ್ತಪಡಿಸುವ ಬಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಹನುಮಗಿರಿ ತಪ್ಪಲಿನಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಮಾತನಾಡಿದರು.
ರಾಮ ಆದರ್ಶ ಪುರುಷ,ಆತನಿಗೆ ಇಡೀ ಭಾರತವೇ ಗೌರವ ನೀಡುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿಯೂ ರಾಮಮಂದಿರ ಮಾಡುವ ಬಗ್ಗೆ ನಮ್ಮದೊಂದು ತಂಡ ಚರ್ಚೆ ನಡೆಸುತ್ತಿದೆ. ಈ ಕುರಿತು ನಾನು ಚರ್ಚೆ ನಡೆಸಿ ಮುಂದಿನ ನಿರ್ಧಾರದ ಬಗ್ಗೆ ಹೇಳುತ್ತೇನೆ ಎಂದರು.
ಮಂದಿರ ಕಟ್ಟಲು ಭಾರತೀಯರೆಲ್ಲರೂ ಸಹಕಾರ ನೀಡುತ್ತಾರೆ. ಹೀಗಾಗಿ ಬೆಂಗಳೂರಿನಲ್ಲಿಯೂ ರಾಮಮಂದಿರ ಕಟ್ಟುವ ಬಗ್ಗೆ ನಮ್ಮ ತಂಡದೊಂದಿಗೆ ಚರ್ಚೆ ನಡೆಸುತ್ತೇನೆ. ಇದು ಹೇಗೆ, ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಂತರ ಮಂದಿರ ನಿರ್ಮಾಣದ ಬಗ್ಗೆ ಹೇಳುವುದಾಗಿ ಮಾಹಿತಿ ನೀಡಿದರು.
Comments are closed.