ಕುಂದಾಪುರ: ಕೇಂದ್ರ ಸರ್ಕಾರದ ವಿತ್ತ ಸಚಿವರು ಸೇರಿದಂತೆ ಸಂಪುಟ ಸದಸ್ಯರು ಹಾಗೂ ಪ್ರತಿಪಕ್ಷ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ 1 ಸಾವಿರ ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಸಿ 2 ವರ್ಷ ಕಳೆಯುತ್ತಿದ್ದರೂ, ಈ ನಿಷೇಧವನ್ನು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಯಾಕೆ ನೋಟು ನಿಷೇಧ ಮಾಡಬೇಕಾಯ್ತು ಎನ್ನುವ ಕಾಣದ ಸತ್ಯವನ್ನು ದೇಶದ ಜನರ ಮುಂದಿಡುತ್ತಿಲ್ಲ ಎಂದು ನ್ಯಾಯವಾದಿ ಸುಧೀರಕುಮಾರ ಮರೋಳಿ ಕೊಪ್ಪ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ನೋಟು ನಿಷೇಧ ಮಾಡಿ 2 ವರ್ಷ ಕಳೆದ ಹಿನ್ನೆಲೆಯಲ್ಲಿ ಶಾಸ್ತ್ರಿ ಸರ್ಕಲ್ನಲ್ಲಿ ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕರಾಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನೋಟು ನಿಷೇಧ ಮಾಡಿದ್ದರಿಂದ ದೇಶ ಇವತ್ತಿಗೂ ಸಂಕಷ್ಟದಲ್ಲಿದೆ. ಅವೈಜ್ಞಾನಿಕ ನಿಷೇಧದ ಪರಿಣಾಮದಿಂದಾಗಿ ಆರ್ಥಿಕ ಸಂಸ್ಥೆಗಳು, ವಾಣಿಜ್ಯೋದ್ಯಮಗಳು ಸೇರಿದಂತೆ ಎಲ್ಲ ಸ್ತರದ ವ್ಯಾಪಾರ- ವಹಿವಾಟುಗಳಿಗೆ ತೀವೃವಾದ ಹೊಡೆತ ಬಿದ್ದಿದೆ. ನೋಟು ನಿಷೇಧದ ವ್ಯತಿರಿಕ್ತ ಪರಿಣಾಮಗಳಿಂದಾಗಿ ದೇಶದ ಅಭಿವೃದ್ಧಿ 20 ವರ್ಷ ಹಿಂದಕ್ಕೆ ಹೋಗಿದೆ ಎಂದು ಅವರು ವಿಶ್ಲೇಷಣೆ ಮಾಡಿದರು.
ದೇಶದ ಆರ್ಥಿಕ ವ್ಯವಸ್ಥೆಗೆ ಬ್ಯಾಂಕಿಂಗ್ ಕ್ಷೇತ್ರದ ಮೂಲಕ ಬಲ ತುಂಬಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮೋದಿ ಸರ್ಕಾರ ವಿಜಯ್ ಬ್ಯಾಂಕ್ ವಿಲೀನದ ಮೂಲಕ ಮಾಡಿರುವ ಅನ್ಯಾಯವನ್ನು ಇಲ್ಲಿನ ಜನ ಎಂದೂ ಕ್ಷಮಿಸೋದಿಲ್ಲ. ಕರಾವಳಿಯ ಹೆಮ್ಮೆಯ 2 ಜಿಲ್ಲೆಗಳ ಹಿರಿಕರು ಕಟ್ಟಿ ಬೆಳೆಸಿದ್ದ ಹಾಗೂ ಇಲ್ಲಿನ ಜನರ ಅಭಿಮಾನದ ಸಂಕೇತವಾಗಿದ್ದ ವಿಜಯ್ ಬ್ಯಾಂಕ್ ಲಾಭದ ಹಾದಿಯಲ್ಲಿ ಇದ್ದರೂ, ನಷ್ಟದ ದಾರಿಯಲ್ಲಿ ಸಾಗುತ್ತಿರುವ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿರುವ ಕೇಂದ್ರದ ಬಿಜೆಪಿ ಸರ್ಕಾರ ಎಂದಿಗೂ ಕ್ಷಮೆಗೂ ಅರ್ಹವಾಗಿಲ್ಲ ಎಂದು ಲೇವಡಿ ಮಾಡಿದರು.
ಮೊಂಬತ್ತಿ ಬೆಳಗಿಸಿದ ಕಾರ್ಯಕರ್ತರು ನೋಟು ನಿಷೇಧ ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಐಟಿ ಸೆಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತ, ಪುರಸಭಾ ಸದಸ್ಯರಾದ ದೇವಕಿ ಪಿ ಸಣ್ಣಯ್ಯ, ಶ್ರೀಧರ್ ಶೇರೆಗಾರ್, ಚಂದ್ರಶೇಖರ ಖಾರ್ವಿ, ಅಶ್ಫಾಕ್ ಕೋಡಿ, ಮುಖಂಡರಾದ ವಿಕಾಸ್ ಹೆಗ್ಡೆ, ಗಣೇಶ್ ಶೇರೆಗಾರ್, ರಾಮಕೃಷ್ಣ ಎ ಹೇರ್ಳೆ, ಹಾರುನ್ ಬಿ ಸಾಹೇಬ್, ರಮೇಶ್ ಶೆಟ್ಟಿ ವಕ್ವಾಡಿ, ಚಂದ್ರ ಎ ಅಮೀನ್, ಕೇಶವ್ ಭಟ್, ಪ್ರೇಮಲತಾ, ಜ್ಯೋತಿ, ರೇವತಿ ಶೆಟ್ಟಿ, ಆಶಾ ಕರ್ವಾಲ್ಲೊ, ಪ್ರಭಾಕರ ಕೋಡಿ, ಕಾಳಪ್ಪ ಪೂಜಾರಿ, ವಿಠಲ್ ಕಾಂಚನ್ ಇದ್ದರು.
Comments are closed.