ಮನೋರಂಜನೆ

ಅಘೋರಿಯಾದ ರಾಧಿಕಾ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಭಿನ್ನ ಪರಿಕಲ್ಪನೆಯುಳ್ಳ ‘ಭೈರಾದೇವಿ’ ಚಿತ್ರದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದು, ಕೆಲವೇ ದಿನಗಳ ಹಿಂದೆ ಅವರು ಕಾಳಿದೇವಿಯ ಅವತಾರದಲ್ಲಿರುವ ಒಂದು ಪೋಸ್ಟರ್ ಬಿಡುಗಡೆ ಆಗಿತ್ತು. ಈಗ ರಾಧಿಕಾ ಅಘೋರಿ ಗೆಟಪ್​ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಗಂಟುಗಂಟಾದ ಮಾರುದ್ದದ ಕೂದಲು, ಮೈತುಂಬ ವಿಭೂತಿ, ಕೈಯಲ್ಲಿ ತ್ರಿಶೂಲ ಮತ್ತು ಡಮರುಗ, ಕೊರಳಲ್ಲಿ ರುದ್ರಾಕ್ಷಿ ಮತ್ತು ತಲೆ ಬುರುಡೆಯ ಮಾಲೆ.. ಹೀಗೆ ಈ ಹೊಸ ಗೆಟಪ್​ನ ವಿಶೇಷಗಳು ಒಂದಲ್ಲ ಎರಡಲ್ಲ. ಅಚ್ಚರಿ ಎಂದರೆ ಇಡೀ ಸಿನಿಮಾದಲ್ಲಿ ರಾಧಿಕಾ ಹೀಗೆಯೇ ಕಾಣಿಸಿಕೊಳ್ಳಲಿದ್ದಾರಂತೆ.

ಇಂಥ ಗೆಟಪ್​ನಲ್ಲಿ ಚಿತ್ರೀಕರಣ ಮಾಡಬೇಕು ಎಂದರೆ ಮೇಕಪ್​ನ ಪಾತ್ರ ಮಹತ್ವದ್ದಾಗಿರುತ್ತದೆ. ಅಘೋರಿ ಅವತಾರ ತಾಳಲು ರಾಧಿಕಾಗೆ ಪ್ರತಿದಿನ ನಾಲ್ಕು ಗಂಟೆ ಮೇಕಪ್ ಮಾಡಬೇಕಿತ್ತಂತೆ. ‘ಸಾಮಾನ್ಯವಾಗಿ ಈ ರೀತಿಯ ಪಾತ್ರ ಮಾಡಲು ನಟಿಯರು ಹಿಂಜರಿಯುತ್ತಾರೆ. ಆದರೆ ರಾಧಿಕಾ ಅವರು ಕಥೆ ಕೇಳಿದಾಗ ಸಖತ್ ಖುಷಿಯಾದರು. ಅವರು ಕೂಡ ಇಂಥ ಪಾತ್ರಕ್ಕಾಗಿ ಕಾದಿದ್ದರು. ಹಾಗಾಗಿ ತಾವೇ ನಿರ್ವಣದ ಜವಾಬ್ದಾರಿ ವಹಿಸಿಕೊಂಡರು’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಶ್ರೀ ಜೈ. ಇನ್ನು, ಮೈನವಿರೇಳಿಸುವಂಥ ಒಂದು ಸಾಹಸ ದೃಶ್ಯದಲ್ಲೂ ರಾಧಿಕಾ ನಟಿಸಲಿದ್ದಾರಂತೆ. ಯಾವ ಮಾಸ್ ಹೀರೋಗೂ ಕಮ್ಮಿ ಇಲ್ಲದಂತೆ ಅವರು ಆಕ್ಷನ್ ಮೆರೆದಿದ್ದಾರೆ ಎನ್ನುತ್ತಾರೆ ನಿರ್ದೇಶಕರು. ಕನ್ನಡದ ಜತೆಗೆ ತಮಿಳು ಮತ್ತು ತೆಲುಗಿನಲ್ಲಿಯೂ ಏಕಕಾಲಕ್ಕೆ ಈ ಚಿತ್ರ ತಯಾರಾಗುತ್ತಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಹಾರರ್, ಸಸ್ಪೆನ್ಸ್ ಮತ್ತು ಫ್ಯಾಮಿಲಿ ಡ್ರಾಮಾ ಹೊಂದಿರುವ ‘ಭೈರಾದೇವಿ’ಯಲ್ಲಿ ರಾಧಿಕಾ ಜತೆ ರಮೇಶ್ ಅರವಿಂದ್, ರಂಗಾಯಣ ರಘು, ರವಿಶಂಕರ್, ಸುಚೇಂದ್ರ ಪ್ರಸಾದ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಈಗಾಗಲೇ ಕಾಶಿ, ವಾರಣಾಸಿ ಮುಂತಾದೆಡೆ ಶೇ. 80 ಭಾಗ ಚಿತ್ರೀಕರಣ ಮುಗಿದಿದ್ದು, ರಾಧಿಕಾ ಅವರ ಶಮಿಕಾ ಎಂಟರ್​ಪ್ರೖೆಸಸ್ ಬ್ಯಾನರ್​ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.

ರಾಧಿಕಾ ಅವರನ್ನು ಅಭಿಮಾನಿಗಳು ಈವರೆಗೂ ನೋಡಿರದಂಥ ಹೊಸ ಅವತಾರದಲ್ಲಿ ತೋರಿಸಲಿದ್ದೇವೆ. ಇಂಥ ಗೆಟಪ್​ನಲ್ಲಿ ಅಭಿನಯಿಸಲು ರಾಧಿಕಾ ತುಂಬ ಖುಷಿಯಿಂದ ಒಪ್ಪಿಕೊಂಡರು. ಒಂದು ಫೈಟಿಂಗ್ ಸನ್ನಿವೇಶದಲ್ಲೂ ಅವರು ನಟಿಸಲಿದ್ದಾರೆ.

| ಶ್ರೀ ಜೈ ನಿರ್ದೇಶಕ

Comments are closed.