ಕಲಬುರಗಿ: ಮುಖ್ಯಮಂತ್ರಿ ಆಗುವ ಆಸೆಯನ್ನು ನಾನು ಕೈ ಬಿಟ್ಟಿಲ್ಲ. ಹಾಗೇಂದ ಮಾತ್ರಕ್ಕೆ ಸರ್ಕಾರವನ್ನು ಉರುಳಿಸುವ ಕೆಲಸ ನಾವು ಕೈ ಹಾಕುವುದು ಇಲ್ಲ. ಮೈತ್ರಿ ಸರ್ಕಾರದ ನಾಯಕರು ಕಚ್ಚಾಡಿಕೊಂಡು ಸತ್ತರೆ, ಆ ಅವಕಾಶವನ್ನು ನಾನು ಬಿಡುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಾರಂಭಗಳಿಗೆ ಹೋದರೆ ಅಲ್ಲಿ ಭಾವಿ ಮುಖ್ಯಮಂತ್ರಿಗಳು ಎಂದು ನನ್ನನ್ನು ಕರೆಯಲಾಗುತ್ತಿದೆ. ಈ ರೀತಿ ಕರೆಯಬೇಡಿ ಎಂದು ಮನವಿ ಮಾಡಿದರು
ನಾವು ಸರ್ಕಾರ ಉರುಳಿಸುವ ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ಈಗಾಗಲೇ ಆಂತರಿಕವಾಗಿ ಕಚ್ಚಾಡಿಕೊಳ್ಳುತ್ತಿದ್ದಾರೆ. ಅವರು ಇದೇ ರೀತಿ ಕಚ್ಚಾಡಿ ಸರ್ಕಾರ ಉರುಳಿದರೆ, ನಾವು ಖಂಡಿತ ಸರ್ಕಾರ ರಚಿಸುತ್ತೇವೆ. ಆಗ ನಾನು ಸಿಎಂ ಆಗುತ್ತೇನೆ. ಸರ್ಕಾರ ಬೀಳುವವರೆಗೂ ನಾವು ವಿರೋಧ ಪಕ್ಷದಲ್ಲಿಯೇ ಇರುತ್ತೇವೆ. ವಿಪಕ್ಷ ನಾಯಕನಾಗಿ ಸಮರ್ಥವಾಗಿ ಅಧಿಕಾರವನ್ನು ನಿರ್ವಹಿಸುತ್ತೇವೆ ಎಂದರು.
ಉಪಚುನಾವಣೆ ಸೋಲಿಗೆ ಪ್ರತಿಕ್ರಿಯಿಸಿದ ಅವರು, ಸೋಲು-ಗೆಲುವಿನ ನೈತಿಕಹೊಣೆಯನ್ನು ನಾನೇ ಹೊರುತ್ತೇನೆ. ಸರ್ಕಾರದ ಎಲ್ಲ ಸಚಿವರು, ಶಾಸಕರು ಕ್ಷೇತ್ರಗಳಲ್ಲಿ ಉಳಿದುಕೊಂಡು ಹಣ ಹಂಚಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ನಮ್ಮಲ್ಲಿ ಒಂದಷ್ಟು ಸಂಘಟನೆಯ ಕೊರತೆಯಿಂದಾಗಿ ಈ ಸೋಲು ಅನುಭವಿಸಿದ್ದೇವೆ ಎಂದರು.
ಇನ್ನು ಈ ಉಪಚುನಾವಣೆ ಸೋಲಿನ ಕುರಿತು ಬೆಂಗಳೂರಿನಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು. ಮುಂದಿನ ಲೋಕಸಭಾ ಚುನಾವಣೆಯ ಮೇಲೆ ನಮ್ಮ ಗಮನವಿದ್ದು, ಈ ದೃಷ್ಟಿಯಿಂದ ಈಗಾಗಲೇ ರಾಜ್ಯ ಪ್ರವಾಸ ಆರಂಭಿಸಿದ್ದೇನೆ. ಈ ಬಾರಿ 22 ಸ್ಥಾನಗಳನ್ನು ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
Comments are closed.