ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ‘ಪೈಲ್ವಾನ್’ ಹೊಸ ದಾಖಲೆಯನ್ನು ಬರೆಯಲು ಮುಂದಾಗಿದೆ. ಇತ್ತೀಚೆಗೆ ತೆರೆಕಂಡ ಯಶ್ ಅಭಿನಯದ ಕೆಜಿಎಸ್ ಸಿನಿಮಾ ಟ್ರೇಲರ್ ಭಾರತೀಯ ಸಿನಿ ಲೋಕವೇ ಚಂದನನವದತ್ತ ನೋಡುವಂತೆ ಮಾಡಿದೆ. ಒಟ್ಟು ಐದು ಭಾಷೆಗಳಲ್ಲಿ ರಿಲೀಸ್ ಆಗಲಿರುವ ಕೆಜಿಎಫ್ ಹೊಸ ದಾಖಲೆಯನ್ನು ಬರೆದಿತ್ತು. ಇದೀಗ ಕನ್ನಡದ ಸ್ವಾತಿ ಮುತ್ತು ಅಭಿನಯದ ಪೈಲ್ವಾನ್ ಬರೋಬ್ಬರಿ ಎಂಟು ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿಗಳು ಗಾಂಧಿ ನಗರದ ಗಲ್ಲಿಗಳಲ್ಲಿ ಹರಿದಾಡುತ್ತಿವೆ.
ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಮಾಂಸಾಹಾರವನ್ನ ತ್ಯಜಿಸಿ ಮೈಕಟ್ಟನ್ನು ಹುರಿಗೊಳಿಸಿದ್ದಾರೆ. ಮೊದಲ ಬಾರಿಗೆ ಪೈಲ್ವಾನನಾಗಿ ಕಾಣಿಸಿಕೊಳ್ಳುತ್ತಿರುವ ಮಾಣಿಕ್ಯ ಚಿತ್ರದಲ್ಲಿ ಕುಸ್ತಿ ದೃಶ್ಯಗಳು ಇರಲಿವೆ. ಈ ಹಿಂದೆ ಪೈಲ್ವಾನ್ ಸೆಟ್ ಚಿತ್ರದ ಒಂದು ಫೋಟೋ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವುದರ ಜೊತೆ ಕುತೂಹಲವನ್ನು ಹೆಚ್ಚು ಮಾಡಿತ್ತು. ಈಗ ಕುಸ್ತಿ ಅಖಾಡದ ಫೋಟೋಗಳು ರಿವೀಲ್ ಆಗಿವೆ. ಚಿತ್ರೀಕರಣಕ್ಕಾಗಿ ಚಿತ್ರತಂಡ ಕುಸ್ತಿ ಅಖಾಡದ ಸೆಟ್ ನಿರ್ಮಾಣ ಮಾಡಿದೆ.
ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರಂತೆ. ಈಗಾಗಲೇ ಸುದೀಪ್ ಅಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಕಳೆದ 15 ದಿನಗಳಿಂದ ಹೈದರಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರಕ್ಕಾಗಿ ವಿಶೇಷವಾಗಿ 8 ಅದ್ಧೂರಿ ಸೆಟ್‍ಗಳನ್ನು ನಿರ್ಮಿಸಲಾಗಿದೆ. ಉತ್ತರ ಕರ್ನಾಟಕ ಶೈಲಿಯ ಅಖಾಡ ಸೇರಿದಂತೆ ಕುಸ್ತಿ ಸ್ಟೇಡಿಯಂ, ಮಾರುಕಟ್ಟೆ, ಮಧ್ಯಮ ವರ್ಗದ ಜನರು ವಾಸಿಸುವ ಪ್ರದೇಶದ ಸೆಟ್ ನಿರ್ಮಾಣ ಮಾಡಲಾಗಿದೆ. ಹಾಲಿವುಡ್ ಲಾರ್ನೆಲ್ ಸ್ಟೋವಲ್ ಸ್ಟಂಟ್ ಕೊರಿಯೋಗ್ರಾಫಿ ಇದೆ. ಡಿಸೆಂಬರ್ ಅಂತ್ಯದೊಳಗೆ ಚಿತ್ರದ ಟೀಸರ್ ಎಂಟು ಭಾಷೆಗಳಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ. ಇತ್ತ ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಕೃಷ್ಣ ಬೇರೆ ಭಾಷಾ ವಿತರಕರೊಂದಿಗೆ ಚರ್ಚೆಯಲ್ಲಿದ್ದಾರೆ.
Comments are closed.